ಶಿರಾಳಕೊಪ್ಪ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ (ಕ್ರೈಸ್) ಬರುವ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ಮಕ್ಕಳಿಗೆ ಸರ್ಕಾರ ಶೇ 50 ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೇ, ಜುಲೈ ಅಂತ್ಯಕ್ಕೆ ಬಂದರೂ ವಿಶೇಷ ವರ್ಗದ ಕೋಟಾದಲ್ಲಿ ಲಭ್ಯವಿರುವ 20,000 ಸೀಟುಗಳಲ್ಲಿ ಇನ್ನೂ 10,598 ಸೀಟುಗಳು ಖಾಲಿ ಉಳಿದಿವೆ.
ಅದರಲ್ಲಿ ಪರಿಶಿಷ್ಟ ಜಾತಿ-5,134, ಪರಿಶಿಷ್ಟ ಪಂಗಡ-3,131, ಪ್ರವರ್ಗ-1–111, 2ಎ-998, 2ಬಿ-471,3ಎ-316, 3ಬಿ-269, ಸಾಮಾನ್ಯ ವರ್ಗ-168 ಸೀಟುಗಳು ಒಳಗೊಂಡಿವೆ. ಇದರಿಂದಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಸೇರದೇ, ಇತ್ತ ಈ ಸೀಟಿನ ಬಗ್ಗೆಯು ಸಹ ಖಾತ್ರಿ ಸಿಗದೇ ಅತಂತ್ರವಾಗಿದ್ದಾರೆ.
ಈ ಹಿಂದೆ ಸಾಮಾನ್ಯ ರೋಸ್ಟರ್ ಪದ್ಧತಿಯಂತೆಯೆ ಮೀಸಲಾತಿ ನಿಗದಿಪಡಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ವಿತರಿಸಲಾಗುತ್ತಿತ್ತು. ನಂತರ ಆಶ್ರಮ ಶಾಲೆ ಶೇ 10, ಅಲೆಮಾರಿ/ಅರೆ ಅಲೆಮಾರಿ ಸಮುದಾಯ(ಸೂಕ್ಷ್ಮ-ಅತೀ ಸೂಕ್ಷ್ಮ) ಮಕ್ಕಳಿಗೆ ಶೇ 10, ಅಂಗವಿಕಲರಿಗೆ ಶೇ 4, ಮಾಜಿ ಸೈನಿಕರ ಮಕ್ಕಳಿಗೆ ಶೇ 5, ದುರ್ಬಲ ವರ್ಗ ಶೇ 5, ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ಶೇ 5 ರಷ್ಟು ಮೀಸಲಾತಿ ಹೆಚ್ಚುವರಿಯಾಗಿ ಈ ವರ್ಗದಲ್ಲಿ ನೀಡಲಾಗುತ್ತಿತ್ತು.
ಆದರೆ ಬದಲಾದ ವ್ಯವಸ್ಥೆಯಲ್ಲಿ ಈ ಬಾರಿ ಶೇ 50ರಷ್ಟು ಮೀಸಲಾತಿ ವಿಶೇಷ ವರ್ಗಕ್ಕೆ ನೀಡಿದೆ. ಅದನ್ನೂ 5 ವಿಭಾಗವಾಗಿ ವರ್ಗಿಕರಿಸಲಾಗಿದೆ. ಪರಿಶಿಷ್ಟ ಜಾತಿ,ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಸಾಮಾನ್ಯ ವರ್ಗದ ಒಳಗೆ ಈ 5 ಗುಂಪುಗಳಿಗೆ ಶೇ 50 ರಷ್ಟು ಮೀಸಲಾತಿ ಕಲ್ಪಿಸಿರುವುದು ಇಷ್ಟು ದೊಡ್ಡ ಸಂಖ್ಯೆಯ ಸೀಟುಗಳು ಉಳಿಯಲು ಕಾರಣ ಎಂದು ಪೋಷಕರು ದೂರುತ್ತಿದ್ದಾರೆ.
ಅಲೆಮಾರಿ ಸಮುದಾಯಗಳು ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1ರಲ್ಲಿ ಸಾಮಾನ್ಯವಾಗಿ ಬರುತ್ತವೆ. ಆದರೆ, ಇಲ್ಲಿ 2ಎ, 2ಬಿ, 3ಎ, 3ಬಿ, ಸಾಮಾನ್ಯ ಜಾತಿಗಳಿಗೆ ಸಹ ವರ್ಗಿಕರಣ ಮಾಡಿದ್ದಾರೆ. ಹೀಗಾದರೇ ನಮಗೆ ನ್ಯಾಯ ಸಿಗಲು ಹೇಗೆ ಸಾಧ್ಯ ಎಂದು ಅಲೆಮಾರಿ ಸಮುದಾಯದ ದೇವರಾಜ್ ಮಳೂರು ಬೇಸರ ವ್ಯಕ್ತಪಡಿಸಿದರು.
ಶಾಲಾ ಸಿಬ್ಬಂದಿ ವಿಶೇಷ ವರ್ಗದ ಮಕ್ಕಳು ಇರುವ ಪ್ರದೇಶಗಳಿಗೆ ಭೇಟಿ ನೀಡಿ ಆ ಮಕ್ಕಳನ್ನು ವಸತಿ ಶಾಲೆಗೆ ಪ್ರವೇಶ ಕಲ್ಪಿಸಲು ಅಭಿಯಾನ ಪ್ರಾರಂಭಿಸಿದ್ದಾರೆ. ಖಾಲಿ ಉಳಿದಿರುವ ಸೀಟುಗಳು ಶೀಘ್ರ ಭರ್ತಿಯಾಗಲಿವೆಲತಾಕುಮಾರಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ
ಸಾಮಾನ್ಯ ಮೀಸಲಾತಿ ವರ್ಗದ ಅಡಿಯ ವಿಶೇಷ ಐದು ವರ್ಗಗಳು/ ಮೀಸಲಾತಿ ಪ್ರಮಾಣ
ಎ): ಸಫಾಯಿ ಕರ್ಮಚಾರಿಗಳ ಮಕ್ಕಳು/ ಚಿಂದಿ ಆಯುವವರ ಮಕ್ಕಳು/ ಸ್ಮಶಾನ ಕಾರ್ಮಿಕರ ಮಕ್ಕಳು/ ಮ್ಯಾನ್ಯುವೆಲ್ ಸ್ಕ್ಯಾವೆಂಜೆರ್‌ಗಳ ಮಕ್ಕಳು- ಶೇ 10 ರಷ್ಟು ಮೀಸಲಾತಿ
ಬಿ): ಬಾಲ ಕಾರ್ಮಿಕರು/ ಜೀತಮುಕ್ತ ಮಕ್ಕಳು/ ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು-ಶೇ 10 ರಷ್ಟು ಮೀಸಲಾತಿ
ಸಿ): ಎಚ್.ಐ.ವಿಗೆ ತುತ್ತಾದ ಪೋಷಕರ ಮಕ್ಕಳು/ಶೇ 25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು / ಒಬ್ಬ ಪೋಷಕರನ್ನು ಹೊಂದಿರುವ ಮಕ್ಕಳು / ಅನಾಥ ಮಕ್ಕಳು-ಶೇ 10ರಷ್ಟು ಮೀಸಲಾತಿ
ಡಿ): ಅಲೆಮಾರಿ ಸಮುದಾಯಗಳಿಗೆ ಸೇರಿದ ಮಕ್ಕಳು/ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು/ ಸೇವಾನಿರತ ಸೈನಿಕರ ಮಕ್ಕಳು/ ನಿವೃತ್ತ ಸೈನಿಕ ಸಿಬ್ಬಂದಿಯ ಮಕ್ಕಳು-ಶೇ 10 ರಷ್ಟು ಮೀಸಲಾತಿ.
ಇ): ಪ.ಜಾತಿ/ಪ.ಪಂಗಡ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು(ಅಲೆಮಾರಿ/ಅರೆ ಅಲೆಮಾರಿ) ಪ.ಜಾತಿ/ಪ.ಪಂಗಡ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು (ಅಲೆಮಾರಿ/ಅರೆ ಅಲೆಮಾರಿ)- ಶೇ 10ರಷ್ಟು ಮೀಸಲಾತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.