ಹುಂಚದಕಟ್ಟೆ (ಕೋಣಂದೂರು): ಸಮೀಪದ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗೆಸ ಗ್ರಾಮದಲ್ಲಿ 6 ತಿಂಗಳ ಹಿಂದೆ ನಿರ್ಮಿಸಿರುವ ಸ್ವಚ್ಛ ಸಂಕೀರ್ಣವು ಉದ್ಘಾಟನೆಗೂ ಮೊದಲೇ ಕುಸಿದು ಬೀಳುವ ಆತಂಕ ಎದುರಾಗಿದೆ. ಕಳಪೆ ಕಾಮಗಾರಿಯಿಂದ ಸಂಕೀರ್ಣಕ್ಕೆ ಹಾಕಿದ ತಗಡಿನ ಶೀಟ್‌ಗಳು ಬೀಳುತ್ತಿವೆ.
ಹುಂಚದಕಟ್ಟೆಯಿಂದ ಒಂದೂವರೆ ಕಿ.ಮೀ. ದೂರದ ಮುನಿಯೂರು ಮತ್ತು ಕಂಚಿಗುಡ್ಡ ನಡುವೆ ಆನಗೆಸ ಗ್ರಾಮ ಇದೆ. ₹ 9 ಲಕ್ಷ ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಿಸಲಾಗಿದೆ. ಇಲ್ಲಿ ಈ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಕಸವನ್ನು ಹಾಕಿ ಒಣ ಹಾಗೂ ಹಸಿ ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತದೆ.
ಕಟ್ಟಡಕ್ಕೆ ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ. ಇದರಿಂದಾಗಿ ಹಿಂಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್‌ಗಳು ಹಾರುತ್ತಿವೆ. ಚಾವಣಿ ಈಗಾಗಲೇ ಬಿದ್ದು ಹೋಗಿದೆ. ಸಂಕೀರ್ಣಕ್ಕೆ ಅಳವಡಿಸಿರುವ ಜಾಲರಿ, ಶೀಟುಗಳು ಸಣ್ಣ ಪ್ರಮಾಣದ ಗಾಳಿಗೂ ಉದುರಿ ಬೀಳುತ್ತಿವೆ. 6 ತಿಂಗಳಲ್ಲೇ ಕಬ್ಬಿಣದ ಸರಳುಗಳ ಬಣ್ಣವೂ ಮಾಸಿದೆ ಎಂಬುದು ಗ್ರಾಮಸ್ಥರ ಆರೋಪ.
ಅಕೇಶಿಯಾ ಪ್ಲಾಂಟೇಶನ್ ನಡುವೆ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕ ಸುರಕ್ಷಿತವಾಗಿಲ್ಲ. ಅಕ್ಕ ಪಕ್ಕದಲ್ಲಿರುವ ಗಿಡಗಳನ್ನೂ ತೆರವುಗೊಳಿಸದೇ ಘಟಕ ನಿರ್ಮಿಸಲಾಗಿದೆ. ಇದು ಗುತ್ತಿಗೆದಾರರ ನಿರ್ಲಕ್ಷ್ಯ. ಕಾಮಗಾರಿಗೆ ಬಳಸಿದ ಕಬ್ಬಿಣ, ಮೆಸ್‌ಗಳು ಕಳಪೆಯಾಗಿವೆ. ಕಬ್ಬಿಣಕ್ಕೆ ಈಗಾಗಲೇ ತುಕ್ಕು ಹಿಡಿದಿದೆ ಎಂದೂ ಅವರು ದೂರಿದ್ದಾರೆ.
ಸ್ವಚ್ಛ ಸಂಕೀರ್ಣದ ಉದ್ಘಾಟನೆಗೂ ಗ್ರಾಮ ಪಂಚಾಯಿತಿ ಮನಸ್ಸು ಮಾಡುತ್ತಿಲ್ಲ. ಉದ್ಘಾಟನೆಗೂಮೊದಲೇ ಸಂಕೀರ್ಣ ಸಂಪೂರ್ಣವಾಗಿ ದುರಸ್ತಿಯಾಗಬೇಕು. ಆ ಮೂಲಕ ಸ್ವಚ್ಛ ಸಂಕೀರ್ಣ ಜನರ ಬಳಕೆಗೆ ಶೀಘ್ರ ಲಭ್ಯವಾಗಬೇಕು ಎಂದು ಒತ್ತಾಯಿಸುತ್ತಾರೆ ಉಮೇಶ್.
‘ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಗೆಸದಲ್ಲಿ ಸ್ಥಾಪಿಸಿರುವ ಸ್ವಚ್ಚ ಸಂಕೀರ್ಣ ಘಟಕದ ಮೇಲೆ ಅಕೇಶಿಯಾ ಮರ ಬಿದ್ದ ಪರಿಣಾಮ ಸೀಟುಗಳು ಬಿದ್ದಿವೆ. ಅವುಗಳನ್ನು ತಕ್ಷಣ ಸರಿಪಡಿಸುತ್ತೇವೆ. ಗೃಹ ಸಚಿವರ ಜೊತೆ ಮಾತನಾಡಿ ಉದ್ಘಾಟನೆಯ ದಿನಾಂಕವನ್ನು ನಿಗದಿ ಪಡಿಸುತ್ತೇವೆ’ ಎಂದು ಹುಂಚದಕಟ್ಟೆ ಪಿಡಿಒ ಷಣ್ಮುಖಪ್ಪ ತಿಳಿಸಿದರು.
...............
ಹುಂಚದಕಟ್ಟೆಯಲ್ಲಿ ಸ್ಥಾಪಿಸಲಾಗಿರುವ ಸ್ವಚ್ಛ ಸಂಕೀರ್ಣ ಶೀಘ್ರ ಜನರ ಉಪಯೋಗಕ್ಕೆ ಲಭ್ಯವಾಗಬೇಕು. ಗ್ರಾಮಸ್ಥರು ಆರೋಪಿಸುತ್ತಿರುವ ವಿಚಾರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
–ನಿಟ್ಟೂರು ಉಮೇಶ್, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.