ADVERTISEMENT

ದೇಶದ ಪರಿಪೂರ್ಣ ಕಲ್ಪನೆ ತ್ರಿವರ್ಣ ಧ್ವಜದಲ್ಲಿದೆ

ಗರ್ಕು ಕಾದಂಬರಿ ಬಿಡುಗಡೆ ಮಾಡಿದ ಡಾ. ಮೊಗಳ್ಳಿ ಗಣೇಶ್

​ಪ್ರಜಾವಾಣಿ ವಾರ್ತೆ
Published 30 ಮೇ 2022, 3:57 IST
Last Updated 30 ಮೇ 2022, 3:57 IST
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಲೇಖಕ ಶಿವಾನಂದ ಕರ್ಕಿ ಅವರ ‘ಗರ್ಕು’ ಕಾದಂಬರಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್‌ ಬಿಡುಗಡೆ ಮಾಡಿದರು. ಚಿಂತಕ ನೆಂಪೆ ದೇವರಾಜ್‌, ದೇಸಿ ಸಂಸ್ಕೃತಿ ಚಿಂತಕ ಸುಧೀರ್‌ ಕುಮಾರ್‌ ಮುರೊಳ್ಳಿ, ಲೇಖಕ ಶಿವಾನಂದ ಕರ್ಕಿ, ಸಾಹಿತಿ ಜೆ.ಕೆ. ರಮೇಶ್‌, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಇದ್ದರು.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಲೇಖಕ ಶಿವಾನಂದ ಕರ್ಕಿ ಅವರ ‘ಗರ್ಕು’ ಕಾದಂಬರಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್‌ ಬಿಡುಗಡೆ ಮಾಡಿದರು. ಚಿಂತಕ ನೆಂಪೆ ದೇವರಾಜ್‌, ದೇಸಿ ಸಂಸ್ಕೃತಿ ಚಿಂತಕ ಸುಧೀರ್‌ ಕುಮಾರ್‌ ಮುರೊಳ್ಳಿ, ಲೇಖಕ ಶಿವಾನಂದ ಕರ್ಕಿ, ಸಾಹಿತಿ ಜೆ.ಕೆ. ರಮೇಶ್‌, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಇದ್ದರು.   

ತೀರ್ಥಹಳ್ಳಿ: ಭಾರತದ ತ್ರಿವರ್ಣ ಧ್ವಜದಲ್ಲಿ ದಮನಿತರ, ರೈತರ, ಶೋಷಿತರ, ಬೆವರು, ಶ್ರಮ, ದೇಶಪ್ರೇಮದ ನೂಲುಗಳು ಅಡಕವಾಗಿವೆ. ಭಗವಾಧ್ವಜ ಆ ಕಲ್ಪನೆಯಲ್ಲಿ ಇಲ್ಲ. ಅದನ್ನು ರಾಷ್ಟ್ರಧ್ವಜವೆಂದು ಒಪ್ಪಲು ಸಾಧ್ಯವಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್‌ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಸಾಹಿತಿ ಶಿವಾನಂದ ಕರ್ಕಿ ಅವರ ‘ಗರ್ಕು’ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗರ್ಕು’ ಎಂದರೆ ಕಾಡ್ಗಿಚ್ಚು ಎಂದರ್ಥ. ಮಲೆನಾಡಿನಲ್ಲಿ ಇದು ಸಾಮಾನ್ಯ. ಬಯಲು ಸೀಮೆಯವರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಅಂತರಾಳದ ಕಿಚ್ಚನ್ನು ಆರಿಸುವ ಬಗೆಯನ್ನು ಕೃತಿ ವಿವರಿಸಿದೆ. ಗರ್ಕಿನಿಂದ ಕಾಡು ಸುಡುವುದನ್ನು ರೂಪಕವಾಗಿ ಬಳಸುವ ಮೂಲಕ ಮಲೆನಾಡಿನ ಜನರ ಜ್ವಲಂತ ಸಮಸ್ಯೆಗಳನ್ನು ವಿವರಿಸಲಾಗಿದೆ ಎಂದರು.

ADVERTISEMENT

ಸಾಹಿತಿಯೊಬ್ಬ ಏಕಾಏಕಿ ಉದ್ಭವ ಆಗುವುದಿಲ್ಲ. ನದಿ ಹೇಗೆ ತನ್ನ ಹಾದಿಯನ್ನು ತಾನೇ ಹುಡುಕಿಕೊಂಡು ಅಂತಿಮವಾಗಿ ಸಮುದ್ರವನ್ನು ಸೇರುತ್ತದೆಯೋ ಹಾಗೆಯೇ ಲೇಖಕ ತನಗೆ ಕಾಣಿಸಿದ ಸತ್ಯವನ್ನು ದಿಟ್ಟತನದಿಂದ ಹೇಳುಲು ಪ್ರಯತ್ನಿಸುತ್ತಾನೆ. ಆ ಮೂಲಕ ವಿಶ್ವಮಾನವ ಸತ್ಯ ಹೇಳುವ ಕಡೆ ಮನಸ್ಸು ಹದಗೊಳಿಸಬೇಕು. ಪ್ರಪಂಚದ ಒಳಿತನ್ನು ಬಯಸಬೇಕು. ಅಂತಹ ಲಕ್ಷಣ ಈ ಕೃತಿಯಲ್ಲಿದೆ ಎಂದರು.

ದೇಸಿ ಸಂಸ್ಕೃತಿ ಚಿಂತಕ, ವಾಗ್ಮಿ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ, ‘ಚಕ್ರ, ಸಾವೆಹಕ್ಕಲು, ಶರಾವತಿ ಮುಳುಗಡೆ ಸಂದರ್ಭದಲ್ಲಿ ಆದಂತಹ ತಲ್ಲಣಗಳಿಂದ ದೀರ್ಘ ಕಾಲದ ಸಂಸ್ಕೃತಿ ನಶಿಸಿಹೋಯಿತು. ಎಂಪಿಎಂ ಮೂಲಕ ಆಕೇಶಿಯಾ ನೆಡುತೋಪು ಗ್ರಾಮೀಣ ಜನರ ನಾಡಿಮಿಡಿತ ನಾಶಗೊಳಿಸಿದ ಕಥೆ–ವ್ಯಥೆಯನ್ನು ಕೃತಿಯಲ್ಲಿಕಟ್ಟಿಕೊಡಲಾಗಿದೆ’ ಎಂದರು.

‌ಒಂದು ಕಾಲದಲ್ಲಿ ಸೌತೆ ಏರಿ, ಬಸಳೆ, ತೊಂಡೆ ಚಪ್ಪರ ಮಾಡಿದ ರೈತರಿಗೆ ಜಾಗ ನೀಡುವ ವಾಗ್ದಾನ ನೀಡುತ್ತಿದ್ದ ರಾಜಕಾರಣಿಗಳು ಈಗ ಇಲ್ಲ. ಕಾರ್ಯಕರ್ತರ ಹಂತದಿಂದಲೇ ಆಮಿಷಗಳು ಹೆಚ್ಚುತ್ತಿವೆ ಎಂದು ಬೇಸರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ವಿಮರ್ಶಕ ಡಾ.ಜೆ.ಕೆ. ರಮೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಲೇಖಕ ಶಿವಾನಂದ ಕರ್ಕಿ ಮಾತನಾಡಿದರು.

ಮೋಹನ್‌ ಮುನ್ನೂರು ಆರಂಭ ಗೀತೆ ಹಾಡಿದರು. ನೆಂಪೆ ದೇವರಾಜ್‌ ಸ್ವಾಗತಿಸಿದರು. ಡಾ.ಬಿ. ಗಣಪತಿ ನಿರೂಪಿಸಿದರು. ಕಾರ್ಯಕ್ರಮವನ್ನು ವಿಶೇಷವಾಗಿ ಗರ್ಕು (ಕಾಡ್ಗಿಚ್ಚು) ಆರಿಸುವ ಮೂಲಕ ಉದ್ಘಾಟಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.