ಶಿವಮೊಗ್ಗ: ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕೊಟ್ಟಿರುವ ಪರವಾನಗಿ ಸೆಪ್ಟೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ.
ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಮಾನದಂಡಗಳ ಅಳವಡಿಕೆಯಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಪರವಾನಗಿ ನವೀಕರಿಸಲು ಡಿಜಿಸಿಎ ಆಸಕ್ತಿ ತೋರುತ್ತಿಲ್ಲ. ಮುಂದೇನು ಎಂಬುದು ಪ್ರಶ್ನೆಯಾಗಿದೆ.
ಸೋಗಾನೆಯಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಈ ಹಿಂದೆ ನೀಡಿದ್ದ ಒಂದು ವರ್ಷದ ಅವಧಿಯ ಪರವಾನಗಿ ಕಳೆದ ಆಗಸ್ಟ್ 23ಕ್ಕೆ ಮುಕ್ತಾಯಗೊಂಡಿದೆ. ಆದರೆ ಡಿಜಿಸಿಎ ಈ ಹಿಂದಿನಂತೆ ಒಂದು ವರ್ಷದ ಅವಧಿಗೆ ಪರವಾನಗಿ ವಿಸ್ತರಿಸದೇ ಬರೀ ಒಂದು ತಿಂಗಳು ಮಾತ್ರ ವಿಸ್ತರಿಸಿದೆ. ಆ ಅವಧಿಯೂ ಮುಕ್ತಾಯಗೊಂಡರೆ ಮಲೆನಾಡಿನಿಂದ ಲೋಹದ ಹಕ್ಕಿಗಳ ಹಾರಾಟದ ಕಾರ್ಯಾಚರಣೆಯ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಕೆಎಸ್‌ಐಐಡಿಸಿ ನಿರ್ವಹಣೆಯ ಹೊಣೆ ಹೊತ್ತಿರುವ ಮೊದಲ ವಿಮಾನ ನಿಲ್ದಾಣ ಎಂಬ ಶ್ರೇಯ ಶಿವಮೊಗ್ಗಕ್ಕಿದೆ. ಇಲ್ಲಿಂದ ವಿಮಾನ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತುಗಳ ಹಾಕಿತ್ತು. ಅವುಗಳನ್ನು ಕೆಎಸ್‌ಐಐಡಿಸಿ ಸಂಪೂರ್ಣ ಪೂರೈಸಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳುತ್ತವೆ.
ರನ್‌ವೇ ಸುರಕ್ಷತಾ ಪ್ರದೇಶವು ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದನ್ನು ಡಿಜಿಸಿಎ ಗಮನಿಸಿದೆ. ರಕ್ಷಣಾ ಸಾಧನಗಳ ಖರೀದಿ ವಿಳಂಬವಾಗಿದೆ. ಅಗ್ನಿ ಸುರಕ್ಷತೆ ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿ ಹಾಗೂ ತಂತ್ರಜ್ಞ ಇಲ್ಲ. ಸಮವಸ್ತ್ರ ಕೊಟ್ಟಿಲ್ಲ. ಕ್ವಿಕ್ ರಿಯಾಕ್ಷನ್ ಟೀಮ್ (ಕ್ಯೂಆರ್‌ಟಿ) ಇಲ್ಲದಿರುವುದನ್ನು ಇದು ಗಮನಿಸಿದೆ ಮತ್ತು ಭದ್ರತಾ ಸಿಬ್ಬಂದಿಯ ಸಂಖ್ಯೆಯೂ ಸಾಕಾಗುವುದಿಲ್ಲ. ಪರವಾನಗಿಯನ್ನು ನಿಯಮಾವಳಿಯಂತೆ ವರ್ಷದ ಅವಧಿಗೆ ನವೀಕರಿಸಲು ಈ ವ್ಯವಸ್ಥೆಗಳನ್ನು ಮಾಡುವಂತೆ ಕೆಎಸ್‌ಐಐಡಿಸಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಮಾನ ಹಾರಾಟಕ್ಕೆ ಡಿಜಿಸಿಎ ಕೇವಲ ಒಂದು ತಿಂಗಳಿಗೆ ಪರವಾನಗಿ ನವೀಕರಣ ಮಾಡಿರುವುದು ನಿಜ. ಅದು ನಿಗದಿಪಡಿಸಿರುವ ಮಾನದಂಡದ ಅನ್ವಯ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಹಾಗೂ ಭದ್ರತಾ ಸವಲತ್ತುಗಳನ್ನು ಕಲ್ಪಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯನ್ನು ಈಚೆಗೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರು ಸಮಸ್ಯೆ ಪರಿಹರಿಸಲು ಮುಂದಾಗುವ ವಿಶ್ವಾಸವಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಪರವಾನಗಿ ವಿಸ್ತರಣೆಗೆ ಡಿಜಿಸಿಎ ಗಮನಿಸಿದ ಸಮಸ್ಯೆಗಳು ಚಿಕ್ಕದಾಗಿವೆ. ಅದಕ್ಕೆ ಬಹಳ ಹಣ ವ್ಯಯಿಸಬೇಕಿಲ್ಲ. ಕೆಎಸ್‌ಐಐಡಿಸಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದಲ್ಲಿ ಸಮಸ್ಯೆ ಈ ಹಂತದಲ್ಲಿಯೇ ಪರಿಹಾರವಾಗಲಿದೆ. ನಿರ್ಲಕ್ಷ್ಯ ವಹಿಸುವುದು ಸಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.