ಶಿವಮೊಗ್ಗ: ತಮಿಳುನಾಡು ಪೊಲೀಸರ ಮುಂದೆ ಭಾನುವಾರ ಶರಣಾಗಿರುವ ನಕ್ಸಲ್ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾ ಮೃತಪಟ್ಟಿದ್ದಾರೆಂದು ಅವರ ಕುಟುಂಬಸ್ಥರು, ಗ್ರಾಮದವರು ದಶಕದ ಹಿಂದೆಯೇ ತಿಥಿ ಕಾರ್ಯ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಿದ್ದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗದ್ದೆ ಪ್ರಭಾ ಅವರ ಗ್ರಾಮ. ಬಾಲ್ಯದಲ್ಲಿ ತಾಯಿ ಕಳೆದುಕೊಂಡಿದ್ದ ಅವರು ತಂದೆಯ ಆರೈಕೆಯಲ್ಲೇ ಬೆಳೆದಿದ್ದರು. ಎರಡು ದಶಕದ ಹಿಂದೆ ನಕ್ಸಲ್ ಚಳವಳಿ ಮಲೆನಾಡಿನಲ್ಲಿ ವ್ಯಾಪಕಗೊಳ್ಳುತ್ತಿದ್ದ ಸಮಯದಲ್ಲೇ ನಕ್ಸಲ್ ಪಡೆ ಸೇರಿದ್ದರು. ನಂತರ ತಮ್ಮ ಹೆಸರನ್ನು ಪ್ರಭಾ ಎಂದು ಬದಲಿಸಿಕೊಂಡಿದ್ದರು. ಯೌವನದಲ್ಲಿ ಕಾಡು ಸೇರಿದ್ದ ಅವರು ನಂತರ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಅವರನ್ನು ವರಿಸಿದ್ದರು.
ಕಾಯಿನ್‌ಬೂತ್‌ನಿಂದ ಬಂದಿತ್ತು ಮರಣದ ಕರೆ:
ನಕ್ಸಲ್ ನಿಗ್ರಹ ಪಡೆ ಉಡುಪಿ ಜಿಲ್ಲೆಯ ಈದುವಿನಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಕೆಲವು ನಕ್ಸಲರು ಹತರಾದ ನಂತರ ಪ್ರಭಾ ಸಹ ಭೂಗತವಾಗಿದ್ದರು. ಕುಟುಂಬಸ್ಥರ ಜತೆ ಅವರ ಸಂಪರ್ಕ ಕಡಿತಗೊಂಡಿತ್ತು. 2010ರ ಆಗಸ್ಟ್‌ನಲ್ಲಿ ಗ್ರಾಮದ ಮುಖಂಡರೊಬ್ಬರಿಗೆ ಕಾಯಿನ್‌ಬೂತ್‌ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಕಾಡಿನಲ್ಲಿ ಅಡಗಿದ್ದ ನಿಮ್ಮೂರಿನ ಹುಡುಗಿ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಇಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿ ಎಂದಿದ್ದ. ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಮಗಳು ಅರಣ್ಯದಲ್ಲಿ ಸೂಕ್ತ ಆರೈಕೆ ಸಿಗದೇ ಸತ್ತಿರಬಹುದು ಎಂದು ತಂದೆ ನಂಬಿದ್ದರು. ಮೃತದೇಹ ಸಿಗದಿದ್ದರೂ ತಿಥಿ ಕಾರ್ಯ ಪೂರೈಸಿದ್ದರು. ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದ್ದರು.
ಪತಿ ಬಂಧನ ಶರಣಾಗತಿಗೆ ಪ್ರಮುಖ ಕಾರಣ:
ಕೇರಳ ಪೊಲೀಸರು ಈಚೆಗೆ ಪತಿ ಕೃಷ್ಣಮೂರ್ತಿ ಅವರನ್ನು ಬಂಧಿಸಿದ ನಂತರ ಪ್ರಭಾ ಖಿನ್ನತೆಗೆ ಒಳಗಾಗಿದ್ದರು. ಪಾರ್ಶ್ವವಾಯುವಿಂದ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ಅವರು. ಸಮಾಜ ತೊರೆದು ಹೊರಗೆ ಇರಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಈ ಎಲ್ಲ ಕಾರಣಗಳಿಂದ ತಮಿಳುನಾಡಿನತಿರಪ್ಪತ್ತೂರು ಪೊಲೀಸರ ಮುಂದೆ ಶರಣಾಗಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಭಾ ವಿರುದ್ಧ 41 ಪ್ರಕರಣಗಳು:
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಪ್ರಭಾ ವಿರುದ್ಧ 41 ಪ್ರಕರಣಗಳು ದಾಖಲಾಗಿವೆ. ‘ಶಿವಮೊಗ್ಗ ಜಿಲ್ಲೆಯಲ್ಲಿ 4 ಪ್ರಕರಣಗಳಿವೆ. ಬಾಡಿವಾರೆಂಟ್ ಪಡೆದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆ ತರಲು ಪ್ರಯತ್ನಗಳು ನಡೆದಿವೆ. ನಂತರ ವಿಚಾರಣೆ ಆರಂಭಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.