ಶಿಕಾರಿಪುರ: ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಆ. 21ರಂದು ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ ಸ್ಥಾನದ ಗದ್ದುಗೆ ಏರಲು ಬಿಜೆಪಿ ಸದಸ್ಯರ ನಡುವೆಯೇ ಪೈಪೋಟಿ ಉಂಟಾಗಿದೆ.
2019ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 8 ಹಾಗೂ ಪಕ್ಷೇತರರು 3 ವಾರ್ಡ್‌ಗಳಲ್ಲಿ ವಿಜೇತರಾಗಿದ್ದರು. ಬಹುತೇಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯಲು ಮುಂದಾದ ಸಂದರ್ಭದಲ್ಲಿ ಮೂವರು ಪಕ್ಷೇತರರ ಅಭ್ಯರ್ಥಿಗಳಾದ ಜೀನಳ್ಳಿ ಪ್ರಶಾಂತ್, ಮೊಹಮದ್ ಸಾಧಿಕ್, ರೇಖಾಬಾಯಿ ಮಂಜುನಾಥ್ ಸಿಂಗ್ ಬೆಂಬಲದಿಂದ ಹಾಗೂ ಸಂಸದ ರಾಘವೇಂದ್ರ ಮತದಿಂದ ಬಿಜೆಪಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಲಭಿಸಿತ್ತು.
2020– 2023ರ ಅವಧಿಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮಿ ಮಹಾಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಮೊಹಮದ್ ಸಾದಿಕ್ ಆಯ್ಕೆಯಾಗಿ ಆಡಳಿತ ನಡೆಸಿದ್ದರು.
ಮೊದಲ ಅವಧಿಯ ಅಧ್ಯಕ್ಷ ಮೀಸಲಾತಿಯ ಎರಡೂವರೆ ವರ್ಷದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಉಮಾವತಿ, ರಮೇಶ್, ಜ್ಯೋತಿ ಸಿದ್ದಲಿಂಗಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮಾವತಿ, ರಮೇಶ್ ಗೆಲುವು ಸಾಧಿಸಿದ್ದರು. ಬಿಜೆಪಿಯ ಜ್ಯೋತಿ ಸಿದ್ದಲಿಂಗೇಶ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಶೈಲಾ ಮಡ್ಡಿ ಗೆಲುವು ಸಾಧಿಸಿದ್ದರು. ಉಪಚುನಾವಣೆ ಗೆಲುವಿನ ಮೂಲಕ ಬಿಜೆಪಿ ಪುರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಿತು. ನಂತರ ಪಕ್ಷೇತರ ಅಭ್ಯರ್ಥಿಯಾಗಿದ್ದ ಶೈಲಾ ಯೋಗೀಶ್ ಬಿಜೆಪಿ ಸೇರ್ಪಡೆಯಾಗಿ ಪುರಸಭೆ ಉಪಾಧ್ಯಕ್ಷರಾಗಿದ್ದರು.
2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. 21ರಂದು ಚುನಾವಣೆ ಘೋಷಣೆಯಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಕುಂಬಾರಗುಂಡಿ ವಾರ್ಡ್‌ನ ಬಿಜೆಪಿ ಸದಸ್ಯೆ ಸುನಂದಾ ಬಾಳೆಕಾಯಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ನಂತರ ಬಿಜೆಪಿ ಸೇರ್ಪಡೆಯಾಗಿ, ಉಪಾಧ್ಯಕ್ಷೆಯಾಗಿದ್ದ ಶೈಲಾ ಮಡ್ಡಿ ಮಧ್ಯೆ ನಡುವೆಯೇ ನೇರ ಪೈಪೋಟಿ ಏರ್ಪಟ್ಟಿದೆ. ಇಬ್ಬರು ಆಕಾಂಕ್ಷಿಗಳು ಅಧ್ಯಕ್ಷರಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮುಖಂಡರ ಸಭೆ ನಡೆದಿದೆ.
ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಚುನಾವಣೆ ನಡೆಯುವ ದಿನದಂದೇ (ಆ.21ರಂದು) ಬಿಜೆಪಿ ಕಚೇರಿಯಲ್ಲಿ ನಡೆಯುವ ಪ್ರಮುಖ ಮುಖಂಡರ ಸಭೆಯಲ್ಲಿ ಹೊರಬೀಳುವ ತೀರ್ಮಾನವೇ ಪ್ರಮುಖವಾಗಿದೆ. ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸಬಯಸಿದವರು ಯಾವುದೇ ಒತ್ತಡವನ್ನು ನಮ್ಮ ಮೇಲೆ ಹಾಕಿಲ್ಲ. ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಬಿ.ವೈ. ರಾಘವೇಂದ್ರ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.