ಶಿವಮೊಗ್ಗ: ಹಿಂದಿನ ಮುಂಗಾರು ವೇಳೆ ಕಾಲುಸಂಕದಿಂದ ಜಾರಿ ಬಿದ್ದು ಜಿಲ್ಲೆಯ ಇಬ್ಬರು ಮೃತಪಟ್ಟ ನಂತರ ಮಲೆನಾಡಿಗರು ಅನುಭ ವಿಸುವ ಸಂಕಷ್ಟ ರಾಜ್ಯದ ಜನರ ಗಮನ ಸೆಳೆದಿತ್ತು.
ಅವಘಡದ ನಂತರ ಎಚ್ಚೆತ್ತುಕೊಂಡ ಸರ್ಕಾರ ಕಾಲುಸಂಕಗಳ ನಿರ್ಮಾಣಕ್ಕೆ ಒಲವು ತೋರಿದರೂ ಇದುವರೆಗೂ ಒಂದು ನಯಾಪೈಸೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ.
ಜಿಲ್ಲೆಯಲ್ಲಿ 274 ಕಾಲುಸಂಕಗಳನ್ನು ನಿರ್ಮಿಸಲು ₹ 14.39 ಕೋಟಿ ಅನುದಾನ ಬಿಡುಗಡೆ ಮಾಡಲು 2018–19ನೇ ಸಾಲಿನಲ್ಲೇ ಜಿಲ್ಲಾ ಪಂಚಾಯಿತಿ ಪ್ರಸ್ತಾವ ಸಲ್ಲಿಸಿತ್ತು. ಇದುವರೆಗೂ ಸರ್ಕಾರ ಆ ಹಣ ನೀಡಿಲ್ಲ.
ಹೊಸನಗರ ತಾಲ್ಲೂಕಿನ ಮುಂಬಾರಿನಲ್ಲಿ ಕೂಲಿ ಕಾರ್ಮಿಕ ವೆಂಕಟನಾಯ್ಕ, ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳು ದೊಡ್ಲಿಮನೆ ಹಳ್ಳದಲ್ಲಿ ಗುಡ್ಡೇಕೇರಿಯ ಶಾಲೆ ವಿದ್ಯಾರ್ಥಿನಿ ಆಶಿಕಾ ಕಾಲುಸಂಕದಿಂದ ಬಿದ್ದು ಮೃತಪಟ್ಟಿದ್ದರು.
ಕೆಲವು ವರ್ಷಗಳ ಹಿಂದೆ ಹೊಸನಗರ ತಾಲ್ಲೂಕು ಚಿಕ್ಕಜೇನಿ ಬಳಿ ಸಂಕದಿಂದ ಜಾರಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಸಾಗರ ತಾಲ್ಲೂಕು ಇದ್ರೋಡಿ ಬಳಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದರು.
ಕೆಲವು ಭಾಗಗಳಲ್ಲಿ ವ್ಯವಸ್ಥಿತ ಕಾಂಕ್ರೀಟ್ ಕಾಲುಸಂಕಗಳಿವೆ. ಆದರೆ, ಶೇ 95ರಷ್ಟು ಸಂಕಗಳನ್ನು ಸ್ಥಳೀಯರು ಸಿದ್ಧಪಡಿಸಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ಅಪಾಯಕಾರಿ ಸ್ಥಿತಿಯಲ್ಲಿವೆ.
ಹೊಸನಗರ ತಾಲ್ಲೂಕಿನ ನಿಟ್ಟೂರು, ಗಾಂಜಾಳ, ಮಾರುತಿಪುರ, ಸಾದರ ಗುಂಡಿ, ಮುತ್ತೂರು, ಮುಂಬಾರು, ತೀರ್ಥಹಳ್ಳಿ ತಾಲ್ಲೂಕಿನ ಮುಳಬಾಗಿಲು ಪಂಚಾಯಿತಿ ವ್ಯಾಪ್ತಿಯ ಬಿಂತ್ಲ, ಆಗುಂಬೆ ಬಳಿಯ ಕಾರೆಮನೆ, ಹೊದಲ, ಹರಳಾಪುರ ಪಂಚಾಯಿತಿ ವ್ಯಾಪ್ತಿಯ ಮರಡಿಹಳ್ಳ, ದಬ್ಬಣಗೆರೆ, ಎಡವಿನಕೊಪ್ಪದ ಕಮನಿಹಳ್ಳ, ಸಾಗರ ತಾಲ್ಲೂಕು ಕಾರ್ಗಲ್, ಜೋಗ ಸಮೀಪದ ಬಚ್ಚೋಡಿ, ಹೆನ್ನಿ, ಹಂಜಕಿ ಹಳ್ಳ, ಸರಳ ಹಳ್ಳ, ಬಾರಂಗಿ ಹೋಬಳಿಯ ಹಲವು ಕಾಲುಸಂಕಗಳು ಅಪಾಯಕಾರಿ ಸ್ಥಿತಿಯಲ್ಲಿದ್ದವು. ಅವಘಡದ ನಂತರ ಕೆಲವು ಸಂಕಗಳು ಆಧುನೀಕರಣಗೊಂಡಿವೆ.
ನಿಷ್ಕ್ರಿಯ: ಮಲೆನಾಡು ಪ್ರದೇಶಗಳ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಜಿಲ್ಲೆಯವರೇ ಆದ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತ್ಯೇಕ ಮಂಡಳಿಯನ್ನೇ ರಚಿಸಲಾಗಿತ್ತು. ಆರಂಭದ ದಿನಗಳಲ್ಲಿ ಕಾಲುಸಂಕ ನಿರ್ಮಾಣಕ್ಕೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಹೆಚ್ಚು ಒತ್ತು ನೀಡಿತ್ತು. ಆದರೆ, ದಶಕಗಳಿಂದ ಮಂಡಳಿ ಅತ್ತ ಗಮನವನ್ನೇ ಹರಿಸಿಲ್ಲ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಹರಿದುಬಂದರೂ ಮಲೆನಾಡಿಗರಿಗೆ ಸೌಕರ್ಯ ಕಲ್ಪಿಸಲು ಮಂಡಳಿಗೆ ಸಾಧ್ಯವಾಗಿಲ್ಲ.
ಉದ್ಯೋಗ ಖಾತ್ರಿ ಮೇಲೆ ಅವಲಂಬನೆ
ಉದ್ಯೋಗ ಖಾತ್ರಿ ಯೋಜನೆ ಅಡಿ ಹೊಸ ಕಾಲುಸಂಕಗಳನ್ನು ನಿರ್ಮಿಸಲು ಶಿವಮೊಗ್ಗ ಜಿಲ್ಲಾ ಪಂಚಾಯಿತಿ 2017–18ನೇ ಸಾಲಿನಲ್ಲೇ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಅವಕಾಶ ಕಲ್ಪಿಸಿತ್ತು. 134ಕ್ಕೆ ಅನುಮೋದನೆ ನೀಡಲಾಗಿತ್ತು. ಬಹುತೇಕ ಎಲ್ಲ ಸಂಕಗಳೂ ಈಚೆಗೆ ಪೂರ್ಣಗೊಂಡಿವೆ.
ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ, ಅರಮನೆಕೊಪ್ಪ, ಕರಿಮನೆ ಗ್ರಾಮ ಪಂಚಾಯಿತಿಗಳು ಅತಿ ಹೆಚ್ಚು ಸಂಕಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.