ಶಿವಮೊಗ್ಗ: ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಸರ್ಕಾರದ ನಿರ್ಧಾರ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರವೂ ಪ್ರತ್ಯೇಕ, ವಿಭಿನ್ನ ಪ್ರತಿಭಟನೆ ನಡೆಸಿದರು.
ಅಣ್ಣಾ ಹಜಾರೆ ಹೋರಾಟ ಸಮಿತಿ:
ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ನೆಹರು ಕ್ರೀಡಾಂಗಣದ ಮುಂಭಾಗ ಪೋಸ್ಟ್ ಕಾರ್ಡ್ ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು. ನೂರಾರು ಜನರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಯೋಜನೆಗೆ ವಿರುದ್ಧ ಅಸಮಾಧಾನ ದಾಖಲಿಸಿದರು.
ಮಲೆನಾಡಿನಲ್ಲೇ ನೀರಿನ ಹಾಹಾಕಾರವಿದೆ. ಈಚಿನ ದಿನಗಳಲ್ಲಿ ಜಲಾಶಯಗಳಿಗೆ ನಿರೀಕ್ಷೆಯಷ್ಟು ನೀರು ಹರಿದು ಬಂದಿಲ್ಲ. ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವುದು ಅವೈಜ್ಞಾನಿಕ. ಅಲ್ಲಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿ ಮುಂಂಡರಾದ ಡಾ.ಎನ್.ಎಲ್.ನಾಯಕ್, ಡಾ.ಚಿಕ್ಕಸ್ವಾಮಿ, ಟಿ.ಎಂ.ಅಶೋಕ್‌ಯಾದವ್, ಅಜಯ್‌ಕುಮಾರ್ ಶರ್ಮಾ, ಜನಮೇಜಿರಾವ್, ಡಾ.ಸುಬ್ಬಣ್ಣ, ಬಾಬುರಾವ್, ರಮೇಶ್‌ಬಾಬು ಜಾದವ್, ಎಂ.ಎನ್.ಸುಂದರ್‌ರಾಜ್, ಜಿ.ವಿಜಯಕುಮಾರ್, ಎಸ್.ಬಿ.ಅಶೋಕ್‌ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅಲ್ವುದಾ ಸೋಷಿಯಲ್ ವೆಲ್ಫೇರ್ ಟ್ರಸ್ಟ್:
ಅಲ್ವುದಾ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಮುದ್ರ ಮಟ್ಟದಿಂದ 1,300 ಅಡಿ ಎತ್ತರಕ್ಕೆ ನೀರು ಹರಿಸುವುದು ವೆಚ್ಚದಾಯಕ. ಜಿಲ್ಲೆಯ ಜಲಮೂಲಗಳು ಬತ್ತಿ ಹೋಗಿರು ಈ ಸಮಯದಲ್ಲಿ ಜನರ ಆತಂಕ ಹೆಚ್ಚಾಗಿದೆ. ಯೋಜನೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿಸ್ಡಮ್ ಪ್ರೌಢಶಾಲೆ ಮಕ್ಕಳು ಪತ್ರ ಚಳವಳಿ ನಡೆಸಿದರು.ಆಡಳಿತ ಮಂಡಳಿಯ ಮೊಹಮದ್ ಇಲಿಯಾಸ್ ಶೇಕ್, ಮುಲ್ಲಾ ವಹಾಬ್ ಸಾಬ್, ಅಬ್ದುಲ್ ವಹಾಬ್, ಅಜಾಜ್, ಬಾಲು, ಅಶೋಕ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಜಿಲ್ಲಾ ಸ್ವಯಂ ಸೇವೆಗಳ ಒಕ್ಕೂಟ:
ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾ ಸ್ವಯಂ ಸೇವೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿದ್ಯುತ್ ಉತ್ಪಾದನೆಗೆ ಲಿಂಗನಮಕ್ಕಿ ಜಲಾಶಯ ಮೀಸಲಿಡಬೇಕು. ಈ ಯೋಜನೆ ಜಾರಿಯಾದರೂ ಬೆಂಗಳೂರಿನ ನೀರಿನ ದಾಹಕ್ಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಚರಂಡಿಗೆ ಬಿಡುತ್ತಿರುವ ನೀರು ಶುದ್ಧೀಕರಿಸಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಅಧ್ಯಕ್ಷ ಕೆ.ಸಿ.ಬಸವರಾಜ್, ಮುಖಂಡರಾದ ಜಿ.ಎಲ್.ಜನಾರ್ಧನ್, ಆರ್.ಟಿ.ನಟರಾಜ್, ಇಂದೂಧರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.