ADVERTISEMENT

ಶಿವಮೊಗ್ಗ | ಸಿಬ್ಬಂದಿ ಕೊರತೆ: ಯಂತ್ರಗಳಿದ್ದರೂ ಬಳಕೆ ಇಲ್ಲ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಮರ್ಪಕ ಸೌಲಭ್ಯ

ಎಂ.ರಾಘವೇಂದ್ರ
Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಯ ಸ್ಕಾನಿಂಗ್‌ ಯಂತ್ರ ತಜ್ಞರಿಲ್ಲದೆ ದೂಳು ಹಿಡಿಯುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಯ ಸ್ಕಾನಿಂಗ್‌ ಯಂತ್ರ ತಜ್ಞರಿಲ್ಲದೆ ದೂಳು ಹಿಡಿಯುತ್ತಿರುವುದು   

ಶಿವಮೊಗ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೌಲಭ್ಯ. ಒಂದು ಆಸ್ಪತ್ರೆಯಲ್ಲಿ ಆಧುನಿಕ ಯಂತ್ರಗಳಿದ್ದರೂ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಅದರ ಸೇವೆ ಸಿಗುತ್ತಿಲ್ಲ. ಇನ್ನು ಕೆಲವೆಡೆ ಯಂತ್ರಗಳೇ ಇಲ್ಲ. ಈ ಕುರಿತು ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಬೆಳಕು ಚೆಲ್ಲಿದೆ.

ಸಾಗರ: ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಅತ್ಯಾಧುನಿಕ ಯಂತ್ರಗಳಿದ್ದರೂ ವೈದ್ಯ, ತಜ್ಞ ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಅವುಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. 

ಕೋವಿಡ್ ಸಮಯದಲ್ಲಿ ಜನರ ಬೇಡಿಕೆಯಂತೆ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಘಟಕ ಸ್ಥಾಪಿಸಿ ಹಲವು ತಿಂಗಳು ಕಳೆದಿದ್ದರೂ  ಅದರ ಕಾರ್ಯಾರಂಭಕ್ಕೆ ಚಾಲನೆ ದೊರಕಿಲ್ಲ. ಈ ಕಾರಣ ಈ ಪ್ಲಾಂಟ್ ನಿರುಪಯುಕ್ತವಾಗಿದೆ. 

ADVERTISEMENT

ಡಯಾಲಿಸಿಸ್ ಘಟಕದಲ್ಲಿ 8 ಯಂತ್ರಗಳಿದ್ದರೂ ಕೆಲವು ಯಂತ್ರಗಳು ಆಗಾಗ ಕೈಕೊಡುತ್ತಿವೆ. ಪ್ರತಿ ತಿಂಗಳು 400ರಿಂದ 500 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ಹೆಚ್ಚುವರಿ ಯಂತ್ರ ಪೂರೈಕೆಗೆ ಈಗಾಗಲೆ ಪ್ರಸ್ತಾವ ಸಲ್ಲಿಸಲಾಗಿದೆ. 

ತುರ್ತು ಚಿಕಿತ್ಸಾ ನಿಗಾ ಘಟಕ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕಿದ್ದು, ಇದಕ್ಕಾಗಿ ಅಗತ್ಯವಿರುವ ಪ್ರತ್ಯೇಕ ವೈದ್ಯ ಸಿಬ್ಬಂದಿಯೇ ಆಸ್ಪತ್ರೆಯಲ್ಲಿ ಇಲ್ಲ. ಇತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ವೈದ್ಯ ಸಿಬ್ಬಂದಿಯೇ ಈ ಘಟಕವನ್ನು ನೋಡಿಕೊಳ್ಳುವ ಅನಿವಾರ್ಯ ಎದುರಾಗಿದೆ.

ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಅಗತ್ಯವಿರುವ ರಕ್ತ, ಮೂತ್ರ ಮೊದಲಾದ ಪರೀಕ್ಷೆಗಳಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಚೀಟಿ ಬರೆದು ಕೊಟ್ಟರೆ ಅದನ್ನು ಪರೀಕ್ಷಿಸುವ ಪ್ರಯೋಗಾಲಯ ಆಸ್ಪತ್ರೆಯಲ್ಲಿ ಇದೆ. ಆದರೆ ಇಲ್ಲಿ ಬರುವ ವರದಿಗೂ, ಖಾಸಗಿ ಲ್ಯಾಬ್‌‌ಗಳಲ್ಲಿ ಬರುವ ವರದಿಗೂ ವ್ಯತ್ಯಾಸಗಳು ಕಂಡು ಬರುತ್ತಿರುವುದು ಸರ್ಕಾರಿ ಆಸ್ಪತ್ರೆಯಲ್ಲಿನ ಪ್ರಯೋಗಾಲಯದ ವಿಶ್ವಾಸರ್ಹತೆಗೆ ಕುಂದು ತಂದಿದೆ ಎಂದು ರೋಗಗಳು ಆರೋಪಿಸುತ್ತಾರೆ.

ಸ್ಕಾನಿಂಗ್‌ ವಿಭಾಗವಿಲ್ಲ; ಬಡವರ ಜೇಜಿಗೆ ಕತ್ತರಿ

ವಿ. ನಿರಂಜನ 

ತೀರ್ಥಹಳ್ಳಿ: ತಾಲ್ಲೂಕಿನ ಸಮುದಾಯ ಜೆಸಿ ಆಸ್ಪತ್ರೆಯಲ್ಲಿ ವಿಕಿರಣಶಾಸ್ತಜ್ಞರ (ರೇಡಿಯಾಲಜಿಸ್ಟ್)‌ ಕೊರತೆ ಇದೆ. ಬಡ ರೋಗಿಗಳು ಸ್ಕಾನಿಂಗ್‌ ಸೌಲಭ್ಯ ಪಡೆಯಲು ಖಾಸಗಿ ಆಸ್ಪತ್ರೆ ಬಾಗಿಲು ತಟ್ಟಬೇಕಿದೆ.

100 ಹಾಸಿಗೆಗೆ ಮೇಲ್ದರ್ಜೆಗೇರಿದ ಜಯಚಾಮರಾಜೇಂದ್ರ ಆಸ್ಪತ್ರೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಿಟಿ, ಎಂಆರ್‌ಐ, ಪಿಇಟಿ ಮುಂತಾದ ಸ್ಕಾನಿಂಗ್‌ ಸೇವಾ ವಿಭಾಗ ಇಲ್ಲದ ಪರಿಣಾಮ ಸಾವಿರಾರು ರೂಪಾಯಿ ತೆತ್ತು ಸ್ಕಾನಿಂಗ್‌ ಪರೀಕ್ಷೆ ಮಾಡಿಸಬೇಕಾದ ಅನಿವಾರ್ಯ ಎದುರಾಗಿದೆ. ಸ್ಕಾನಿಂಗ್‌ ವಿಭಾಗ ಇಲ್ಲದ ಕಾರಣ ಗರ್ಭಿಣಿಯರ ಸಂಕಟವಂತೂ ಹೇಳತೀರದು.

ವಿಕಿರಣಶಾಸ್ತ್ರಜ್ಞರ ಕೊರೆತೆಯಿಂದ ಸ್ಕಾನಿಂಗ್‌ ವಿಭಾಗ ಆರಂಭವಾಗುತ್ತಿಲ್ಲ. ಪ್ರತಿನಿತ್ಯ ಸುಮಾರು 25 ರಿಂದ 30 ಜನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. 3 ರಿಂದ 4 ದಿನ ಕಾದು ಸ್ಕಾನಿಂಗ್‌ ರಿಪೋರ್ಟ್‌ ಪಡೆಯುವ ದುಸ್ಥಿತಿ ಹಲವು ಕುಟುಂಬಕ್ಕೆ ಶಾಪವಾಗಿ ಪರಿಣಮಿಸಿದೆ.

ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಸುಮಾರು 15 ವರ್ಷಗಳಿಂದ ವಿಕಿರಣಶಾಸ್ತಜ್ಞರ ಹುದ್ದೆ ಖಾಲಿ ಇದೆ. ವೈದ್ಯರ ಆಗಮನದ ನಿರೀಕ್ಷೆಯಿಂದ ಸ್ಕಾನಿಂಗ್‌ ಯಂತ್ರ (ಅಲ್ಟಾಸೌಂಡ್‌) ಆಸ್ಪತ್ರೆಗೆ ಬಂದಿತ್ತು. ಯಂತ್ರ ಬಳಕೆಯಾಗದ ಕಾರಣ ದೂಳು ಹಿಡಿದ ಸ್ಥಿತಿಯಲ್ಲಿತ್ತು. ಇದೀಗ ಯಂತ್ರ ಅನುಪಯುಕ್ತ ಎಂಬ ವರದಿ ನೀಡಿ ಮೂಲೆಗೆ ತಳ್ಳಲಾಗಿದೆ.

ಸಂಜೀವಿನಿ ಟ್ರಸ್ಟ್‌ ಮೂಲಕ ನಡೆಯುತ್ತಿರುವ ಡಯಾಲಿಸಿಸ್‌ ಘಟಕದಲ್ಲಿ 5 ಯಂತ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿನಿತ್ಯ ಈ ಘಟಕದ ಪ್ರಯೋಜನವನ್ನು 29 ರೋಗಿಗಳು ಪಡೆಯುತ್ತಿದ್ದಾರೆ. ಒಬ್ಬ ರೋಗಿ ಈಚೆಗೆ ಡಯಾಲಿಸ್‌ಗಾಗಿ ಬೇಡಿಕೆ ಸಲ್ಲಿಸಿದ್ದು ಹೆಚ್ಚುವರಿ ಯಂತ್ರದ ಅಗತ್ಯ ಸದ್ಯಕ್ಕೆ ಸೃಷ್ಟಿಯಾಗಿದೆ.

ತಾಲ್ಲೂಕು ಆಸ್ಪತ್ರೆಯ ಉತ್ತಮ ಸೇವೆಯನ್ನು ಗಮನಿಸಿ ಶೃಂಗೇರಿ, ಕೊಪ್ಪ, ಹೊಸನಗರ, ಎನ್‌.ಆರ್‌. ಪುರ, ಬಾಳೆಹೊನ್ನೂರು ಭಾಗದಿಂದ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಎಲ್ಲಾ ಮಾದರಿಯ ರಕ್ತ ಪರೀಕ್ಷೆ ಯಂತ್ರಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮೂಳೆ ಮುರಿತಕ್ಕೆ ಸಂಬಂಧಿಸಿದಂತೆ ಎಕ್ಸ್‌ರೇ ವಿಭಾಗ, ಸಿಆರ್‌ಎಂ ಯಂತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ಡಾ. ಗಣೇಶ ಭಟ್‌ ವೈದ್ಯಾಧಿಕಾರಿ
ವಿನಂತಿ ಎಸ್‌. ಕರ್ಕಿ
ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ವಾರ್ಡ್ 
ಶಿಕಾರಿಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕ

ಸ್ಕ್ಯಾನಿಂಗ್‌ ಯಂತ್ರ ಪ್ರಸ್ತುತ ಬಳಕೆಯಲ್ಲಿ ಇಲ್ಲ. ವಿಕಿರಣಶಾಸ್ತ ತಜ್ಞ ವೈದ್ಯರು ಆಗಮಿಸಿದರೆ ಪ್ರತಿನಿತ್ಯ 40 ರೋಗಿಗಳು ಸ್ಕಾನಿಂಗ್‌ ಸೌಲಭ್ಯದ ಅನುಕೂಲತೆ ಪಡೆಯಬಹುದು.  ಡಾ. ಗಣೇಶ ಭಟ್‌ ವೈದ್ಯಾಧಿಕಾರಿ ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆ

ಸ್ಕ್ಯಾನಿಂಗ್‌ ಸೌಲಭ್ಯ ಇಲ್ಲದೇ ಇರುವುದರಿಂದ ಸ್ತ್ರೀ ರೋಗ ಪತ್ತೆಗೆ ಹಿನ್ನಡೆಯಾಗುತ್ತಿದೆ. ಗರ್ಭಿಣಿಯರು ಸ್ಕಾನಿಂಗ್‌ ಮಾಡಿಸಲು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ಅಲೆಯುವ ಗೋಳು ಹೇಳತೀರದು. - ವಿನಂತಿ ಎಸ್‌. ಕರ್ಕಿ ಕುಡುಮಲ್ಲಿಗೆ ಗ್ರಾ.ಪಂ. ಸದಸ್ಯೆ

ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ತಜ್ಞ ವೈದ್ಯರ ನೇಮಕವಾದಲ್ಲಿ ರೋಗಿಗಳ ಪರೀಕ್ಷೆಗಳನ್ನು ಮಾಡಬಹುದು. ಕೆಲ ಯಂತ್ರಗಳೂ ಇಲ್ಲದ ಕಾರಣ ಸಮಸ್ಯೆಯಾಗಿದೆ. ಸಾಮಾನ್ಯ ರೋಗ ಪರೀಕ್ಷಾ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.  ಡಾ. ಶಾಂತರಾಜ್ ಆಡಳಿತ ವೈದ್ಯಾಧಿಕಾರಿ ಹೊಸನಗರ ಆಸ್ಪತ್ರೆ

ಶಿಕಾರಿಪುರ: ಆಸ್ಪತ್ರೆಯಲ್ಲಿಲ್ಲ ಸಿಟಿ ಸ್ಕ್ಯಾನ್ ಯಂತ್ರ  ಎಚ್‌.ಎಸ್‌. ರಘು ಶಿಕಾರಿಪುರ: ರೋಗಿಗಳ ಅನುಕೂಲಕ್ಕಾಗಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಯಂತ್ರ ಅಳವಡಿಸುವ ಅಗತ್ಯತೆ ಇದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಸಿಟಿ ಸ್ಕ್ಯಾನ್ ಮಾಡಿಸಲು ಖಾಸಗಿ ಲ್ಯಾಬ್‌ಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕಾರಿಪುರದ ಖಾಸಗಿ ಲ್ಯಾಬ್ ಶಿವಮೊಗ್ಗ ನಗರಗಳಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ರೋಗಿಗಳ ಖರ್ಚು ತಪ್ಪಿಸಲು ಸರ್ಕಾರಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಒದಗಿಬೇಕು ಎಂಬುದು ಸ್ಥಳೀಯರ ಒತ್ತಾಯ. ಪ್ರಸ್ತುತ ಅಲ್ಟ್ರಾ ಸೌಂಡ್ ಸ್ಕ್ಯಾನ್ ಯಂತ್ರವಿದ್ದು ಸುಸ್ಥಿಯಲ್ಲಿದೆ. ದಿನಕ್ಕೆ 40 ರಿಂದ50 ರೋಗಿಗಳಿಗೆ ಸ್ಕ್ಯಾನ್ ಸೌಲಭ್ಯ ದೊರೆಯುತ್ತಿದೆ. ಆದರೆ ಕೆಲವೊಮ್ಮೆ ರೋಗಿಗಳು ಹೆಚ್ಚಾದಾಗ ಸ್ಕ್ಯಾನ್ ಮಾಡಿಸಲು ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ರೋಗಿಗಳು ಖಾಸಗಿ ಲ್ಯಾಬ್‌ಗಳಲ್ಲಿ ಸ್ಕ್ಯಾನ್ ಮಾಡಿಸುವ ಅನಿವಾರ್ಯತೆ ಇದೆ. ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರದಲ್ಲಿ ಪ್ರತಿ ದಿನ 80 ರೋಗಿಗಳು ಎಕ್ಸ್ ರೇ ಮಾಡಿಸುತ್ತಿದ್ದಾರೆ. ಕೆಲವೊಮ್ಮೆ ಎಕ್ಸ್ ರೇ ವಿಭಾಗದಲ್ಲೂ ರೋಗಿಗಳು ಎಕ್ಸ್ ರೇ ಮಾಡಿಸಲು ದಟ್ಟಣೆ ಇರುತ್ತದೆ. ಡಯಾಲಿಸಿಸ್ ವಿಭಾಗದಲ್ಲಿ 6 ಯಂತ್ರಗಳಿದ್ದು 6 ಬೆಡ್‌ಗಳಿವೆ. 6ರಲ್ಲಿ ಒಂದು ಯಂತ್ರ ಕಾರ್ಯ ನಿರ್ವಹಿಸುತ್ತಿಲ್ಲ. ದಿನಕ್ಕೆ 15 ಮಂದಿ ಡಯಾಲಿಸಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಶಿಕಾರಿಪುರ ತಾಲ್ಲೂಕು ಸೇರಿದಂತೆ ಸೊರಬ ಹೊನ್ನಾಳಿ ಹಿರೇಕೆರೂರು ತಾಲ್ಲೂಕಿನ ರೋಗಿಗಳು ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದ ಸೌಲಭ್ಯ ಪಡೆಯುತ್ತಿದ್ದಾರೆ. ಕಾರ್ಯನಿರ್ವಹಿಸಿದ ಯಂತ್ರವನ್ನು ಸರಿಪಡಿಸಬೇಕು ಎಂದು ಹೆಸರು ಬಹಿರಂಗಪಡಿಸದ ರೋಗಿಯೊಬ್ಬರು ಮನವಿ ಮಾಡಿದರು.

ತಜ್ಞ ವೈದ್ಯರಿಲ್ಲ ಪರಿಕರಗಳೂ ಲಭ್ಯವಿಲ್ಲ.. ರವಿ ನಾಗರಕೊಡಿಗೆ ಹೊಸನಗರ: ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕು ಹಣೆಪಟ್ಟಿಯ ಹೊಸನಗರದ ತಾಲ್ಲೂಕು  ಆಸ್ಪತ್ರೆ ಕೂಡ ಹಿಂದುಳಿದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿನ ಎಲ್ಲಾ ವಿಭಾಗದಲ್ಲಿ ಇರಬೇಕಾದ ಅವಶ್ಯ ವೈದ್ಯರು ಇಲ್ಲ. ಲಭ್ಯವಿರಬೇಕಾಗಿದ್ದ 13 ವೈದ್ಯರ ಪೈಕಿ 4 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇದ್ದರೇ ಮಾತ್ರ ಆಸ್ಪತ್ರೆಯಲ್ಲಿ ಪರೀಕ್ಷೆಗಳು ನಡೆಯುತ್ತವೆ. ಇಲ್ಲಿ ಅವಶ್ಯ ತಜ್ಞ ವೈದ್ಯರು ನೇಮಕವಾಗದೇ ಇರುವುದರಿಂದ ರೋಗಿಗಳ ಪರೀಕ್ಷೆ ಮಾಡುವ ವ್ಯವಸ್ಥೆಯೇ ಇಲ್ಲ. ಕೇವಲ ರಕ್ತ ಪರೀಕ್ಷೆ ಬಿ.ಪಿ. ಶುಗರ್ ಇಸಿಜಿ ಪರೀಕ್ಷೆ ಮಾತ್ರ ನಡೆಯುತ್ತಿವೆ. ಪರೀಕ್ಷಾ ಕೊಠಡಿಗಳು ಎಲ್ಲವೂ ಉತ್ತಮವಾಗಿದೆ ಆದರೆ ತಜ್ಞರೇ ಇಲ್ಲ. ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರ ನೇಮಕವಾಗದೆ ಆ ವಿಭಾಗಗಳು ಖಾಲಿ ಉಳಿದಿವೆ. ಪ್ರಮುಖವಾಗಿ ಪ್ರಸೂತಿ ತಜ್ಞರು ಇಎನ್‌ಟಿ ಚರ್ಮರೋಗ ತಜ್ಞರು ಅರವಳಿಕೆ ತಜ್ಞರು ಫಿಜಿಷಿಯನ್ ವೈದ್ಯ ಹುದ್ದೆಗಳು ಖಾಲಿ ಉಳಿದಿವೆ. ಈ ವಿಭಾಗದಲ್ಲಿ ತಜ್ಞ ವೈದ್ಯರು ಕರ್ತವ್ಯದಲ್ಲಿದ್ದರೆ ಬರುವ ರೋಗಿಗಳಿಗೆ ವಿಶೇಷ ಪರೀಕ್ಷೆಯ ಅನಿವಾರ್ಯತೆ ಇರುತ್ತದೆ. ಆದರೆ ಇಲ್ಲಿ ಅಂತಹ ವೈದ್ಯರು ಇಲ್ಲವಾದ ಕಾರಣ ಪರೀಕ್ಞಾ ಪದ್ಧತಿ ಇಲ್ಲ. ತಜ್ಞ ವೈದ್ಯರ ನೇಮಕ ಕುರಿತಾಗಿ ಸರ್ಕಾರಕ್ಕೆ ಮಾಡಿಕೊಂಡ ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ. ಸ್ಕ್ಯಾನಿಂಗ್‌ ಯಂತ್ರ ಇಲ್ಲ. ಆರ್ಥೋ ವಿಭಾಗದಲ್ಲಿ ಸಿ.ಆರ್‌ಎಂ ಯಂತ್ರ ಲಭ್ಯವಿಲ್ಲ. ವೈದ್ಯರಿದ್ದರೂ ಸ್ಕ್ಯಾನ್ ನಡೆಯುತ್ತಿಲ್ಲ. ಸಾಮಾನ್ಯ ಸ್ಕ್ಯಾನ್‌ಗೂ ಪಕ್ಕದ ತೀರ್ಥಹಳ್ಳಿ ಸಾಗರಕ್ಕೆ ತೆರಳಬೇಕಾಗಿದೆ. ಗರ್ಭಿಣಿಯರ ಗೋಳು: ತಾಲ್ಲೂಕಿನಲ್ಲಿನ ಯಾವುದೇ ಆಸ್ಪತ್ರೆಯಲ್ಲೂ ಪ್ರಸೂತಿ ತಜ್ಞರಿಲ್ಲ. ಇದರಿಂದ ಗರ್ಭಿಣಿಯರು ತೊಂದರೆ ಎದುರಿಸುವಂತಾಗಿದೆ. ಸಾಮಾನ್ಯ ಪರೀಕ್ಷೆಗೂ ಸಾಗರ ತೀರ್ಥಹಳ್ಳಿ ಶಿವಮೊಗ್ಗಕ್ಕೆ ಹೋಗಿ ಬರಬೇಕಾದ ದುಸ್ಥಿತಿ ಇದೆ.  ಶಸ್ತ್ರಚಿಕಿತ್ಸಕ ಇದ್ದರೂ ಅಪರೇಷನ್ ಇಲ್ಲ: ತಾಲ್ಲೂಕು ಆಸ್ಪತ್ರೆಯಲ್ಲಿ ಸರ್ಜನ್ ಇದ್ದಾರೆ. ಆದರೆ ಅವರಿಗೆ ಅಪರೇಷನ್ ಮಾಡುವ ಯೋಗವಿಲ್ಲ. ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಿಲ್ಲ. ಇದರಿಂದ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. 

ಸೊರಬ ಆಸ್ಪತ್ರೆಗೆ ಬೇಕಿದೆ ಡಯಾಲಿಸಿಸ್ ಘಟಕ ಸೊರಬ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಡಯಾಲಿಸಿಸ್ (ರಕ್ತ ಶುದ್ಧಿಕರಣ ಘಟಕ) ಯಂತ್ರಗಳ ಕೊರತೆ ಕಾಡುತ್ತಿದೆ. ಇದರಿಂದ ತಕ್ಷಣದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಅವಶ್ಯವಿರುವ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕನಿಷ್ಠ ಸೌಲಭ್ಯಗಳು ಇಲ್ಲದೆ ಜನರು ನೆರೆಯ ತಾಲ್ಲೂಕುಗಳಲ್ಲಿ ಸೇವೆ ಪಡೆಯುವಂತಾಗಿದೆ. ಹೆರಿಗೆ ಜ್ವರಶೀತಕ್ಕೆ ಚಿಕಿತ್ಸೆ ಹೊರತುಪಡಿಸಿದರೆ ಇಲ್ಲಿ ಯಾವುದೇ ದೊಡ್ಡ ಪ್ರಮಾಣದ ಶಸ್ತ್ರಚಿಕತ್ಸೆ ನಡೆಯುತ್ತಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ಪತ್ತೆ ಹಚ್ಚುವ ಯಂತ್ರಗಳೂ ಇಲ್ಲ. ಇಲ್ಲಿ 2 ಡಯಾಲಿಸಿಸ್ ಯಂತ್ರಗಳು ಇವೆ. ಅದರಲ್ಲಿ ಒಂದು ಯಂತ್ರ ಹಾಳಾಗಿದೆ. ಪ್ರತಿ ರೋಗಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವುದರಿಂದ ರೋಗಿಗಳ ಸಂಖ್ಯೆಗೆ ಅನುಗುಣವಾಗಿ 4 ಡಯಾಲಿಸಿಸ್ ಯಂತ್ರಗಳ ಅವಶ್ಯಕತೆ ಇದೆ. ಮುಂಚಿತವಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ರೋಗಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಏಕಾಏಕಿ ಡಯಾಲಿಸಿಸ್ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಡಯಾಲಿಸಿಸ್ ಯಂತ್ರಗಳ ಕೊರತೆ ಕಾಡುತ್ತಿದೆ. ಅನಿವಾರ್ಯವಾಗಿ ಸಾಗರ ಶಿಕಾರಿಪುರಕ್ಕೆ ರೋಗಿಗಳು ಹೋಗಬೇಕಾಗಿದೆ. ಬಳಸಿದ ವಸ್ತುಗಳನ್ನು ಮರು ಬಳಕೆ ಮಾಡಿಕೊಳ್ಳಲು ದೊಡ್ಡ ಪ್ರಮಾಣದ ಆಟೊಕ್ಲೇ ಯಂತ್ರದ ಅಗತ್ಯ ಇದೆ. 1 ಎಕ್ಸರೇ ಯಂತ್ರ (500 ಒಂ) 1 ಅಲ್ಟ್ರಾಸೌಂಡ್ ಯಂತ್ರದ ಅವಶ್ಯಕತೆ ಇದೆ. ಇದರಿಂದ ಅಪಘಾತಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಎದುರಾಗುವ ಸಂದರ್ಭದಲ್ಲಿ ಹಾಗೂ ಗರ್ಭಿಣಿಯರಿಗೆ ಅನುಕೂಲವಾಗಲಿದೆ. ಆಸ್ಪತ್ರೆಗಳಲ್ಲಿ ಅವಶ್ಯಕವಿರುವ ಯಂತ್ರಗಳ ಸೌಲಭ್ಯ ಕಲ್ಪಿಸಬೇಕು. ವೈದ್ಯರ ಕೊರತೆ ನೀಗಿಸುವಲ್ಲಿ ಸರ್ಕಾರ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.