ADVERTISEMENT

ಶಿಮುಲ್: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಳ;15 ಮಾದರಿ ಬ್ರೆಡ್, ಬನ್ ತಯಾರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:51 IST
Last Updated 18 ಜುಲೈ 2024, 6:51 IST
ಮಾಚೇನಹಳ್ಳಿಯಲ್ಲಿರುವ ನಂದಿನಿ ಹಾಲಿನ ಡೇರ್
ಮಾಚೇನಹಳ್ಳಿಯಲ್ಲಿರುವ ನಂದಿನಿ ಹಾಲಿನ ಡೇರ್   

ಭದ್ರಾವತಿ: ಇಲ್ಲಿನ ಮಾಚೇನಹಳ್ಳಿಯ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ (ಶಿಮುಲ್‌) ಹಾಲು ಉತ್ಪಾದನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಒಕ್ಕೂಟ ಬ್ರೆಡ್‌, ಬನ್‌ ಸೇರಿದಂತೆ ಹಾಲಿನ ಉತ್ಪನ್ನಗಳ ತಯಾರಿಕೆ ಆರಂಭಿಸಿದೆ.

ಶಿಮುಲ್‌ನಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಪ್ರತಿದಿನ 6.27 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಅದು ಈಗ 7.84 ಲೀಟರ್‌ಗೆ ಏರಿಕೆಯಾಗಿದೆ. ಮೂರೂವರೆ ತಿಂಗಳಲ್ಲಿ ಬರೋಬ್ಬರಿ ಸುಮಾರು 1.60 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ. 2023ರಲ್ಲಿ ದಿನಕ್ಕೆ ಸರಾಸರಿ 1.20 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. 2024ರಲ್ಲಿ ಅದು ದಿನಕ್ಕೆ ಸರಾಸರಿ 1.40 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ.

ಹಾಲಿನ ಉತ್ಪನ್ನಗಳಲ್ಲಿ ಹೆಚ್ಚಳ:

ಹಾಲಿನ ಉತ್ಪಾದನೆ ಹೆಚ್ಚಿದಂತೆ ವಿವಿಧ ಬಗೆಯ ಹಾಲಿನ ಉತ್ಪನ್ನಗಳ ತಯಾರಿಕೆ ಆರಂಭವಾಗಿದೆ. ಶಿಮುಲ್‌ನಿಂದ ನೂತನವಾಗಿ 15 ಮಾದರಿಯ ಬ್ರೆಡ್ ಮತ್ತು ಬನ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದೆ. ಇಷ್ಟು ದಿನ ಬೆಂಗಳೂರಿನಲ್ಲಷ್ಟೇ ಸಿಗುತ್ತಿದ್ದ ಬ್ರಾಂಡ್‌ನ ಪದಾರ್ಥಗಳು ಇನ್ನು ಮುಂದೆ ಇಲ್ಲಿಯೂ ಸಿಗಲಿವೆ. ಮುಂದಿನ ದಿನಗಳಲ್ಲಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಶಿಮುಲ್ ಆಡಳಿತ ಸಿದ್ಧತೆ ನಡೆಸಿದೆ.

ADVERTISEMENT

ಉತ್ಪಾದನೆ-ಪ್ರಮಾಣ-ದರ ಹೆಚ್ಚಳ:

ರೈತರಿಗೆ ನ್ಯಾಯ ಒದಗಿಸಲು, ಹಾಲನ್ನು ತಿರಸ್ಕರಿಸದೆ ಖರೀದಿಸಲಾಗುತ್ತಿದೆ. ಇದರಿಂದ ಡೇರಿಯಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಹಾಲಿನ ಪ್ಯಾಕ್‌ಗಳಲ್ಲಿ ಅಳತೆ ಪ್ರಮಾಣ ಹೆಚ್ಚಿಸಿ, ಅದಕ್ಕೆ ಅನುಗುಣವಾಗಿ ದರ ಹೆಚ್ಚಿಸಲಾಗಿದೆ. ಎಲ್ಲಾ ಮಾದರಿಯ ಹಾಲಿನಲ್ಲಿ ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕೆಟ್‌ಗಳಲ್ಲಿ 50 ಮಿಲಿ ಹೆಚ್ಚಿಸಲಾಗಿದೆ. ಅದಕ್ಕೆ ತಕ್ಕಂತೆ ₹2 ದರ ಏರಿಕೆ ಮಾಡಲಾಗಿದೆ.

ಉತ್ಪಾದನೆ ಹೆಚ್ಚಳಕ್ಕೆ ಕಾರಣ:

ಸಾಮಾನ್ಯವಾಗಿ ಮಳೆಗಾಲದಲ್ಲಿ ಪಶುಗಳಿಗೆ ಮೇವು ಹೆಚ್ಚಾಗಿ ದೊರೆಯುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಈ ಬಾರಿ ಹಾಲು ಉತ್ಪಾದನೆ ವಾಡಿಕೆಗಿಂತ ತುಸು ಹೆಚ್ಚಾಗಿದೆ ಎಂದು ಭದ್ರಾವತಿ ತಾಲ್ಲೂಕಿನ ಶಿಮುಲ್ ಮಾರುಕಟ್ಟೆ ಅಧಿಕಾರಿ ಸಂದೀಪ್ ಹೇಳುತ್ತಾರೆ.

ಹಾಲು ಕಳ್ಳತನ ಹೆಚ್ಚಳ:

ಭದ್ರಾವತಿ ನಗರದಲ್ಲಿ ಬೆಳಗಿನ ಜಾವ 3 ಗಂಟೆಗೆ ಡೀಲರ್ ಪಾಯಿಂಟ್ ಬಳಿಯ ರಸ್ತೆಗಳಲ್ಲಿ ಹಾಲು ಇಳಿಸಲಾಗುತ್ತದೆ. ಆದರೆ ಕೆಲ ದಿನಗಳಿಂದ ಅಲ್ಲಿ ಹಾಲಿನ ಕಳ್ಳತನ ಹೆಚ್ಚಾಗುತ್ತಿದೆ. ಇದರಿಂದ ಸಣ್ಣ ವ್ಯಾಪಾರಸ್ಥರಿಗೆ ನಷ್ಟ ಆಗುತ್ತದೆ. ದಿನಕ್ಕೆ ಅರ್ಧ ಲೀಟರ್ ಕಳುವಾದರೂ ತಿಂಗಳಿಗೆ ₹1,000 ನಷ್ಟವಾಗುತ್ತದೆ ಎಂದು ನಗರದ ಭೂತನಗುಡಿ ನಂದಿನಿ ಹಾಲಿನ ಮಾರ್ಗರೇಟ್ ಹೇಳುತ್ತಾರೆ. ಹಾಲು ಕಳ್ಳತನ ತಪ್ಪಿಸಲು ಶಿಮುಲ್ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ.

ಮಾರಾಟಕ್ಕೆ ಸಜ್ಜಾಗಿರುವ ನಂದಿನಿ ಹಾಲಿನ ಉತ್ಪನ್ನಗಳು
ಹೋಟೆಲ್‌ಗಲ್ಲಿ ಟೀ ಕಾಫಿ ದರ ಏರಿಕೆ !
ಹಾಲು ಒಕ್ಕೂಟ ಪ್ರತೀ ಲೀಟರ್‌ ಪ್ಯಾಕೆಟ್‌ನಲ್ಲಿ ಹಾಲಿನ ಪ್ರಮಾಣ 50 ಎಂಎಲ್‌ ಹೆಚ್ಚಿಸಿ ಅದಕ್ಕೆ ತಕ್ಕಂತೆ ₹2 ದರ ಏರಿಸಿದೆ. ಇದರಲ್ಲಿ ಬೆಲೆ ಏರಿಕೆ ಏನೂ ಆಗಿಲ್ಲ. ಆದರೆ ಭದ್ರಾವತಿಯ ಕೆಲವು ಹೋಟೆಲ್‌ನವರು ಹಾಲಿನ ದರ ಏರಿಕೆ ಆಗಿದೆ ಎಂದು ಗ್ರಾಹಕರಿಗೆ ಸುಳ್ಳು ಹೇಳುತ್ತಾ ಕಾಫಿ–ಟೀ ದರ ಹೆಚ್ಚಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಲೋಟ ಟೀ ಕಾಫಿ ಗೆ ₹2 ರಿಂದ ₹3 ಏರಿಸಲಾಗಿದೆ ಎಂದು ಗ್ರಾಹಕ ಸುಮನ್ ಬೇಸರ ವ್ಯಕ್ತಪಡಿಸುತ್ತಾರೆ. ಸಂಘದಲ್ಲಿ ನೋಂದಾಯಿತವಾದ ಯಾವುದೇ ಹೋಟೆಲ್‌ಗಳಲ್ಲಿ ಕಾಫಿ–ಟೀ ದರಗಳಲ್ಲಿ ಏರಿಕೆ ಮಾಡಿಲ್ಲ. ಪ್ರಸ್ತುತ ಒಂದು ಫುಲ್ ಟೀ ಕಾಫಿ ₹20 ನಿಗದಿಪಡಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವಿರಾಜ್ ಆಚಾರ್ಯ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.