ADVERTISEMENT

‘ಐದು ವರ್ಷಗಳ ಹಿಂದಿನ ಆಡಳಿತ ಮರೆತಿಲ್ಲ: ಜೆಡಿಎಸ್ ಅಭ್ಯರ್ಥಿ ಶಾರದಾ

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯ್ಕ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 7:13 IST
Last Updated 19 ಏಪ್ರಿಲ್ 2023, 7:13 IST
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರಾದಾ ಪೂರ್ಯನಾಯ್ಕ್ ಅವರು ಮಂಗಳವಾರ ಬೆಳಿಗ್ಗೆ ರವೀಂದ್ರನಗರ, ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಅಭಿಮಾನಿ ಬಳಗದ ಜೊತೆಗೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರಾದಾ ಪೂರ್ಯನಾಯ್ಕ್ ಅವರು ಮಂಗಳವಾರ ಬೆಳಿಗ್ಗೆ ರವೀಂದ್ರನಗರ, ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಅಭಿಮಾನಿ ಬಳಗದ ಜೊತೆಗೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.   

ಶಿವಮೊಗ್ಗ: ‘ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಬಾಕಿ ಇವೆ. ಈ ಚುನಾವಣೆಯಲ್ಲಿ ಅವುಗಳಿಗೆ ಪುನಃ ಜೀವ ತುಂಬುವ ಕೆಲಸವನ್ನು ಮತದಾರರು ಮಾಡುತ್ತಾರೆ ಎನ್ನುವ ನಂಬಿಕೆ ಹಾಗೂ ವಿಶ್ವಾಸವಿದೆ’ ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯ್ಕ್ ಹೇಳಿದರು.

ಮಂಗಳವಾರ ಉಮೇದುವಾರಿಕೆ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಉಮೇದುವಾರಿಕೆ ಸಲ್ಲಿಕೆ ಮೆರವಣಿಗೆಗೆ ಯಾರನ್ನೂ ಪ್ರತ್ಯೇಕವಾಗಿ ಕರೆದಿಲ್ಲ. ಐದು ವರ್ಷಗಳ ಹಿಂದಿನ ಆಡಳಿತದ ವೈಖರಿಯಿಂದ ಪುನಃ ಜನರೇ ನಮ್ಮ ಸೇವೆಯನ್ನು ಬಯಸುತ್ತಿದ್ದಾರೆ. ಮತ್ತೊಮ್ಮೆ ನೀವೇ ನಮ್ಮ ನಾಯಕಿ ಆಗಬೇಕು ಎಂದು ಆಶಯ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಖಂಡಿತಾ ಶ್ರಮಿಸುತ್ತೇನೆ’
ಎಂದರು.

‘ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗಳು ಐದು ವರ್ಷಗಳಿಂದ ಅರ್ಧಕ್ಕೆ ನಿಂತಿವೆ. ಪಂಚರತ್ನ ಯಾತ್ರೆಯ ಕ್ಷೇತ್ರ ಪ್ರವಾಸದಲ್ಲಿ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದ್ದು ಕಾಣುತ್ತಿತ್ತು. ಜನರು ಕೂಡ ಈ ಸಮಸ್ಯೆಯನ್ನು ನಮ್ಮ ಮುಂದಿಟ್ಟಿದ್ದರು. ಕೃಷಿ ಪಂಪ್‌ಸೆಟ್‌ಗೆ ಬೇಕಾದ ವಿದ್ಯುತ್ ಸಮಸ್ಯೆ ಕೂಡ ಅದರಲ್ಲಿ ಒಂದು. ರೈತನಿಗೆ ಸಮರ್ಪಕ ನೀರು ಮತ್ತು ವಿದ್ಯುತ್ ಇದ್ದರೆ ಆತನೇ ನಮಗೆ ಸಾಲ ಕೊಡುತ್ತಾನೆ. ಸರ್ಕಾರ ಅವರ ಸಾಲ ಮನ್ನಾ ಮಾಡುವುದು ಬೇಡ’ ಎಂದ ಅವರು, ‘ಈ ಚುನಾವಣೆಯಲ್ಲಿ 30,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ’ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ADVERTISEMENT

ಬೆಳಿಗ್ಗೆ ರವೀಂದ್ರನಗರ, ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಅಭಿಮಾನಿ ಬಳಗದ ಜೊತೆಗೆ ತೆರೆದ ವಾಹನದಲ್ಲಿ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿ, ಮಧ್ಯಾಹ್ನ 12.30ಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್, ಆಯನೂರು ಶಿವನಾಯ್ಕ್, ನಾಗರಾಜ ಕಂಕಾರಿ ಇದ್ದರು.

.........

ಸಮಸ್ಯೆ ಎದುರಿಸಿದ ಸಾರ್ವಜನಿಕರು

ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಗೆ ಗ್ರಾಮಾಂತರ ಚುನಾವಣಾಧಿಕಾರಿ ಕಚೇರಿಯನ್ನು ತಾಲ್ಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ತೆರೆಯಲಾಗಿದೆ. ನೀತಿ ಸಂಹಿತೆ ನಿಮಿತ್ತ ಉಮೇದುವಾರಿಕೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮಹಾವೀರ ವೃತ್ತಕ್ಕೆ ಅಡ್ಡಲಾಗಿ ಬಾಲರಾಜ್ ಅರಸ್ ರಸ್ತೆಯನ್ನು ಸಂಪೂರ್ಣ ಬ್ಯಾರಿಕೇಡ್ ಮೂಲಕ ಮುಚ್ಚಲಾಗಿದೆ. ಪರಿಣಾಮವಾಗಿ ಕಾರ್ಯನಿಮಿತ್ತ ತಾಲ್ಲೂಕು ಕಚೇರಿ ಹಾಗು ಕೋರ್ಟ್‌ಗೆ ಹೋಗುವ ಸಾರ್ವಜನಿಕರು ಸಮಸ್ಯೆ ಎದುರಿಸಿದರು.

‘ತಾಲ್ಲೂಕು ಕಚೇರಿಗೆ ದೂರದ ಊರಿನಿಂದ ಬಂದಿದ್ದೇನೆ. ಪೊಲೀಸರು ಇಲ್ಲಿ ಬರಬೇಡಿ, ಆ ಕಡೆಯಿಂದ ಬನ್ನಿ ಎಂದು ಹೇಳುತ್ತಾರೆ. ನಮಗಿದೇನು ಶಿಕ್ಷೆನಪ್ಪ’ ಎಂದು ಭದ್ರಾವತಿಯ ಯಲ್ಲಪ್ಪ ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.