ADVERTISEMENT

ಶಿವಮೊಗ್ಗ | ಅನುಮತಿ ಇಲ್ಲದೇ ಮೆರವಣಿಗೆ: ಪ್ರಕರಣ

ಮೃತ ಹರ್ಷ ಮನೆಗೆ ಗಣ್ಯರ ದಂಡು, ಸಾಂತ್ವನ l ಪ್ರಮುಖ ಬೀದಿಗಳಲ್ಲಿ ಆರ್‌ಎಎಫ್‌ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 20:52 IST
Last Updated 22 ಫೆಬ್ರುವರಿ 2022, 20:52 IST
ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಮಂಗಳವಾರ ಕ್ಷಿಪ್ರ ಕಾರ್ಯ ಪಡೆ ನಿಯೋಜಿಸಲಾಗಿತ್ತು–ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್.
ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಮಂಗಳವಾರ ಕ್ಷಿಪ್ರ ಕಾರ್ಯ ಪಡೆ ನಿಯೋಜಿಸಲಾಗಿತ್ತು–ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್.   

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿಯನ್ನೇ ನೀಡಿರಲಿಲ್ಲ ಎನ್ನುವ ವಿಷಯ ಹೊಸತಿರುವು ಪಡೆದಿದೆ. ಅನುಮತಿ ಇಲ್ಲದೇ ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾರ್ಥಿವ ಶರೀರದ ಮೆರವಣಿಗೆ ಸೋಮವಾರ ಸೀಗೆಹಟ್ಟಿಯಿಂದ ಆರಂಭವಾಗಿ ಕುಂಬಾರಬೀದಿ, ಸಿದ್ದಯ್ಯರಸ್ತೆ, ಗಾಂಧಿ ಬಜಾರ್, ಬಿ.ಎಚ್‌. ರಸ್ತೆಯ ಮೂಲಕ ವಿದ್ಯಾನಗರದ ರೋಟರಿ ಚಿತಾಗಾರ ತಲುಪಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಹಲವು ಮುಖಂಡರು ಭಾಗವಹಿಸಿದ್ದರು. ಈ ಸಮಯದಲ್ಲಿ ದಾರಿಯುದ್ದಕ್ಕೂ ಸಿಕ್ಕ ಮನೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಂಗಡಿಗಳನ್ನು ಹಾಳುಗೆಡವಲಾಗಿತ್ತು. ಬೈಕ್‌ಗಳು, ಆಟೊರಿಕ್ಷಾಗಳಿಗೆ ಬೆಂಕಿ ಹಚ್ಚಲಾಗಿತ್ತು. ಕಾರುಗಳನ್ನು ಜಖಂಗೊಳಿಸಲಾಗಿತ್ತು. ಗಲಭೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ದೊಡ್ಡಪೇಟೆ, ಕೋಟೆ ಒಳಗೊಂಡಂತೆ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು
ದಾಖಲಾಗಿವೆ.

ಹರ್ಷ ಮನೆಗೆ ಗಣ್ಯರ ದಂಡು: ಮೃತ ಹರ್ಷ ಅವರ ಮನೆಗೆ ಮಂಗಳವಾರ ಹಲವು ಗಣ್ಯರು, ಮಠಾಧೀಶರು ಭೇಟಿ ನೀಡಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ADVERTISEMENT

ಬಿಜೆಪಿ ಮುಖಂಡರಾದ ಜೀವರಾಜ್‌, ಉಡುಪಿಯ ಯಶ್‌ಪಾಲ್ ಸುವರ್ಣ, ಬೆಜ್ಜುವಳ್ಳಿ ಮಠದ ಸಂತೋಷ್‌ ಗುರೂಜಿ, ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು.

ಸಹಜ ಸ್ಥಿತಿಯತ್ತ ಶಿವಮೊಗ್ಗ: ಅಂತ್ಯಸಂಸ್ಕಾರದ ನಂತರ ರಾತ್ರಿ ಟಿಪ್ಪುನಗರ, ಕೊರಮರಕೇರಿ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಮೂರು ಆಟೊರಿಕ್ಷಗಳು, ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ನಂತರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹಳೇ ಶಿವಮೊಗ್ಗ ಭಾಗ ಸಂಪೂರ್ಣ ಬಂದ್‌ ಆಗಿತ್ತು. ಉಳಿದೆಡೆ ವ್ಯಾಪಾರ ವಹಿವಾಟು, ಜನ ಜೀವನ ಎಂದಿನಂತೆ ಇತ್ತು. ಬಸ್‌ಗಳ ಸಂಚಾರ ವಿರಳವಾಗಿತ್ತು. ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಆಟೊರಿಕ್ಷಗಳ ಸೇವೆ ಲಭ್ಯವಿತ್ತು.

ಬಿಗಿ ಬಂದೋಬಸ್ತ್‌: ಪೂರ್ವವಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರು, ಭದ್ರಾವತಿಯಿಂದ ಕ್ಷಿಪ್ರ ಕಾರ್ಯಪಡೆಯ ತುಕಡಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕರೆಸಿಕೊಳ್ಳಲಾಗಿದೆ. ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕ ಪಡೆ ನಿಯೋಜಿಸಲಾಗಿದೆ. ರಾಜ್ಯದ ಪ್ರಮುಖ ಪೊಲೀಸ್‌ ಅಧಿಕಾರಿಗಳು ನಗರದಲ್ಲೇ ಬೀಡುಬಿಟ್ಟಿದ್ದು ಸ್ಥಳೀಯ ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

2 ದಿನ ಕರ್ಫ್ಯೂ; ಶಾಲೆ–ಕಾಲೇಜಿಗೆ ರಜೆ

ಪರಿಸ್ಥಿತಿ ಹತೋಟಿಯಲ್ಲಿದ್ದರೂ ಸೋಮವಾರ ರಾತ್ರಿ ಕಿಡಿಗೇಡಿಗಳು ಮತ್ತೆ ಐದು ವಾಹನಗಳಿಗೆ ಬೆಂಕಿ ಹಚ್ಚಿರುವ ಕಾರಣ ಶಿವಮೊಗ್ಗ ನಗರದಲ್ಲಿ ಫೆ.22ರ ರಾತ್ರಿಯಿಂದ ಫೆ.24ರ ಬೆಳಿಗ್ಗೆ 6ರವರೆಗೆ ಎರಡು ದಿನ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದರು.

‘ಅಪ್ಪ, ಅಮ್ಮನಿಗೆ ಒಳ್ಳೆಯ ಮಕ್ಕಳಾಗಿ’

ಶಿವಮೊಗ್ಗ: ಮೃತ ಹರ್ಷ ಅವರ ಸಹೋದರಿ ಅಶ್ವಿನಿ ಮಾಧ್ಯಮಗಳ ಮೂಲಕ ಯುವ ಜನರಿಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನರು ಹಂಚಿಕೊಂಡಿದ್ದಾರೆ.

‘ಹಿಂದೂ, ಹಿಂದುತ್ವ ಎಂದಿದ್ದಕ್ಕೆ ಇಂದು ನನ್ನ ತಮ್ಮನಿಗೆ ಇಂತಹ ಸ್ಥಿತಿ ಬಂದಿದೆ. ದಯವಿಟ್ಟು ಎಲ್ಲರೂ ಒಂದು ಸಲ ನೋಡಿ. ಎಲ್ಲ ನನ್ನ ಅಣ್ಣ–ತಮ್ಮಂದಿರಿಗೆ ಕೈಮುಗಿದು ಬೇಡಿಕೊಳ್ಳುತ್ತೇನೆ. ಹಿಂದೂಗಳು, ಮುಸ್ಲಿಮರಿಗೂ ಬೇಡಿಕೊಳ್ಳುತ್ತೇನೆ. ನಿಮ್ಮ ಅಪ್ಪ– ಅಮ್ಮನಿಗೆ ಒಳ್ಳೆಯ ಮಕ್ಕಳಾಗಿರಿ. ಇದೆಲ್ಲ ಮಾಡಲು ಹೋಗಬೇಡಿ’ ಎಂದು ಯುವ ಸಮೂಹಕ್ಕೆ ಅಶ್ವಿನಿ ಮನವಿ ಮಾಡಿದ್ದಾರೆ.

‘ಪೊಲೀಸರು ಸದಾ ದೂಷಿಸುತ್ತಿದ್ದರು’

‘ಮಗನಿಗೆ ಬೆದರಿಕೆ ಇರುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೆವು. ಅವರು ಯಾವುದೇ ರಕ್ಷಣೆ ನೀಡಿರಲಿಲ್ಲ. ಬದಲಿಗೆ ಎಂಥ ಮಗನಿಗೆ ಜನ್ಮ ನೀಡಿರುವೆ ಎಂದು ಸದಾ ದೂಷಿಸುತ್ತಿದ್ದರು’ ಎಂದು ಮೃತ ಹರ್ಷನ ತಾಯಿ ಪದ್ಮ ಅಳಲು ತೋಡಿಕೊಂಡರು.

‘ನಗರದಲ್ಲಿ ಎಲ್ಲಿ ಗಲಾಟೆಯಾದರೂ ಬೆಳಗಿನ ಜಾವ ಅವನನ್ನು ಹುಡುಕಿಕೊಂಡು ಬರುತ್ತಿದ್ದರು. ಎಂಥ ಮಗ ಇವನು, ಉದ್ಧಾರ ಆಗುವುದಿಲ್ಲ ಎಂದು ಬೈದು ಹೋಗುತ್ತಿದ್ದರು. ಆದರೂ ಮಗ ದೇಶಕ್ಕಾಗಿ ಇದೆಲ್ಲ ಮಾಡುತ್ತಿದ್ದಾನೆ ಎಂದು ಸುಮ್ಮನೆ ಇರುತ್ತಿದ್ದೆವು’ ಎಂದು ಭಾವುಕರಾದರು.

3 ವರ್ಷಗಳಲ್ಲಿ 63 ಕೋಮು ಹಿಂಸಾಚಾರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 63 ಕೋಮು ಹಿಂಸಾಚಾರ ಪ್ರಕರಣಗಳು ನಡೆದಿದ್ದು, ಯಾವುದೇ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ ಎಂದು ಸರ್ಕಾರ ಹೇಳಿದೆ. ಇವುಗಳಲ್ಲಿ ಬಹುಪಾಲು ಪ್ರಕರಣಗಳು ವಿವಿಧ ಹಂತದ ತನಿಖೆ ಮತ್ತು ನ್ಯಾಯಾಯಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿದ್ದಾರೆ.

2019ರಲ್ಲಿ 12 ಪ್ರಕರಣಗಳು, 2020ರಲ್ಲಿ 21 ಪ್ರಕರಣಗಳು ಮತ್ತು 2021ರಲ್ಲಿ 23 ಪ್ರಕರಣಗಳು ನಡೆದಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಏಳು ಪ್ರಕರಣಗಳು ವರದಿಯಾಗಿವೆ.

₹ 5 ಲಕ್ಷ ಘೋಷಣೆ

ಹೊನ್ನಾಳಿ: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬದವರಿಗೆ ವೈಯಕ್ತಿಕವಾಗಿ ₹ 5 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಘೋಷಿಸಿದ್ದಾರೆ.

ಹೊನ್ನಾಳಿ ತಾಲ್ಲೂಕು ಬಿಜೆಪಿ ಮುಖಂಡರು ₹ 1 ಲಕ್ಷ ನೀಡಲಿದ್ದು, ಒಟ್ಟು ₹ 6 ಲಕ್ಷ ನೀಡಲಾಗುವುದು ಎಂದು ರೇಣುಕಾಚಾರ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

* ಪಾರ್ಥಿವ ಶರೀರದ ಮೆರವಣಿಗೆಗೆ ಜಿಲ್ಲಾಡಳಿತ ಯಾವುದೇ ಅನುಮತಿ ನೀಡಿರಲಿಲ್ಲ. ಅನುಮತಿ ಪಡೆಯದೇ ಮೆರವಣಿಗೆ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

–ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ

* ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲಾಗುವುದು.

–ಪ್ರತಾಪ್‌ ರೆಡ್ಡಿ, ಎಡಿಜಿಪಿ, ರಾಜ್ಯ ಕಾನೂನು ಸುವ್ಯವಸ್ಥೆ

* ಹಿಂದೂಗಳ ಮತ ಪಡೆದು ಆಯ್ಕೆಯಾಗಿರುವ ರಾಜ್ಯದ ಎಲ್ಲ ಶಾಸಕರು, ಸಂಸದರು ತಮ್ಮ ಒಂದು ದಿನದ ವೇತನವನ್ನು ಮೃತ ಹರ್ಷ ಅವರ ಕುಟುಂಬಕ್ಕೆ ನೀಡಬೇಕು. ಸಮಾಜದ ಋಣ ತೀರಿಸಬೇಕು.

–ಸಂತೋಷ್‌ ಗುರೂಜಿ, ಬೆಜ್ಜುವಳ್ಳಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.