ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿವೈಆರ್‌ಗೆ ನಾಲ್ಕನೇ ಬಾರಿ ಗೆಲುವಿನ ಗರಿ

ಭಾರೀ ಅಂತರದ ಜಯ ದಾಖಲಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 8:07 IST
Last Updated 5 ಜೂನ್ 2024, 8:07 IST
ಶಿವಮೊಗ್ಗದಲ್ಲಿ ಮಂಗಳವಾರ ಬಿ.ವೈ. ರಾಘವೇಂದ್ರ ಅವರಿಗೆ ಬೆಂಬಲಿಗರು ಕೊಬ್ಬರಿ ಹಾರ ಹಾಕಿ ವಿಜಯೋತ್ಸವ ಆಚರಿಸಿದರು 
ಶಿವಮೊಗ್ಗದಲ್ಲಿ ಮಂಗಳವಾರ ಬಿ.ವೈ. ರಾಘವೇಂದ್ರ ಅವರಿಗೆ ಬೆಂಬಲಿಗರು ಕೊಬ್ಬರಿ ಹಾರ ಹಾಕಿ ವಿಜಯೋತ್ಸವ ಆಚರಿಸಿದರು    

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಅಂತರದೊಂದಿಗೆ ಸತತ ನಾಲ್ಕನೇ ಬಾರಿಗೆ  ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲುವಿನ ನಗೆ ಬೀರಿದ್ದಾರೆ.

ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರನ್ನು 2,43,715 ಮತಗಳ ಅಂತರದಿಂದ ಸೋಲಿಸಿದ ರಾಘವೇಂದ್ರ ಸುಲಭ ಗೆಲುವು ದಾಖಲಿಸಿದರು. ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಬಿ.ವೈ.ರಾಘವೇಂದ್ರ 7,78,721, ಗೀತಾ ಶಿವರಾಜಕುಮಾರ್ 5,35,006 ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 30,50 ಮತಗಳನ್ನು ಪಡೆದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ರಾಘವೇಂದ್ರ ಅವರಿಗೆ ಲೀಡ್ ಸಿಕ್ಕಿತು.

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಅಭಿವೃದ್ಧಿ, ಕಾಂಗ್ರೆಸ್‌ನ ಗ್ಯಾರಂಟಿ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಹಿಂದುತ್ವದ ನಡುವಿನ ಪೈಪೋಟಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಮಲೆನಾಡಿನ ಮತದಾರ ‘ಅಭಿವೃದ್ಧಿ’ ಮಂತ್ರಕ್ಕೆ ಭರ್ಜರಿ ಗೆಲುವಿನ ಮುದ್ರೆ ಒತ್ತಿದ್ದಾನೆ. ಆ ಮೂಲಕ ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ADVERTISEMENT

ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡ್ ಹಿಡಿದು, ಪತಿ ಶಿವರಾಜಕುಮಾರ್‌ ಅವರೊಂದಿಗೆ ಮನೆ ಮನೆಗೆ ಎಡತಾಕಿದ್ದ ‘ಮನೆ ಮಗಳು’ ಗೀತಾ ಅವರಿಗೆ ಮತದಾರರ ಒಲುಮೆ ಗೆಲುವಿನ ದಡ ತಲುಪಿಸಲಿಲ್ಲ. ಆದರೆ 2013ರ ಚುನಾವಣೆಯಲ್ಲಿ ಪಡೆದಿದ್ದ ಮತಗಳಿಗಿಂತ ದುಪ್ಪಟ್ಟು ಈ ಬಾರಿ ಪಡೆದಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸಹೋದರ ಮಧು ಬಂಗಾರಪ್ಪ ಪಡೆದಿದ್ದಕ್ಕಿಂತ ಹೆಚ್ಚು ಮತಗಳು ಗೀತಾ ಅವರಿಗೆ ದೊರೆತಿವೆ. ಕೆ.ಎಸ್.ಈಶ್ವರಪ್ಪ ಅವರಿಗೆ ಮತದಾರರು ಆಘಾತಕಾರಿ ಸೋಲಿನ ರುಚಿ ತೋರಿಸಿದ್ದಾರೆ. ರಾಜಕೀಯ ಬದುಕಿನ ‘ಗೌರವ’ಯುತ ನಿರ್ಗಮನಕ್ಕೂ ರಾಷ್ಟ್ರಭಕ್ತರ ಬಳಗವು ಈಶ್ವರಪ್ಪ ಅವರಿಗೆ ಶಕ್ತಿ ತುಂಬಲಿಲ್ಲ.

ಸತತ ಮುನ್ನಡೆ: ಸಹ್ಯಾದ್ರಿ ಕಾಲೇಜಿನ ಮತಗಟ್ಟೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಮತ ಎಣಿಕೆಯ ಎಲ್ಲ ಸುತ್ತುಗಳಲ್ಲೂ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡರು. ಪ್ರತೀ ಹಂತದಲ್ಲೂ ಅವರ ಗೆಲುವಿನ ಅಂತರ ಹೆಚ್ಚಳವಾಗುತ್ತಾ ಸಾಗಿತು. ರಾಘವೇಂದ್ರ ಅವರಿಗೆ 2,990, ಗೀತಾ ಶಿವರಾಜಕುಮಾರ್ ಅವರಿಗೆ 1,384 ಹಾಗೂ ಕೆ.ಎಸ್.ಈಶ್ವರಪ್ಪ ಅವರಿಗೆ 91 ಅಂಚೆ ಮತಗಳು ಲಭಿಸಿದವು.

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಸಹೋದರ ಮಧು ಬಂಗಾರಪ್ಪ ವಿರುದ್ಧ 2019ರ ಚುನಾವಣೆಯಲ್ಲಿ 2,23,360 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿ.ವೈ.ರಾಘವೇಂದ್ರ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಾರಿಯ ಚುನಾವಣೆ ಸತತ ಐದನೇ ಬಾರಿಗೆ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ ಕುಟುಂಬಗಳ ನಡುವಿನ ರಾಜಕೀಯ ಸಮರಕ್ಕೆ ವೇದಿಕೆ ಒದಗಿಸಿತ್ತು. ಹಿಂದಿನ ಚುನಾವಣೆಗಳ ರೀತಿಯೇ ಯಡಿಯೂರಪ್ಪ ಕುಟುಂಬದ ಯಶೋಗಾಥೆ ಈ ಬಾರಿಯೂ ಮುಂದುವರೆಯಿತು. 

2014ರಲ್ಲಿ ಜೆಡಿಎಸ್‌ನಿಂದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಗೀತಾ ಶಿವರಾಜಕುಮಾರ್, ತವರಿನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕುಟುಂಬದ ಸೋಲಿನ ಸರಪಳಿ ತುಂಡರಿಸಲು ಗೀತಾ ಹಾಗೂ ಸಹೋದರ ಮಧು ಬಂಗಾರಪ್ಪ ತೀವ್ರ ಪ್ರಯತ್ನ ನಡೆಸಿದ್ದರೂ ಅದು ಫಲ ಕೊಡಲಿಲ್ಲ. 2009ರಲ್ಲಿ ಎಸ್‌.ಬಂಗಾರಪ್ಪ ವಿರುದ್ಧ, 2018ರ ಉಪಚುನಾವಣೆ ಹಾಗೂ 2019ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರೊಂದಿಗೆ ಮುಖಾಮುಖಿ ಆಗಿ ಗೆಲುವು ದಾಖಲಿಸಿದ್ದ ಬಿ.ವೈ.ರಾಘವೇಂದ್ರ, ಈ ಬಾರಿ ಗೀತಾ ಎದುರು ಪೈಪೋಟಿಯ ಮೂಲಕ ಅಪ್ಪ ಹಾಗೂ ಇಬ್ಬರು ಮಕ್ಕಳ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ ದಾಖಲೆ ಬರೆದರು.

ಅದೃಶ್ಯ ಮತದಾರ ಕೈ ಹಿಡಿಯಲಿಲ್ಲ: ಪ್ರಧಾನಿ ಮೋದಿ ಭಾವಚಿತ್ರ ಇಟ್ಟುಕೊಂಡು ‘ಏಕಾಂಗಿ’ ಹೋರಾಟ ನಡೆಸಿದ್ದ ಕೆ.ಎಸ್.ಈಶ್ವರಪ್ಪ ‘ಅದೃಶ್ಯ’ ಮತದಾರರ ನಂಬಿ ಭರ್ಜರಿ ಪ್ರಚಾರ ನಡೆಸಿದ್ದರು.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚು ಲೀಡ್ ಕೊಟ್ಟಿದ್ದ ಬೈಂದೂರು, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಬಿಜೆಪಿಯಲ್ಲಿರುವ ಹಿಂದುತ್ವದ ಬೆಂಬಲಿಗರ ನಂಬಿ ನಿರಂತರವಾಗಿ ಹಿಂದುತ್ವದ ಮಂತ್ರ ಪಠಿಸಿದ್ದರು. ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರೋಧಿಗಳೇ ‘ಅದೃಶ್ಯ’ ಮತದಾರರ ರೂಪದಲ್ಲಿ ತಮ್ಮ ಬೆನ್ನಿಗೆ ನಿಲ್ಲಲಿದ್ದಾರೆ ಎಂದು ಪ್ರತಿಪಾದಿಸಿದ್ದರು. ಅದೆಲ್ಲವೂ ಸುಳ್ಳಾಗಿದೆ. 

ಬಿಎಸ್‌ವೈ ಕುಟುಂಬದ ಮೌನ: ಕೆ.ಎಸ್.ಈಶ್ವರಪ್ಪ ವ್ಯಕ್ತಿಗತವಾಗಿ ದಾಳಿ ನಡೆಸಿದರೂ ಯಡಿಯೂರಪ್ಪ ಸೇರಿದಂತೆ ಕುಟುಂಬದ ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ನೀಡುವುದಕ್ಕೂ ಮುಂದಾಗಲಿಲ್ಲ. ಪ್ರಚಾರ ಕಾರ್ಯದಲ್ಲೂ ಎಲ್ಲಿಯೂ ಆ ಬಗ್ಗೆ ಚಕಾರ ಎತ್ತದೇ ರಾಜಕೀಯ ಮುತ್ಸದ್ಧಿತನ ತೋರಿದ್ದು, ರಾಘವೇಂದ್ರ ಪರ ಮತಗಳ ಕ್ರೋಢೀಕರಣಕ್ಕೆ ನೆರವಾಯಿತು.

ಜೊತೆಗೆ ಮತದಾನದ ಹಿಂದಿನ ದಿನ ಕೆ.ಎಸ್.ಈಶ್ವರಪ್ಪ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ನಡೆದ ಪ್ರಚಾರ ಈಶ್ವರಪ್ಪ ಅವರಿಗೆ ತೀವ್ರ ಹಿನ್ನಡೆ ತಂದಿತು. ಬಿಜೆಪಿ ಐಟಿ ಸೆಲ್‌ನ ಕಾರ್ಯತಂತ್ರಕ್ಕೆ ಈಶ್ವರಪ್ಪ ಅಕ್ಷರಶಃ ಬೆಚ್ಚುವಂತಾಯಿತು. ಇದೆಲ್ಲವೂ ಈಶ್ವರಪ್ಪ ಅವರ ಹೀನಾಯ ಸೋಲಿಗೆ ಕಾರಣಗಳು ಎಂದು ಬೆಂಬಲಿಗರ ಪಡೆ ವಿಶ್ಲೇಷಿಸುತ್ತಿದೆ.

ಕ್ಷೇತ್ರದ ಮತದಾರರು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕ್ಷೇತ್ರದ ಮತದಾರರು ಒಪ್ಪಿಕೊಂಡು ಆಶೀರ್ವಾದ ಮಾಡಿದ್ದಾರೆ.
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಕ್ಷೇತ್ರದ ಮತದಾರರು ಮತ್ತೊಮ್ಮೆ ರಾಘವೇಂದ್ರ ಅವರನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಮಾಡಲಿದ್ದಾರೆ.
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಶಾಸಕ

ಗೆಲುವಿಗೆ ಸಹಕಾರಿಯಾದ ಸಂಘಟಿತ ಪ್ರಚಾರ

ಬಿಜೆಪಿಯ ಬಿ.ವೈ.ರಾಘವೇಂದ್ರ ಪರ ಪ್ರಧಾನಿ ನರೇಂದ್ರ ಮೋದಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಧಾ ಮೋಹನ್ ದಾಸ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಎಸ್.ಎನ್.ಚನ್ನಬಸಪ್ಪ ಗುರುರಾಜ ಗಂಟಿಹೊಳಿ ಜೆಡಿಎಸ್‌ನ ಶಾರದಾ ಪೂರ್ಯಾನಾಯ್ಕ ವಿಧಾನಪರಿಷತ್‌ ಸದಸ್ಯರಾದ ಎಸ್.ರುದ್ರೇಗೌಡ ಡಿ.ಎಸ್.ಅರುಣ್‌ ಮಾಜಿ ಶಾಸಕರಾದ ಹರತಾಳು ಹಾಲಪ್ಪ ಕುಮಾರ್ ಬಂಗಾರಪ್ಪ ಕೆ.ಬಿ.ಅಶೋಕ ನಾಯ್ಕ ಸಮನ್ವಯರಿಂದ ಪ್ರಚಾರ ಕಾರ್ಯ ಕೈಗೊಂಡಿದ್ದರು. 

ಕರಗಿದ ಕಾಂಗ್ರೆಸ್ ಬೆಂಬಲಿಗರ ಗುಂಪು

ಮತ ಎಣಿಕೆ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತ್ರ ಭೇಟಿ ಕೊಟ್ಟಿದ್ದರು. ಮತ ಎಣಿಕೆ ನಡೆದ ಸಹ್ಯಾದ್ರಿ ಕಾಲೇಜು ಮುಂಭಾಗ ಬೆಳಿಗ್ಗೆ ಬಿಜೆಪಿ–ಜೆಡಿಎಸ್‌ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.

ಫಲಿತಾಂಶ ಅಂತಿಮಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಕರಗಿತು. ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಕೂಡ ಬಿಕೋ ಅನುತ್ತಿತ್ತು. ಟವಿಯಲ್ಲಿ ಫಲಿತಾಂಶ ವೀಕ್ಷಣೆ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಇಲ್ಲಿನ ಕಾಶಿಪುರದಲ್ಲಿರುವ ಮನೆಯಲ್ಲಿ ಪತಿ ಶಿವರಾಜಕುಮಾರ್ ಹಾಗೂ ಸಹೋದರ ಮಧು ಬಂಗಾರಪ್ಪ ಅವರೊಂದಿಗೆ ಕುಳಿತು ಟಿವಿಯಲ್ಲಿ ಫಲಿತಾಂಶ ವೀಕ್ಷಿಸಿದರು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮುನ್ನಡೆ ಅಂತರ ಹೆಚ್ಚುತ್ತಿದ್ದಂತೆಯೇ ಕೊಂಚ ನಿರಾಸೆಗೊಂಡರು. ನಂತರ ಚುನಾವಣೆಯಲ್ಲಿ ತಮ್ಮ ಪರ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ ಕೂಡ ಮನೆಯಲ್ಲಿಯೇ ಕುಳಿತು ಫಲಿತಾಂಶ ವೀಕ್ಷಣೆ ಮಾಡಿದರು.

21 ಅಭ್ಯರ್ಥಿಗಳಿಗೆ ಠೇವಣಿ ನಷ್ಟ

ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಹೊರತಾಗಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕಣದಲ್ಲಿದ್ದ ಎಲ್ಲ 21 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಕೆ.ಎಸ್‌. ಈಶ್ವರಪ್ಪ ಅವರ ನಂತರ ಅತಿಹೆಚ್ಚು ಮತ ಪಡೆದ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ರಾಯಚೂರಿನ ಬಂಡಿ. ಜಿಲ್ಲೆಯ ಹೊರಗಿನ ಆ ಅಭ್ಯರ್ಥಿಗೆ ಮಲೆನಾಡಿನ 7266 ಮಂದಿ ಮತಗಳನ್ನು ಹಾಕಿದ್ದಾರೆ.

ಬಹುಜನ ಸಮಾಜ ಪಕ್ಷದ ಎ.ಡಿ.ಶಿವಪ್ಪ 2779 ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ಕನಹಳ್ಳಿ 1478 ಕರ್ನಾಟಕ ರಾಷ್ಟ್ರ ಸಮಿತಿಯ ಎಸ್.ಕೆ.ಪ್ರಭು 617 ಯಂಗ್‌ ಸ್ಟಾರ್ ಎಂಪವರ್‌ಮೆಂಟ್ ಪಾರ್ಟಿಯ ಮೊಹಮ್ಮದ್ ಯೂಸುಫ್‌ಖಾನ್ 404 ಮತಗಳನ್ನು ಗಳಿಸಿದ್ದಾರೆ. ಡಿ.ಎಸ್.ಈಶ್ವರಪ್ಪ ಹೆಸರಿನ ಅಭ್ಯರ್ಥಿ 695 ಮತಗಳನ್ನು ಪಡೆದಿದ್ದು ಕಣದಲ್ಲಿದ್ದ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಪೂಜಾ ಎನ್.ಅಣ್ಣಯ್ಯ 3457 ಮತಗಳನ್ನು ಪಡೆದಿದ್ದಾರೆ. ಎನ್.ರವಿಕುಮಾರ್ 4552 ಮತಗಳನ್ನು ಪಡೆದಿದ್ದಾರೆ. ಒಟ್ಟು 4332 ನೋಟಾ ಮತಗಳು ಚಲಾವಣೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.