ಹೊಸನಗರ: ತಾಲ್ಲೂಕಿನ ನಗರ ಬಳಿಯ ಚಿಕ್ಕಪೇಟೆಯಲ್ಲಿ ನಿರ್ಮಿಸಲಾಗಿರುವ ನೂತನ ಸೇತುವೆ ಕಾಮಗಾರಿ ಹಳ್ಳ ಹಿಡಿದಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಕ್ಕದಲ್ಲೇ ಇದ್ದ ಹಳೆಯ ಸೇತುವೆಯೂ ಕುಸಿಯುವ ಹಂತದಲ್ಲಿದೆ. ಎರಡೂ ಸೇತುವೆಯ ಪಿಚ್ಚಿಂಗ್ ಕುಸಿದು ಈ ಭಾಗದ ಜನವಸತಿ ಪ್ರದೇಶಗಳು ಸಂಪರ್ಕ ಕಡಿದುಕೊಳ್ಳುವ ಭೀತಿ ಎದುರಾಗಿದೆ.
ತಾಲ್ಲೂಕಿನಲ್ಲಿ ಬ್ರಹ್ಮೇಶ್ವರ, ಕಾರಣಗಿರಿ, ಅರೋಡಿ, ಮತ್ತಿಮನೆ, ಮಡೋಡಿ ಸೇರಿದಂತೆ ಹೆದ್ದಾರಿಯಲ್ಲಿ ಬರುವ ಹಳೇ ಸೇತುವೆಗಳ ಬದಲಿಗೆ 7 ಹೊಸ ಸೇತುವೆ ನಿರ್ಮಾಣಕ್ಕೆ ₹ 19 ಕೋಟಿ ಮಂಜೂರಾಗಿತ್ತು. ಅದರಂತೆ ಬಹುತೇಕ ಸೇತುವೆಗಳ ಕಾಮಗಾರಿ ಮುಗಿಯವ ಹಂತದಲ್ಲಿವೆ. ಈ ಪೈಕಿ ನಗರ ಸಮೀಪದ ಚಿಕ್ಕಪೇಟೆ ಸೇತುವೆಯೂ ಒಂದು.
ಪಿಚ್ಚಿಂಗ್ ಕುಸಿತ: ಈ ಭಾಗದಲ್ಲಿ ವಾರದಿಂದ ಮಳೆ ಬಿರುಸುಗೊಂಡಿದ್ದು, ಸೇತುವೆ ಇಕ್ಕೆಲಗಳಲ್ಲಿನ ಪಿಚ್ಚಿಂಗ್ ಮಣ್ಣು ಕೊಚ್ಚಿ ಹೋಗುತ್ತಿದೆ. ಇದರ ಜೊತೆಗೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಕ್ಕದಲ್ಲೇ ಇರುವ ಹಳೇ ಸೇತುವೆಗೂ ಅಪಾಯ ಎದುರಾಗಿದೆ.
7 ಸೇತುವೆಗಳ ಪೈಕಿ ನಗರ– ಚಿಕ್ಕಪೇಟೆ ಸೇತುವೆ ನಿರ್ಮಾಣಕ್ಕೆ ₹4.29 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡು 300 ಮೀ. ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ, ನಿರಂತರ ಮಳೆಯಿಂದಾಗಿ ಕಾಮಗಾರಿಯ ನಿಜ ಬಣ್ಣ ಬಯಲಾಗಿದೆ.
ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೇ ಕಾಮಗಾರಿ ಕೈಗೊಂಡ ಪರಿಣಾಮ ನೂತನ ಮತ್ತು ಹಳೇ ಸೇತುವೆಗಳ ಸೈಡ್ ಪಿಚ್ಚಿಂಗ್ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಹೊಸ ಸೇತುವೆಯೊಂದನ್ನು ಬಿಟ್ಟು ಉಳಿದೆಲ್ಲವೂ ನೀರು ಪಾಲಾಗುವ ಅಪಾಯ ಎದುರಾಗಿದೆ.
‘ಕಳಪೆ ಕಾಮಗಾರಿ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಹೊಸ ಸೇತುವೆಯ ಎರಡು ಸೈಡ್ ವಾಲ್‌ಗೆ ಪೂರಕವಾಗಿ ಲೇಯರ್ ಎಂಬೆಕ್ಮೆಂಟ್ ಹಾಕಬೇಕಿತ್ತು. ಅಲ್ಲದೇ ಗುಣಮಟ್ಟ ಇಲ್ಲದ ಮಣ್ಣನ್ನು ಬಳಸಲಾಗಿದೆ. ಲೇಯರ್ ಸಮತಟ್ಟುಗೊಳಿಸದೇ 2 ಮೀಟರ್‌ನಷ್ಟು ಡಸ್ಟ್ ಮಣ್ಣನ್ನು ಒಂದೇ ಬಾರಿ ಸುರಿದು ಸಮತಟ್ಟು ಮಾಡಲಾಗಿದೆ. ಇಲ್ಲಿ ಹಿನ್ನೀರು ನಿಲ್ಲುತ್ತದೆ. ಸೇತುವೆಯ ಮುಕ್ಕಾಲು ಭಾಗದವರೆಗೂ ನೀರು ತುಂಬುತ್ತದೆ. ಈಗ ಹಾಕಿರುವ ಮಣ್ಣು ಉಳಿಯಲು ಸಾಧ್ಯವಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ರವಿ ಶಾಸ್ತ್ರಿ ಆರೋಪಿಸುತ್ತಾರೆ.
ಕೊಲ್ಲೂರು, ಸಿಗಂದೂರು, ಕುಂದಾಪುರ, ಉಡುಪಿ ಸೇರಿದಂತೆ ಶಿವಮೊಗ್ಗ ಮತ್ತು ಕರಾವಳಿ ಭಾಗಕ್ಕೆ ಈ ಸೇತುವೆಯು ಸಂಪರ್ಕ ಕೊಂಡಿಯಾಗಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ತುರ್ತಾಗಿ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಮಗಾರಿ ಎಂಬೆಕ್ಮೆಂಟ್ ವಿಚಾರದಲ್ಲಿ ಲೇಯರ್ ಬೈ ಲೇಯರ್ ಸಮತಟ್ಟು ಮಾಡಬೇಕಿತ್ತು. ಹಾಗೆ ಮಾಡದೇ 2 ಮೀಟರ್‌ನಷ್ಟು ಮಣ್ಣು ಸುರಿದು ಸಮತಟ್ಟು ಮಾಡಲಾಗಿದೆ. ಅಲ್ಲದೇ ಗೊಣೆ ಮಣ್ಣು ಹಾಕದೇ ಹುಡಿ ಮಣ್ಣು ಬಳಕೆ ಮಾಡಿರುವುದು ಕಾಮಗಾರಿ ಅವ್ಯವಸ್ಥೆಗೆ ಕಾರಣವಾಗಿದೆ–ರವಿ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತ
ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುತ್ತೇನೆ. ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯರು ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ-ನಿಂಗಪ್ಪ ಎಇಇ ರಾಷ್ಟ್ರೀಯ ಹೆದ್ದಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.