ADVERTISEMENT

ಸಾಂಬಾರು ಪದಾರ್ಥ ಬೆಳೆದು ‘ಸೈ’ ಎನ್ನಿಸಿಕೊಂಡ ರೈತ

ಮಲೆನಾಡಲ್ಲಿ ಬಹುಬೆಳೆಯಿಂದ ಯಶ ಸಾಧಿಸಿದ ದತ್ತಾತ್ರೇಯ ಅಡಿಗ

ರವಿ ನಾಗರಕೊಡಿಗೆ
Published 19 ಅಕ್ಟೋಬರ್ 2022, 4:39 IST
Last Updated 19 ಅಕ್ಟೋಬರ್ 2022, 4:39 IST
ಏಲಕ್ಕಿ
ಏಲಕ್ಕಿ   

ಹೊಸನಗರ: ರೈತರು ಒಂದೇ ಬೆಳೆಯನ್ನು ನಂಬದೇ ಬಹುಬೆಳೆ ಬೆಳೆಯುವತ್ತ ಆಸಕ್ತಿ ತಾಳಬೇಕು ಎಂಬ ಮಾತುಗಳು ಈಚೆಗೆ ಸಾಮಾನ್ಯವಾಗಿ ಕೇಳಿಬರುತ್ತಿವೆ. ಅಂತೆಯೇ, ಇಲ್ಲಿನ ಹನಿಯ ದತ್ತಾತ್ರೇಯ ಅಡಿಗ ಅವರು ಅಡಿಕೆಯ ಜೊತೆಜೊತೆಗೆ ವಿವಿಧ ಬೆಳೆಬೆಳೆದು ಯಶಸ್ಸು ಸಾಧಿಸಿದ್ದಾರೆ.

ಕೇವಲ ಅಡಿಕೆ ತೋಟವನ್ನು ನಂಬಿ ಕೂರದೇ ಹತ್ತಾರು ಬೆಳೆ ಬೆಳೆದು ಅದರಲ್ಲಿ ಏನನ್ನಾದರೂ ಸಾಧಿಸಬೇಕು
ಎಂಬ ಛಲ ಇವರ ಯಶಸ್ಸಿಗೆ ಪ್ರೇರಣೆಯಾಗಿದೆ.

ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ, ಬಾಳೆ ಬೆಳೆಯುವುದು ಸಾಮಾನ್ಯ. ಆದರೆ, ಇವರು ತಮ್ಮ ತೋಟದಲ್ಲಿ ಸಾಂಬಾರು ಪದಾರ್ಥ ಬೆಳೆಯಲು ಆಸಕ್ತಿ ತಾಳಿ, ಏಲಕ್ಕಿ, ಕಾಳುಮೆಣಸು, ಲವಂಗ, ಜಾಯಿಕಾಯಿ, ಜಾಯಿಪತ್ರೆ, ಚಕ್ಕೆ ಮತ್ತಿತರ ಬೆಳೆಬೆಳೆದು ಮಲೆನಾಡು ಸಾಂಬಾರು ಪದಾರ್ಥಕ್ಕೆ ಸೂಕ್ತ ಪ್ರದೇಶ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ADVERTISEMENT

ಮಲೆನಾಡಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿ ಬೆಳೆಯುವುದು ಕಷ್ಟಕರ. ಮಂಗ, ಇಲಿ, ಅಳಿಲುಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸ. ಆದರೆ ದತ್ತಾತ್ರೇಯ ಅವರು ಒಂದು ಎಕರೆ ಅಡಿಕೆ ತೋಟದಲ್ಲಿ ಹಂತಹಂತವಾಗಿ 200ಕ್ಕೂ ಹೆಚ್ಚು ಏಲಕ್ಕಿ ಗಿಡ ನೆಟ್ಟು ಪೋಷಿಸಿದ್ದಾರೆ. ಒಂದೊಂದು ಮಟ್ಟಿಯಲ್ಲಿ ಸುಮಾರು 350 ಗ್ರಾಂ ಒಣ ಏಲಕ್ಕಿ ಲಭ್ಯವಾಗಿ 80 ಕೆ.ಜಿ.ಗೂ ಹೆಚ್ಚು
ಏಲಕ್ಕಿ ಪಡೆಯುತ್ತಿದ್ದಾರೆ.

ಮಲೆನಾಡಲ್ಲಿ ಏಲಕ್ಕಿ ಬೆಳೆಯಿಂದ ವಿಮುಖರಾಗುತ್ತಿರುವ ರೈತರಿಗೆ ಇವರು ಮಾದರಿಯಾಗಿದ್ದಾರೆ. ‘ಏಲಕ್ಕಿಗೆ ಕೆಲಸ ಜಾಸ್ತಿ. ಹೆಚ್ಚಿನ ಆರೈಕೆ ಬೇಕು. ಮಳೆಗಾಲದಲ್ಲಿ ಕರೆ ಕಟ್ಟುವುದರಿಂದ ಪ್ರಾಣಿ ಕಾಟದಿಂದ ಕಾಯುವುದು ದುಸ್ತರ’ ಎನ್ನುವ ಇವರು, ಸ್ಥಳೀಯ ತಳಿಯ ಜೊತೆಗೆ ಕೇರಳದ ‘ನೆಲ್ಲಾಡಿ’ ತಳಿ ಅಭಿವೃದ್ಧಿ ಪಡಿಸಿದ್ದಾರೆ.

‘ಏಲಕ್ಕಿಯನ್ನು ಸಕಾಲದಲ್ಲಿ ಆರೈಕೆ ಮಾಡಿದರೆ ಸುಲಭದಲ್ಲಿ ಕೈಗೂಡುತ್ತದೆ. ನಮ್ಮ ಬೆಳೆ ನೋಡಲು ಬಂದ ಕೊಪ್ಪದ ಸ್ಪೈಸ್ ಬೋರ್ಡ್‌ನವರು ಮೆಚ್ಚುಗೆ ಸೂಚಿಸಿದ್ದು ಸಮಾಧಾನ ತಂದಿದೆ’ ಎಂದು ಇವರು ಸಲಹೆ ನೀಡುತ್ತಾರೆ.

ಸಸಿ ಕಸಿ: ಇರ ತೋಟದಲ್ಲಿ ಪಣಿಯೂರು 1, ಪಣಿಯೂರು 2, ಮಲ್ಲಿಗೆಸರ, ಕರಿಮುಂಡ ಎಂಬ ನಾಲ್ಕು ವಿಧದ ಕಾಳುಮೆಣಸು ತಳಿಗಳನ್ನು ಕಾಣಬಹುದು.

ಕಾಳುಮೆಣಸು ಬೆಳೆಯುವುದಷ್ಟೇ ಅಲ್ಲ ಕಾಳುಮೆಣಸು ಸಸಿಯನ್ನು ಕಸಿ ಮಾಡುವಲ್ಲಿ ಹೊಸ ಪ್ರಯೋಗವನ್ನೇ ಮಾಡಿ ಸೈ ಎನಿಸಿಕೊಂಡಿರುವ ಇವರು, ‘ಬಳ್ಳಿ ನೆಟ್ಟರೆ ಬೇಗ ಫಸಲು ಕಾಣಲು ಸಾಧ್ಯವಿಲ್ಲ. ಸಸಿಯನ್ನು ಕಸಿ ಮಾಡಿದರೆ ಬಲುಬೇಗ ಫಸಲು ಕಾಣಬಹುದು. ಸಸಿಗೆ ಕಸಿ ಕಟ್ಟಿ ಅದನ್ನು ಪಾಲಿಥಿನ್ ಚೀಲದಲ್ಲಿಟ್ಟು ಪೋಷಿಸಬೇಕು. ಸೂಕ್ತ ಹವಾಮಾನ ಲಭ್ಯವಾಗಿ ಸಸಿ
ಬಲುಬೇಗ ಬೆಳವಣಿಗೆ ಕಂಡು ಹುಲುಸಾಗಿ ಬೆಳೆಯುತ್ತದೆ. ನಂತರ ಅಡಿಕೆ ಮರಕ್ಕೆ ಹಚ್ಚಿ ಎರಡು ವರ್ಷಗಳಲ್ಲೇ ಫಸಲು ಕಾಣಬಹುದು’ ಎಂದು ಹೇಳುತ್ತಾರೆ.

ಹಣ್ಣಿನ ಗಿಡಗಳು: ದತ್ತಾತ್ರೇಯ ಅಡಿಗ ಅವರು ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಇವರ ತೋಟದಲ್ಲಿ ಎಗ್‌ ಫ್ರೂಟ್, ಮಾಂಗೋಸ್ಟಿನ್, ಕಾಮರಾಕ್ಷಿ, ಅಂಜೂರ, ಲಿಚ್ಚಿ, ಹನುಮಾನ್ ಫಲ, ಬೆಣ್ಣೆ ಹಣ್ಣು, ವಿಟಮಿನ್ ಹಣ್ಣು ವಿಶೇಷವಾಗಿದೆ. ಮಲೆನಾಡಲ್ಲಿ ತಾಳೆ ಬೆಳೆಯವುದು ಅಪರೂಪ. ಇವರು ತಮ್ಮ ಜಮೀನಿನಲ್ಲಿ ತಾಳೆ, ತೆಂಗು ಬೆಳೆದು ಇತರರಿಗೆ ಪ್ರೇರಣೆಯಾಗಿದ್ದಾರೆ.

ಇಳಿ ವಯಸ್ಸಿನಲ್ಲೂ ಸಮಾಜಮುಖಿ ಚಿಂತನೆ ಹೊಂದಿರುವ ಇವರು, ಸ್ಥಳೀಯವಾಗಿ ನಡೆಯುವ ಅನ್ಯಾಯ, ಅಕ್ರಮಗಳ ವಿರುದ್ಧ ದನಿ ಎತ್ತುವ ಛಾತಿ ಉಳ್ಳವರು. ಹೊಸನಗರದಿಂದ ಪ್ರಕಟವಾಗುತ್ತಿದ್ದ ‘ತುಲಾ’ ಪತ್ರಿಕೆಯ ಸಂಪಾದಕರಾಗಿದ್ದವರು.

......

ರೈತರು ಸಣ್ಣ ಪ್ರಮಾಣದಲ್ಲಾದರೂ ಏಲಕ್ಕಿ, ಕಾಳುಮೆಣಸು ಮತ್ತಿತರ ಸಾಂಬಾರು ಪದಾರ್ಥ ಬೆಳೆಯಲು ಮುಂದಾಗಬೇಕು. ಇದು ಉತ್ತಮ ಲಾಭ ತಂದುಕೊಡುತ್ತದೆ. –ದತ್ತಾತ್ರೇಯ ಅಡಿಗ, ಕೃಷಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.