ADVERTISEMENT

ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಮತ್ತೆ ಮುನ್ನೆಲೆಗೆ...

ಎಂ.ರಾಘವೇಂದ್ರ
Published 18 ಜನವರಿ 2024, 5:37 IST
Last Updated 18 ಜನವರಿ 2024, 5:37 IST
<div class="paragraphs"><p>ಶರಾವತಿ ಕಣಿವೆ</p></div>

ಶರಾವತಿ ಕಣಿವೆ

   

ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯ ಹಳೆಯ ಪ್ರಸ್ತಾವಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಈಚೆಗೆ ನೀಡಿರುವ ಹೇಳಿಕೆಯಿಂದಾಗಿ ಮರುಜೀವ ಬಂದಿದೆ. ಇದು ತಾಲ್ಲೂಕಿನಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.

2019ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಯ ಡಿಪಿಆರ್‌ ಸಿದ್ದಪಡಿಸಿತ್ತು. ಆಗ ಮಲೆನಾಡಿನ ಜನ ಅದನ್ನು ವಿರೋಧಿಸಿದ್ದ ಆ ಪ್ರಸ್ತಾವನೆ ಸರ್ಕಾರ ಕೈಬಿಟ್ಟಿತ್ತು.

ADVERTISEMENT

‌‘ರಾಜ್ಯ ಸರ್ಕಾರ ಕೆಲವು ಷರತ್ತುಗಳಿಗೆ ಒಪ್ಪಿ ಮಲೆನಾಡಿಗೆ ಅಗತ್ಯವಿರುವ ಸೌಕರ್ಯ ನೀಡಲು ಮುಂದಾದರೆ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸಬಹುದು’ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಇತ್ತೀಚೆಗೆ ಹೇಳಿದ್ದಾರೆ. ಇದು ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಉತ್ಸುಕವಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.

ಸರ್ಕಾರ ಮತ್ತೊಮ್ಮೆ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದೆ ಎಂದು ಹೇಳಲಾಗಿದೆ. ಆದರೆ ಅದನ್ನು ಜಲಸಂಪನ್ಮೂಲ ಇಲಾಖೆ ಖಚಿತಪಡಿಸಿಲ್ಲ. 

ಸರ್ಕಾರ ಈ ಹಿಂದೆ ಸಿದ್ಧಪಡಿಸಿದ್ದ ಡಿಪಿಆರ್‌ನಲ್ಲಿ ಲಿಂಗನಮಕ್ಕಿಯಿಂದ ನೀರನ್ನೆತ್ತಿ ಹೊಸನಗರದ ಮಾಣಿ ಅಣೆಕಟ್ಟೆಗೆ ಸಾಗಿಸಿ, ಅಲ್ಲಿಂದ ಚಿಕ್ಕಮಗಳೂರಿನ ಯಗಚಿ ಜಲಾಶಯ ತಲುಪಿಸಿ, ಗೊರೂರು ಅಣೆಕಟ್ಟಿಗೆ ಕೊಂಡೊಯ್ದು, ಅಲ್ಲಿಂದ ಕೆಆರ್‌ಎಸ್ ಮೂಲಕ ಬೆಂಗಳೂರಿನ ಜನತೆಗೆ ಪೂರೈಸುವ ಪ್ರಸ್ತಾವ ಇತ್ತು.

ಮಲೆನಾಡಿಗರು ಬೆಂಗಳೂರಿನಲ್ಲಿ ವಾಸವಾಗಿದ್ದು, ಶರಾವತಿಯನ್ನು ಹರಿಸಲು ವಿರೋಧ ಯಾಕೆ ಎಂಬ ಧ್ವನಿಯೂ ಆಗ ಕೇಳಿಬಂದಿತ್ತು. ಮತ್ತೊಂದೆಡೆ, ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನೀರನ್ನು ಬೆಂಗಳೂರಿಗೆ ಸಾಗಿಸುವುದು ವೈಜ್ಞಾನಿಕವೂ, ಕಾರ್ಯಸಾಧುವೂ ಅಲ್ಲ ಎಂದು ಪರಿಸರವಾದಿಗಳು ವಾದಿಸಿದ್ದರು.

ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗುತ್ತದೆ. ಆದರೆ, ನೀರು ಇಂಗಲು ಅವಕಾಶವಿಲ್ಲ. ಅಲ್ಲಿನ ಸಾವಿರಾರು ಕೆರೆಗಳೂ  ಒತ್ತುವರಿಯಾಗಿವೆ. ಮಳೆ ನೀರನ್ನು ಇಂಗಿಸುವ ಜೊತೆಗೆ ಕೆರೆ ಒತ್ತುವರಿ ತೆರವುಗೊಳಿಸಿದರೆ ಬೆಂಗಳೂರು ನಗರಕ್ಕೆ ಬೇಕಾಗುಷ್ಟು ನೀರನ್ನು ಅಲ್ಲಿಂದಲೆ ಪಡೆಯಬಹುದು ಎಂಬ ವಾದವನ್ನೂ ಆಗ ಪರಿಸರ ವಾದಿಗಳು ಮಂಡಿಸಿದ್ದರು. 

ಬೆಂಗಳೂರಿಗೆ ಶರಾವತಿ ನೀರನ್ನು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆ ಬಂದ್ ಆಚರಿಸಿದ್ದರಿಂದ ಸರ್ಕಾರ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿನ ನೀರಿನ ಸಂಗ್ರಹ ಪ್ರಮಾಣವೂ ಕುಸಿಯುತ್ತಿದೆ. ಬರ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸರ್ಕಾರ ಮತ್ತೊಮ್ಮೆ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಗೆ ಮರುಜೀವ ನೀಡಿದೆ. ಇದು ಮಲೆನಾಡಿಗರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ವೈಜ್ಞಾನಿಕವಲ್ಲ. ಪರಿಸರಕ್ಕೆ ಮಾರಕ ಎನ್ನುವ ಕಾರಣದಿಂದಲೇ ಯೋಜನೆ ಹಿನ್ನಲೆಗೆ ಸರಿದಿತ್ತು. ಮತ್ತೊಮ್ಮೆ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾದರೆ ಹೋರಾಟ ನಡೆಸುವುದು ಅನಿವಾರ್ಯ.
ಅಖಿಲೇಶ್ ಚಿಪ್ಪಳಿ, ಪರಿಸರ ಕಾರ್ಯಕರ್ತ
ಮಡೆನೂರು ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾದವರಿಗೆ ಇನ್ನೂ ನ್ಯಾಯ ದೊರಕಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಜೀವಂತವಾಗಿದೆ. ಸರ್ಕಾರವು ಷರತ್ತಿನಡಿ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸಲು ಒಪ್ಪಿಗೆ ನೀಡುವ ಪ್ರಸ್ತಾವವೇ ಸರಿಯಲ್ಲ.
ನಾ.ಡಿಸೋಜ, ಸಾಹಿತಿ
ಸಾಗರದಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ವಿರೋಧಿಸಿ 2019ರ ಜುಲೈನಲ್ಲಿ ಶರಾವತಿ ನದಿ ಉಳಿಸಿ ಒಕ್ಕೂಟದ ವತಿಯಿಂದ ಹೊಸ ನಗರದಲ್ಲಿ ಪ್ರತಿಭಟನೆ ನಡೆದಿತ್ತು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.