ADVERTISEMENT

ಶಿವಮೊಗ್ಗ | ರಾಜ್ಯೋತ್ಸವದ ದಿನ ಹಳದಿ–ಕೆಂಪು ರಂಗೋಲಿ ಹಾಕಲು ಡಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 15:38 IST
Last Updated 30 ಅಕ್ಟೋಬರ್ 2023, 15:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

iStock Photos

ಶಿವಮೊಗ್ಗ: ‘ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿವೆ. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಎಲ್ಲರೂ ಮನೆಗಳ ಎದುರು ಕೆಂಪು–ಹಳದಿ ಬಣ್ಣದ ರಂಗೋಲಿ ಬಿಡಿಸಿ’ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಳಸಿ ಮನೆಗಳ ಎದುರು ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯ ಬಿಡಿಸುವಂತೆ ಅವರು ಕೋರಿದ್ದಾರೆ.

‘ಈ ವರ್ಷ ವಿಶೇಷ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಲು ಉದ್ದೇಶಿಸಲಾಗಿದೆ.
ನವೆಂಬರ್ 1ರ ಬೆಳಿಗ್ಗೆ 9 ಗಂಟೆಗೆ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರ ಮಾಡಲಾಗುವುದು. ಅದನ್ನು  ಜಿಲ್ಲೆಯ ಸಮಸ್ತ ನಾಗರಿಕರು ಆಲಿಸಬೇಕು. ಆ ಸಂದರ್ಭದಲ್ಲಿ ತಾವು ಕುಳಿತಲ್ಲಿಂದ ಎದ್ದು ನಿಂತು ಗೌರವ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.

‘ಅಂದು ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿ ಪಟಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿ ಪಟ ಉತ್ಸವ ಆಚರಿಸಲಾಗುತ್ತಿದೆ. ಜಿಲ್ಲೆಯ ಸಮಸ್ತ ಜನ ಹಾಗೂ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ನಾಡು-ನುಡಿಯ ಅಭಿಮಾನದೊಂದಿಗೆ ಇದಕ್ಕೆ ಸಹಕರಿಸಬೇಕು’ ಎಂದಿದ್ದಾರೆ.

ಹಣತೆ ಹಚ್ಚಿ ಸಂಭ್ರಮಿಸೋಣ..

‘ನವೆಂಬರ್ 1ರಂದು ಸಂಜೆ 7 ಗಂಟೆಗೆ ಜಿಲ್ಲೆಯ ಎಲ್ಲಾ ಮನೆಗಳು ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಎದುರು ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಿ’ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.