ಶಿವಮೊಗ್ಗ: ಸಮಾಜದ ಆಗುಹೋಗುಗಳಿಗೆ ಸಿನಿಮಾ ಮಾಧ್ಯಮ ಕೈಗನ್ನಡಿ. ಹೀಗಾಗಿ ಚಲನಚಿತ್ರೋತ್ಸವ ಕಾಟಾಚಾರಕ್ಕೆ ನಡೆಯಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಸಲಹೆ ನೀಡಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳ್ಳಿ ಮಂಡಲ, ಚಿತ್ರ ಸಮಾಜದ ಸಂಯುಕ್ತಾಶ್ರಯದಲ್ಲಿ ದಸರಾ ಅಂಗವಾಗಿ ಆಯೋಜಿಸಿದ್ದ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗದಲ್ಲಿ ದಸರಾ ನಡೆಯುತ್ತಿರುವುದು ಸ್ವಾಗತಾರ್ಹ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ. ಚಲನಚಿತ್ರೋತ್ಸವ ಕಾಟಾಚಾರಕ್ಕೆ ನಡೆಯದೇ ಅರ್ಥಗರ್ಭಿತವಾಗಿ ನಡೆದು, ಸಾರ್ವಜನಿಕರು ಒಳ್ಳೆಯ ಸಿನಿಮಾ ನೋಡುವಂತಾಗಬೇಕಿದೆ ಎಂದು ಆಶಿಸಿದರು.
‘ಸಾಮಾನ್ಯವಾಗಿ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ಬೆಳಿಗ್ಗೆ 8ಕ್ಕೆ ಪ್ರದರ್ಶಿಸಲಾಗುತ್ತದೆ. ಆದರೆ ಆ ಸಮಯದಲ್ಲಿ ಶ್ರಮಜೀವಿಗಳು, ವಿದ್ಯಾರ್ಥಿಗಳು, ಮಕ್ಕಳು, ಯುವಕರು ಸೇರಿದಂತೆ ಯಾರಿಗೂ ಬಿಡುವು ಇರುವುದಿಲ್ಲ. ಅದು ಚಲನಚಿತ್ರತೋತ್ಸವ ವೀಕ್ಷಿಸುವ ಸಮಯವೂ ಅಲ್ಲ. ಹಾಗಾಗಿ ಈ ಸಮಯವನ್ನು ಬದಲಾವಣೆ ಮಾಡಬೇಕು. ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯವರು ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ, ಸಮಯವನ್ನು ಬದಲಾವಣೆ ಮಾಡಿ, ಶ್ರಮಜೀವಿಗಳೂ ಚಿತ್ರ ನೋಡುವಂತಹ ವಾತಾವರಣ ಕಲ್ಪಿಸಬೇಕು’ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗದಲ್ಲಿ 12 ಚಿತ್ರಮಂದಿರಗಳಿದ್ದವು. ಈಗ ಕೇವಲ 4 ಮಾತ್ರ ಉಳಿದಿವೆ. ಸಿನಿಮಾಗಳಿಗೆ ಶಕ್ತಿ ಸಿಗದೇ ಹೋದರೆ ಇರುವ ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭೀಮಾ ಚಿತ್ರದ ನಟಿ ಪ್ರಿಯಾ ಶಠಮರ್ಷಣ್, ರಂಗಭೂಮಿ ಕಲಾವಿದ ಅವಿನಾಶ್, ಶಾಖಾಹಾರಿ ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಬೆಳ್ಳಿಮಂಡಲ ಸಂಚಾಲಕ ಎಚ್.ಯು.ವೈದ್ಯನಾಥ್, ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್, ಆಯುಕ್ತೆ ಕವಿತಾ ಯೋಗಪ್ಪನವರ್ ಇದ್ದರು.
ಎಚ್.ಎಸ್.ನಾಗಭೂಷನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಪ್ರದೀಪ್‌ಕುಮಾರ್, ವಾಸಕಿ ಕುಮಾರ್ ಅವರಿಂದ ಛಾಯಾಚಿತ್ರ ಹಾಗೂ ಕ್ಯಾಮೆರಾ ಪ್ರದರ್ಶನ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.