ಶಿವಮೊಗ್ಗ: ‘ತೀರ್ಥಹಳ್ಳಿ ತಾಲ್ಲೂಕಿನ ಭಾರತಿಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು?’ ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ.
ಸಚಿವರು ದೂರಿನ ಪ್ರತಿಯನ್ನು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಕಳುಹಿಸಿದ್ದಾರೆ. ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡುವಂತೆ ತೀರ್ಥಹಳ್ಳಿ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಳೆಗಾಲದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಪ್ರವಾಸಿಗರು ಉಳಿದುಕೊಳ್ಳುವ ಕಾಟೇಜ್ ಕೆಳಗೆ ನದಿದಂಡೆಯು ಕುಸಿತಗೊಂಡಿವೆ. ಕಾಟೇಜ್‌ಗಳು ಅಪಾಯದ ಅಂಚಿನಲ್ಲಿವೆ. ಕೃಷಿ ಚಟುವಟಿಕೆಗಳನ್ನೂ ಒಳಗೊಂಡಿರುವ ರೆಸಾರ್ಟ್ ಇದಾಗಿದ್ದು, ಇದಕ್ಕೆ ಅನುಮತಿ ನೀಡಿದವರು ಯಾರು? ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
‘ರೆಸಾರ್ಟ್ ಮಾಲೀಕರು ಎಲ್ಲ ಕಾನೂನು ಪ್ರಕ್ರಿಯೆಗಳ ಮುಖಾಂತರವೇ ರೆಸಾರ್ಟ್ ನಡೆಸುತ್ತಿದ್ದರೆ ಯಾವುದೇ ಅಭ್ಯಂತರವಿಲ್ಲ. ಆದರೆ ತುಂಬಿ ಹರಿಯುತ್ತಿರುವ ತುಂಗಾನದಿಯ ತಟದಲ್ಲಿ ಮಳೆಗಾಲದ ಕಾರಣ ನೀರಿನ ಹರಿವು ಜಾಸ್ತಿಯಾಗಿ ದಂಡೆ ಕುಸಿದರೆ ಪ್ರವಾಸಿಗರ ಜೀವಕ್ಕೆ ಅಪಾಯವಾಗಲಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
‘ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರಾ? ಅದು ಬಫರ್ ಝೋನ್ ಒಳಗೆ ಇದೆ. ಇದಕ್ಕೆ ಅವಕಾಶ ನೀಡಿದ ಅಧಿಕಾರಿಗಳು ಯಾರು? ಈ ಬಗ್ಗೆ ತನಿಖೆಯ ಅಗತ್ಯವಿದೆ’ ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ರೆಸಾರ್ಟ್‌ನವರು ಅನುಮತಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅದು ನೈಜವೇ ರೆಸಾರ್ಟ್ ಬಫರ್ ವಲಯದಲ್ಲಿ ಬರುತ್ತದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ
-ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.