ADVERTISEMENT

ಆನಂದಪುರ | ಅರಣ್ಯ ಭೂಮಿ ಒತ್ತುವರಿ: ಕಠಿಣ ಕ್ರಮ

ಶಾಸಕ ಗೋಪಾಲ ಕೃಷ್ಣ ಬೇಳೂರು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:54 IST
Last Updated 26 ಜೂನ್ 2024, 15:54 IST
ಆನಂದಪುರ ಸಮೀಪದ ಗೌತಮಪುರದಲ್ಲಿ ಅರಣ್ಯ ಇಲಾಖೆಯ ಗಸ್ತು ಅರಣ್ಯ ಸಿಬ್ಬಂದಿ ವಸತಿ ಗೃಹವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು
ಆನಂದಪುರ ಸಮೀಪದ ಗೌತಮಪುರದಲ್ಲಿ ಅರಣ್ಯ ಇಲಾಖೆಯ ಗಸ್ತು ಅರಣ್ಯ ಸಿಬ್ಬಂದಿ ವಸತಿ ಗೃಹವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು   

ಆನಂದಪುರ: ಅರಣ್ಯ ಭೂಮಿ ಒತ್ತವರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.

ಸಮೀಪದ ಗೌತಮಪುರದಲ್ಲಿ ಬುಧವಾರ ಅರಣ್ಯ ಇಲಾಖೆಯ ಗಸ್ತು ಅರಣ್ಯ ಸಿಬ್ಬಂದಿ ವಸತಿಗೃಹ ಉದ್ಘಾಟಿಸಿ ಮಾತನಾಡಿದರು.

‘ಅರಣ್ಯ ಭೂಮಿಯನ್ನು ಹೊಸದಾಗಿ ಯಾರು ಒತ್ತುವರಿ ಮಾಡಿಕೊಳ್ಳಬಾರದು. ಈಗಾಗಲೇ ಒತ್ತವರಿ ಮಾಡಿಕೊಂಡಲ್ಲಿ ಯಾವುದೇ ತೊಂದರೆ ಕೊಡುವುದಿಲ್ಲ. ಪ್ರಸ್ತುತ ಅನೇಕ ಒತ್ತುವರಿ ಕೇಸುಗಳಿಗೆ ಬರುತ್ತಿವೆ. ಮನುಷ್ಯ ದುರಾಸೆಗೆ ಬಿದ್ದು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಬಗರ್‌ಹುಕುಂ 4 ಎಕರೆ ಜಮೀನು ಕೊಟ್ಟರೂ ಒತ್ತುವರಿ ನಿಲ್ಲದಿರುವುದು ಬೇಸರದ ಸಂಗತಿ. ಇನ್ನು ಮುಂದೆ ಒತ್ತುವರಿ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು‘ ಎಂದರು.

ADVERTISEMENT

ಸಾಗರ ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಜಾರಿಯಾಗುತ್ತಿರುವುದರಿಂದ ಸಾಕಷ್ಟು ಭೂಮಿ ಕೊಡಬೇಕಾಗುತ್ತದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ರೈತರು ಯಾರೂ ಒತ್ತುವರಿ ಮಾಡಿಕೊಳ್ಳಬಾರದು. ಇರುವ ಜಮೀನನ್ನೇ ಅಭಿವೃದ್ಧಿಪಡಿಸುವತ್ತ ಗಮನ ಹರಿಸಿ ಎಂದು ಹೇಳಿದರು.

‘ಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಡನ್ನು ಉಳಿಸುವ ಕೆಲಸವನ್ನು ಮಾಡಬೇಕು. ಕಳೆದ ಬಾರಿಯ ಮಳೆಯ ಕೊರತೆಯಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದು ಕಣ್ಮುಂದೆ ಇದೆ. ಇದನ್ನು ಮನಗಂಡು ರೈತರು ಬರಗಾಲ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ರೈತರು ತಮ್ಮ ಭೂಮಿಯ ಅರ್ಧ ಎಕರೆಯಲ್ಲಿ ಕಾಡು ಬೆಳೆಸುವಂತಹ ಕಾನೂನು ಜಾರಿಗೆ ತರುವ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಬೇಕಾಗಿದೆ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಕೆ.ಬಿ., ವಲಯ ಅರಣ್ಯಾಧಿಕಾರಿ ರವಿಕುಮಾರ್ ಎಚ್.ಎಸ್., ಗೌತಮಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಕುಮಾರ್, ಸದಸ್ಯರಾದ ಮಂಜುನಾಥ್ ದಾಸನ್, ಶಿವಶಂಕರ್ ಹಾಗೂ ಅರಣ್ಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.