ADVERTISEMENT

ಶಿಕಾರಿಪುರ: ಖಾಸಗಿ ಬಸ್‌ ಪ್ರಯಾಣಿಕರ ಸಂಖ್ಯೆ ಇಳಿಮುಖ, ಆತಂಕದಲ್ಲಿ ಮಾಲೀಕರು

‘ಶಕ್ತಿ’ ಯೋಜನೆ ಪರಿಣಾಮ; ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಮಹಿಳೆಯರ ದಂಡು

ಎಚ್.ಎಸ್.ರಘು
Published 18 ಜೂನ್ 2023, 0:00 IST
Last Updated 18 ಜೂನ್ 2023, 0:00 IST
ಶಿಕಾರಿಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್ ಹತ್ತುವಾಗ ನೂಕನುಗ್ಗಲು ಉಂಟಾಗಿರುವುದು
ಶಿಕಾರಿಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್ ಹತ್ತುವಾಗ ನೂಕನುಗ್ಗಲು ಉಂಟಾಗಿರುವುದು   

ಶಿಕಾರಿಪುರ: ‘ಶಕ್ತಿ’ ಯೋಜನೆಯ ಫಲಾನುಭವಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದು, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೇ ಮಾಲೀಕರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ 60 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚಿನ ಸಾರಿಗೆ ಸೇವೆಯನ್ನು ಖಾಸಗಿ ಬಸ್ ಮಾಲೀಕರು ನೀಡುತ್ತಾ ಬಂದಿದ್ದಾರೆ. ಪಟ್ಟಣದ ಬಿ.ಎಸ್. ಯಡಿಯೂರಪ್ಪ ಖಾಸಗಿ ಬಸ್ ನಿಲ್ದಾಣಕ್ಕೆ ನಿತ್ಯ 100ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಸ್ಥಳೀಯವಾಗಿ ಸುಮಾರು 50 ಖಾಸಗಿ ಬಸ್‌ಗಳನ್ನು ಹೊಂದಿದ ಮಾಲೀಕರು ಇದ್ದಾರೆ. ಲಾಭವಿರಲಿ, ಅಥವಾ ನಷ್ಟವಿರಲಿ, ಕೆಲವೊಮ್ಮೆ ಸಾಲ ಮಾಡಿಯಾದರೂ ಬಸ್ ಸೇವೆ ನೀಡಿದ ಉದಾಹರಣೆಗಳು ತಾಲ್ಲೂಕಿನಲ್ಲಿವೆ. 

‘ಶಕ್ತಿ’ ಯೋಜನೆ ಜಾರಿಗಿಂತ ಮೊದಲು ಶಿಕಾರಿಪುರ ಪಟ್ಟಣದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಬಸ್‌ಗಳನ್ನೇ ತಾಲ್ಲೂಕಿನ ಜನತೆ ಹೆಚ್ಚಾಗಿ  ಅವಲಂಬಿಸಿದ್ದರು. ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲ ವರ್ಗದ ಜನರು ಖಾಸಗಿ ಬಸ್‌ಗಳಲ್ಲೇ ಸಂಚಾರಿಸುತ್ತಿದ್ದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯಲ್ಲಿ ತಾಲ್ಲೂಕಿನ ಸಾರಿಗೆ ವಲಯದಲ್ಲಿ ಬದಲಾವಣೆ ತಂದಿದೆ. ಬಹುತೇಕ ಮಹಿಳೆಯರು ತಮ್ಮ ಸಂಚಾರವನ್ನು ಸರ್ಕಾರಿ ಬಸ್‌ಗಳಿಗೆ ಬದಲಿಸಿಕೊಂಡಿದ್ದಾರೆ. ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೂ, ಬಸ್ ಆಗಮಿಸುವವರೆಗೆ ನಿಲ್ದಾಣದಲ್ಲಿ ಕಾದು ಪ್ರಯಾಣ ಬೆಳೆಸುತ್ತಿರುವ ದೃಶ್ಯ ಕಾಣಸಿಗುತ್ತಿದೆ.

ADVERTISEMENT

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಬಸ್ ಹತ್ತುವ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿದರೂ ಯಾವುದಕ್ಕೂ ಜಗ್ಗದೇ ಮಹಿಳೆಯರು ಬಸ್ ಹತ್ತಿ ಪ್ರಯಾಣಿಸುತ್ತಿದ್ದಾರೆ. ಆದರೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ನಿಲ್ದಾಣದಲ್ಲಿ ಜನಸಂದಣಿ ಕಾಣ ಸಿಗುತ್ತಿಲ್ಲ.

ಜನರು ಬಾರದ ಕಾರಣ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಸ್‌ಗಳನ್ನು ಖರೀದಿಸಿದ ತಂದ ಬಸ್ ಮಾಲೀಕರು, ಸಾಲ ತೀರಿಸುವುದೇ ಹೇಗೆ ಎಂಬ ಆತಂಕದಲ್ಲಿದ್ದಾರೆ. ಖಾಸಗಿ ಬಸ್‌ ಮಾಲೀಕರು ವರ್ಷಕ್ಕೆ ಸುಮಾರು ₹2 ಲಕ್ಷ ರಸ್ತೆ ತೆರಿಗೆ, ₹70 ಸಾವಿರ ವಿಮೆ ಕಟ್ಟುತ್ತಿದ್ದಾರೆ. ಜನರು ಬರದೇ ಇರುವುದರಿಂದ, ತೆರಿಗೆ ಹಾಗೂ ವಿಮೆ ಕಟ್ಟಿ ಬಸ್ ವ್ಯವಹಾರ ನಡೆಸುವುದು ಕಷ್ಟ ಎಂಬ ಹಂತಕ್ಕೆ ಮಾಲೀಕರು ತಲುಪಿದ್ದಾರೆ. 

ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾದ ದೃಶ್ಯ.

ಖಾಸಗಿ ಬಸ್ ನಿಲ್ದಾಣದಲ್ಲಿ ವಹಿವಾಟು ಕುಸಿತ

ಬಹುತೇಕ ಮಹಿಳಾ ಪ್ರಯಾಣಿಕರು ವಿದ್ಯಾರ್ಥಿನಿಯರು ಸರ್ಕಾರಿ ಬಸ್‌ ನಿಲ್ದಾಣಕ್ಕೆ ತೆರಳುತ್ತಿರುವುದರಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ನಂಬಿಕೊಂಡು ಸಾವಿರಾರು ರೂಪಾಯಿ ಬಾಡಿಗೆ ಕಟ್ಟಿ ಹೋಟೆಲ್ ಬೇಕರಿ ಮೊಬೈಲ್ ಅಂಗಡಿ ಹಣ್ಣಿನ ಅಂಗಡಿ ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳನ್ನು ನಡೆಸುತ್ತಿರುವ ಮಾಲೀಕರು ವ್ಯಾಪಾರವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖಾಸಗಿ ಬಸ್ ವ್ಯವಹಾರ ನಡೆಸುತ್ತಿದ್ದೇವೆ. ‘ಶಕ್ತಿ’ ಯೋಜನೆಯಿಂದ ಖಾಸಗಿ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇದೇ ರೀತಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೇ ಬಸ್ ಓಡಿಸುವುದು ಕಷ್ಟವಾಗುತ್ತದೆ. ಖಾಸಗಿ ಬಸ್ ನಂಬಿಕೊಂಡಿರುವ ಖಾಸಗಿ ಬಸ್ ಮಾಲೀಕರು ಚಾಲಕ ಹಾಗೂ ಏಜೆಂಟರ ಕುಟುಂಬಗಳ ಬೀದಿ ಪಾಲಾಗುತ್ತವೆ.
–ಹರೀಶ್, ಖಾಸಗಿ ಬಸ್ ಮಾಲೀಕ
‘ಶಕ್ತಿ’ ಯೋಜನೆ ಅನುಸ್ಠಾನಕ್ಕೆ ಮೊದಲು ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಂದಣಿ ಇರುತ್ತಿತ್ತು. ನಮ್ಮ ಅಂಗಡಿಗಳಿಗೆ ಬಂದು ಪ್ರಯಾಣಿಕರು ವ್ಯಾಪಾರ ನಡೆಸುತ್ತಿದ್ದರು. ಶಕ್ತಿ ಯೋಜನೆ ಅನುಷ್ಠಾನವಾದ ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಅಂಗಡಿಗಳಲ್ಲಿ ವ್ಯಾಪಾರ ಕೂಡ ಕುಸಿತವಾಗಿದೆ. ಈಗೆ ವ್ಯಾಪಾರ ಕಡಿಮೆಯಾದರೇ ನಾವು ಸಾವಿರಾರು ರೂಪಾಯಿ ಪುರಸಭೆಗೆ ಕಟ್ಟಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ.
–ಶ್ರೀನಿವಾಸ್ ಬೇಕರಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.