ADVERTISEMENT

ಶಿರಾಳಕೊಪ್ಪ| ಸಂತೆಯಲ್ಲಿ ಸ್ಫೋಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 15:40 IST
Last Updated 19 ಫೆಬ್ರುವರಿ 2024, 15:40 IST
<div class="paragraphs"><p>ಬಂಧನ (ಪ್ರಾತಿನಿಧಿಕ ಚಿತ್ರ)</p></div>

ಬಂಧನ (ಪ್ರಾತಿನಿಧಿಕ ಚಿತ್ರ)

   

ಶಿರಾಳಕೊಪ್ಪ: ಪಟ್ಟಣದ ಸಂತೆಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಕೊಪ್ಪರಸಿಕೊಪ್ಪದ ಉಮೇಶ (40) ಹಾಗೂ ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ನಿವಾಸಿ ಕರಿಯಪ್ಪ (60) ಬಂಧಿತರು.

ADVERTISEMENT

ಉಮೇಶ ಶಿರಸಿಯ ತೋಟದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಾಡುಹಂದಿಗಳ ಬೇಟೆಗಾಗಿ ಕರಿಯಪ್ಪ ಅವರಿಂದ ₹ 300 ನೀಡಿ 3 ಸಿಡಿಮದ್ದು ಖರೀದಿಸಿದ್ದರು.

ಪತ್ನಿಯೊಂದಿಗೆ ಕೊಪ್ಪರಸಿಕೊಪ್ಪದ ಜಾತ್ರೆಗೆ ಹೊರಟಿದ್ದ ಉಮೇಶ, ಜೊತೆಗೆ 3 ಸಿಡಿಮದ್ದುಗಳನ್ನು ತಂದಿದ್ದರು. ಮಾರ್ಗ ಮಧ್ಯೆ ಶಿರಾಳಕೊಪ್ಪದಲ್ಲಿ ಸಂತೆಯಲ್ಲಿ ವಿವಿಧ ಸಾಮಗ್ರಿ ಖರೀದಿಸಿಕೊಂಡು ಹೋಗಲು ಬಂದಿದ್ದರು. ಸಂತೆಯಲ್ಲಿ ಬೆಡ್‌ಶೀಟ್ ಖರೀದಿಸಿದ್ದ ಅವರು, ಇನ್ನಿತರ ಸಾಮಗ್ರಿ ತರುವುದಕ್ಕೆ ತೆರಳುವ ಮುನ್ನ ಬ್ಯಾಗ್ ಅಲ್ಲಿಯೇ ಇಟ್ಟು ಹೋಗಿದ್ದರು.

ಬೆಡ್‌ಶೀಟ್ ಮಾರಾಟ ಮಾಡುತ್ತಿದ್ದ ಅಂಥೋನಿ ಅವರ ಕಾಲು ತಾಗಿ ಬ್ಯಾಗ್‌ನಲ್ಲಿದ್ದ ಸಿಡಿಮದ್ದು ಸ್ಫೋಟಗೊಂಡಿತ್ತು. ಈ ಸಂದರ್ಭ ಅಂಥೋನಿ ಸೇರಿ ಇಬ್ಬರಿಗೆ ಗಾಯವಾಗಿತ್ತು.

ಮುಂಡಗೋಡದ ಕರಿಯಪ್ಪ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಸಿಡಿಮದ್ದನ್ನು ಹುಬ್ಬಳ್ಳಿಯಿಂದ ಖರೀದಿಸಿ ತರುತ್ತಿದ್ದುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.