ADVERTISEMENT

ಶಿಕ್ಷಕರಲ್ಲಿ ದೇವರ ಕಾಣುವ ಸಂಸ್ಕೃತಿ ನಮ್ಮದು: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 13:51 IST
Last Updated 15 ಸೆಪ್ಟೆಂಬರ್ 2024, 13:51 IST
ಸೊರಬದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು
ಸೊರಬದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು   

ಸೊರಬ: ‘ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಶಿಕ್ಷಕರಲ್ಲಿ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

‌ಪಟ್ಟಣದ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೆತ್ತ ತಂದೆ, ತಾಯಿಗಳ ಸ್ಥಾನದಲ್ಲಿ ಅಕ್ಷರ ಕಲಿಸುವ ಗುರುಗಳನ್ನು ನೋಡುವ ಪರಂಪರೆ ನಮ್ಮದು. ಶಿಕ್ಷಕರ ಅನುಪಸ್ಥಿತಿಯಲ್ಲಿ ಸಮಾಜವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಿ’ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ADVERTISEMENT

‘ಪ್ರಜಾಪ್ರಭುತ್ವ ಅಪಾಯದ ಸ್ಥಿತಿ ತಲುಪಲು ಬಿಡದಂತೆ ಎಚ್ಚರ ವಹಿಸಬೇಕಾಗಿದ್ದು, 660 ಕಿ.ಮೀ. ಮಾನವ ಸರಪಳಿ ನಿರ್ಮಿಸುವ‌‌ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ‌ಜಾಗೃತಿ‌‌ ಮೂಡಿಸಲಾಗಿದೆ. ರಾಷ್ಟ್ರಗೀತೆಯಷ್ಟೇ ಸಂವಿಧಾನವೂ ಮುಖ್ಯ. ಬಡವ, ಬಲ್ಲಿದವರು ನೆಮ್ಮದಿಯಿಂದ ಬದುಕಬೇಕಾದರೆ ಸಂವಿಧಾನ ಉಳಿಸುವುದು ಮುಖ್ಯ. ದೇಶದಲ್ಲಿ ರಾಜಕೀಯ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಸರಿಪಡಿಸುವ ಜೊತೆಗೆ ಮುಂದಿನ ಪೀಳಿಗೆಗೆ ಸಂವಿಧಾನದ ಮಹತ್ವ ತಿಳಿಸುವ ಉದ್ದೇಶದಿಂದ  ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಗುತ್ತಿದೆ’ ಎಂದು ತಿಳಿಸಿದರು.

2016ರಿಂದ 2020ರವರೆಗೆ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆದೇಶಿಸಲಾಗಿದೆ ಎಂದರು.

ನಿವೃತ್ತ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಬಿಇಒ ಪುಷ್ಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಪಿ. ಸಂಗಡಿಗರು ರೈತ ಗೀತೆ ಹಾಡಿದರು. ಅನುರಾಗ ಸಂಗಡಿಗರು ಪ್ರಾರ್ಥಿಸಿದರು.

ದಯಾನಂದ ಕಲ್ಲೇರ್ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ವಿಧಾನಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಜಯಶೀಲಗೌಡ, ತಹಶೀಲ್ದಾರ್ ಮಂಜೂರು ಹೆಗಡಾಳ್, ಡಿಡಿಪಿಐ ಬಿಂಬಾ, ಇಒ ಪ್ರದೀಪಕುಮಾರ್, ಬಿಇಒ ಪುಷ್ಪಾ, ಹಾಪ್ ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕೆ.ಪಿ. ರುದ್ರಗೌಡ, ಎಚ್.ಗಣಪತಿ, ಸದಾನಂದಗೌಡ, ಸುರೇಶ್, ಅಣ್ಣಪ್ಪ ಇದ್ದರು.

ಅಜೀಂ ಪ್ರೇಮ್ ಜಿ‌ ಫೌಂಡೇಷನ್ ಸಹಯೋಗದಲ್ಲಿ ₹ 1.591 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳವರೆಗೆ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸೆ.25ರಿಂದ ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು.
ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.