ಶಿವಮೊಗ್ಗ: ‘ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿಗೆ ಇಲ್ಲಿ ಓದಿರುವ ಎಲ್ಲರೂ ಕೈ ಜೋಡಿಸಬೇಕು’ ಎಂದು ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ, ಮಾಜಿ ಸಚಿವ ಡಿ.ಎಚ್.ಶಂಕರಮೂರ್ತಿ ಮನವಿ ಮಾಡಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾಗಮದಲ್ಲಿ ಶನಿವಾರ ‘ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿಕ್ಷಣ ಕ್ಷೇತ್ರದಲ್ಲಿ ಏನು ಬದಲಾವಣೆ ಆಗಬೇಕೆನ್ನುವ ಚರ್ಚೆ ಮಾಡಿ ಮಾರ್ಗದರ್ಶನ ಮಾಡಬೇಕು. ಕಾಲೇಜಿನ ಅವಶ್ಯಕತೆಗಳು ತುಂಬಾ ಇವೆ. ಎಲ್ಲರೂ ಸೇರಿ ಈ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು.
‘ಕಾಲೇಜ್ ಬೃಹತ್ ಆಗಿ ಬೆಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಕಾಲೇಜಿಗೆ ಇನ್ನೇನು ಬೇಕು ಎಂಬುದನ್ನು ತಿಳಿದುಕೊಂಡು ಅದನ್ನು ಒದಗಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕು’ ಎಂದರು
ಸಹ್ಯಾದ್ರಿ ಸೈನ್ಸ್ ಪೋರ್ಟಲ್ ಉದ್ಘಾಟಿಸಿದ ಕುವೆಂಪು ವಿ.ವಿ. ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ‘ಕಲಿತ ಕಾಲೇಜಿನ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ನೆರವು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
‘ಎಲ್ಲವನ್ನೂ ಸರ್ಕಾರವೇ ಮಾಡುತ್ತೆ ಎಂದು ಕಾಯಬಾರದು. ಐಐಟಿಗಳಲ್ಲಿ ಅಲ್ಲಿನ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿರುತ್ತೆ. ಸಹ್ಯಾದ್ರಿ ವಿಜ್ಞಾನ ಕಾಲೇಜು ಹೆಸರಾಂತ ಕಾಲೇಜು. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳೇ ರಾಯಭಾರಿಗಳು. ಕಾಲೇಜಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು. ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಕೆಲಸ ಮಾಡಲಿ’ ಎಂದರು.
ಕಾಲೇಜಿನ ಪ್ರಾಚಾರ್ಯೆ ಪ್ರೊ.ಎನ್.ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘1941ರಲ್ಲಿ ಆರಂಭವಾದ ಕಾಲೇಜು ಈ ರಾಜ್ಯ,ದೇಶ ಹಾಗೂ ವಿದೇಶಗಳಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಇನ್ನಷ್ಟು ಬೆಳೆಸಬೇಕು. ಈ ಕಾಲೇಜಿನ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಏನು ಮಾಡಬೇಕು ಎಂಬುದರ ಬಗ್ಗೆ ಸಂವಾದ ನಡೆಸಿಕೊಟ್ಟರು.
ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಕುವೆಂಪು ವಿವಿ ಕುಲಸಚಿವ ಎಸ್ ಎಂ ಗೋಪಿನಾಥ್, ಡಾ.ಪ್ರಸನ್ನ, ಸಂಕೇತ್, ಪ್ರೊ.ಎ.ಎಸ್.ಚಂದ್ರಶೇಖರ್, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀಧರ್, ಲತಾ ಕೆ.ಪಿ., ಕೆ.ಎಲ್. ನಾಯಕ್, ರವಿಕುಮಾರ್, ರೂಪಾ ಪತ್ರಕರ್ತರಾದ ನಾಗರಾಜ್ ನೇರಿಗೆ, ಜೇಸುದಾಸ್ ಮೊದಲಾದವರಿದ್ದರು.
ಸಹಕಾರ್ಯದರ್ಶಿ ಉಮೇಶ್ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ನಾಗರಾಜ್ ಪರಿಸರ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಹರ್ಷ ಮತ್ತು ಕುಸುಮಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.