ಸಾಗರ: ಚಿಪ್ಪಳಿ-ಲಿಂಗದಹಳ್ಳಿ ಗ್ರಾಮದ ಬಂಗಾರಮ್ಮನ ಕೆರೆ, ಆನೆಸೊಂಡಿಲು ಕೆರೆ ಪುನಶ್ಚೇತನ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿರುವ ’ಸ್ವಾನ್ ಎಂಡ್ ಮ್ಯಾನ್’ ಸಂಸ್ಥೆ ಈ ವರ್ಷದ ಬೇಸಿಗೆಯಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.
ತಾಲ್ಲೂಕಿನ ವರದಾ ನದಿಯ ಉಗಮ ಸ್ಥಾನವಾದ ವರದಾಮೂಲ ದಲ್ಲಿರುವ ಅಗಸ್ತ್ಯತೀರ್ಥದ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರದಿಂದ ಸ್ವಾನ್ ಎಂಡ್ ಮ್ಯಾನ್ ದೃಢ ಹೆಜ್ಜೆ ಇಟ್ಟಿದ್ದು ಹೂಳು ತೆಗೆಯುವ ಕೆಲಸ ಭರದಿಂದ ಸಾಗಿದೆ.
ಮಧ್ಯ ಪಶ್ಚಿಮಘಟ್ಟದ ತಪ್ಪಲಿನಲ್ಲಿ ರುವ ವರದಾಮೂಲದಲ್ಲಿ ಹುಟ್ಟುವ ವರದಾ ನದಿಯು ಸಾಗರ ತಾಲ್ಲೂಕಿನಲ್ಲಿ ಉಗಮವಾಗುವ ಏಕೈಕ ನದಿ. ವರದಾಮೂಲ ಪುರಾಣ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವೂ ಹೌದು.
ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಸಕಲ ದೋಷಗಳು ಪರಿಹಾರವಾಗುತ್ತದೆ ಎಂದು ಹೆಚ್ಚಿನ ಜನರು ಇಲ್ಲಿ ಸ್ನಾನ ಮಾಡಿದ ಪರಿಣಾಮ ವರದಾ ತೀರ್ಥ ಮಲೀನಗೊಂಡಿತ್ತು. ಆಗ ಅಗಸ್ತ್ಯ ಮುನಿಗಳು ಮೂಲ ವರದಾ ತೀರ್ಥ ಮಲೀನವಾಗಬಾರದು ಎಂದು ಅದಕ್ಕೊಂದು ಪರ್ಯಾಯ ತೀರ್ಥವನ್ನು ಸೃಷ್ಟಿ ಮಾಡಿದರು. ಅದೇ ‘ಅಗಸ್ತ್ಯತೀರ್ಥ’ ಎಂದು ಪ್ರಸಿದ್ಧಿಗೆ ಬಂದಿತು ಎಂಬ ನಂಬಿಕೆ ಇದೆ.
ವರದಾಮೂಲ ಕ್ಷೇತ್ರದಲ್ಲಿ ಪಿತೃ ಕಾರ್ಯ ಮಾಡುವವರು ಬರುವುದರಿಂದ ಈ ಕಾರ್ಯ ಕೈಗೊಂಡವರು ನಿರಂತರವಾಗಿ ಅಸ್ಥಿ, ಮಡಿಕೆ, ಪ್ಲಾಸ್ಟಿಕ್ ಚೀಲ, ಬಕೆಟ್, ಡಬ್ಬಿ ಮೊದಲಾದ ವಸ್ತುಗಳನ್ನು ಅಗಸ್ತ್ಯ ತೀರ್ಥಕ್ಕೆ ಸುರಿಯುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿ ಆ ತೀರ್ಥ ಮುಚ್ಚುವ ಹಂತಕ್ಕೆ ಬಂದಿತ್ತು.
ಇದನ್ನು ಗಮನಿಸಿದ ಗ್ರಾಮಸ್ಥರು ಹೇಗಾದರೂ ಮಾಡಿ ಅಗಸ್ತ್ಯತೀರ್ಥಕ್ಕೆ ಮರು ಜೀವ ನೀಡಲು ಮುಂದಾಗಿ ಸಮಾಲೋಚನೆ ನಡೆಸಿದರು. ಹಿಂದಿನ ವರ್ಷಗಳಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಮತ್ತು ಅವರ ತಂಡದವರು ಅಗಸ್ತ್ಯತೀರ್ಥದ ಹೂಳು ತೆಗೆಯಲು ದೃಢ ಸಂಕಲ್ಪ ಮಾಡಿ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಒಂದು ಹಿಟಾಚಿ, ನಾಲ್ಕು ಟಿಪ್ಪರ್ ಬಳಸಿ ಪ್ರತಿದಿನ 140 ಲೋಡ್ ಹೂಳು ತೆಗೆದು ಎರಡು ಕಿ.ಮೀ.ದೂರದ ಲಿಂಗದಹಳ್ಳಿಯಲ್ಲಿರುವ ಕಲ್ಲು ಕ್ವಾರಿಗೆ ಸಾಗಿಸಲಾಗುತ್ತಿದೆ. ಈ ಕೆಲಸಕ್ಕಾಗಿ ತೀರ್ಥದ ಸಮೀಪ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದೆ.
ಕೆರೆಯ ಒಡಲಿನಲ್ಲಿ ಹೂಳಿನ ಕೆಳಗೆ ನೀರು ಇರುವುದರಿಂದ ಹೂಳಿನ ಮೇಲೆ ಸರ್ಕಸ್ ಮಾಡುತ್ತ ಹಿಟಾಚಿ ಚಲಿಸುವುದು ಸುಲಭದ ಮಾತಲ್ಲ. ಕೊಂಚ ಏರುಪೇರಾದರೂ ಅನಾಹುತ ತಪ್ಪಿದ್ದಲ್ಲ. ಹೂಳನ್ನು ತುಂಬಿಸಿಕೊಳ್ಳಲು ಲಾರಿಗಳು ಹಿಟಾಚಿ ಹತ್ತಿರ ಹೋಗಬೇಕು. ಸ್ಪಂಜಿನಂತಿರುವ ಹೂಳಿನ ಮೇಲೆ ತೂಗಾಡುತ್ತ ಹೂಳನ್ನು ತುಂಬಿಕೊಂಡು ಸಾಗುವ ಕ್ಲಿಷ್ಟಕರ ಕೆಲಸವನ್ನು ಈಗ ನಿರ್ವಹಿಸಲಾಗುತ್ತಿದೆ.
ಅಗಸ್ತ್ಯತೀರ್ಥದ ಕಾಯಕಲ್ಪಕ್ಕೆ ₹ 25 ಲಕ್ಷ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಆರಂಭದಲ್ಲೇ ಮಂಗಳೂರಿನಲ್ಲಿರುವ ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ₹ 6 ಲಕ್ಷ ದೇಣಿಗೆ ನೀಡಿ ತನ್ನ ಸಾಮಾಜಿಕ ಬದ್ಧತೆಯನ್ನು ತೋರಿದೆ. ನೀಡಿದ ಹಣ ದುರುಪಯೋಗವಾಗುವುದಿಲ್ಲ ಎಂಬ ಖಾತರಿಯ ಮೇರೆಗೆ ಹಲವು ದಾನಿಗಳು ನೆರವು ನೀಡಲು ಮುಂದಾಗಿದ್ದಾರೆ ಎಂದು ಸ್ಥಳೀಯರಾದ ಎಲ್.ವಿ. ಅಕ್ಷರ ಹೇಳಿದರು.
ಜಲ ಸಂರಕ್ಷಣೆ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗದೆ ಕಾರ್ಯರೂಪಕ್ಕೆ ಇಳಿಸಬೇಕು ಎಂಬುದು ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ನಿಲುವು ಆಗಿದೆ. ಅಖಿಲೇಶ್ ಚಿಪ್ಪಳಿ, ಎಲ್.ವಿ. ಅಕ್ಷರ, ವಿ.ಮಂಜುನಾಥ್, ವ.ಶಂ. ರಾಮಚಂದ್ರ ಭಟ್, ಅಶೋಕ್ ಎಲ್.ವಿ., ಮಂಜುನಾಥ್ ಶೆಟ್ಟಿ ಮೊದಲಾದವರು ಅಗಸ್ತ್ಯತೀರ್ಥದ ಕಾಯಕಲ್ಪಕ್ಕೆ ಅಹರ್ನಿಶಿ ದುಡಿಯುತ್ತಿದ್ದಾರೆ.
ನೆರವಿಗೆ ಮನವಿ: ಅಗಸ್ತ್ಯತೀರ್ಥದ ಹೂಳೆತ್ತುವ ಕೆಲಸಕ್ಕೆ ನೆರವು ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಪಾವತಿಸಬಹುದು.
ಸ್ವಾನ್ ಎಂಡ್ ಮ್ಯಾನ್, ಇಂಡಿಯನ್ ಬ್ಯಾಂಕ್, ಜೋಗ ರಸ್ತೆ, ಸಾಗರ-577401, ಖಾತೆ ಸಂಖ್ಯೆ 6006590782. ಐಎಫ್‌ಸಿ ಕೋಡ್ IDIB000S003. ಸಂಪರ್ಕ ಸಂಖ್ಯೆ 9449718869.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.