ADVERTISEMENT

ರಿಪ್ಪನ್‌ಪೇಟೆ | ಆನೆ ದಾಳಿಯಿಂದ ರೈತ ಸಾವು: ₹ 15 ಲಕ್ಷ ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2024, 15:34 IST
Last Updated 4 ಮೇ 2024, 15:34 IST

ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ನಿವಾಸಿ ತಿಮ್ಮಪ್ಪ ಅವರ ಕಡೆಗದ್ದೆ ಕಾಡಂಚಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಅವರ ಕುಟುಂಬಕ್ಕೆ ಸರ್ಕಾರ ತಕ್ಷಣವೇ ₹ 15 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಹಾಲಪ್ಪ ಎಚ್.ಹರತಾಳು ಆಗ್ರಹಿಸಿದ್ದಾರೆ.

ಮೃತ ಕುಟುಂಬದವರನ್ನು ಶುಕ್ರವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ನಂತರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಈ ಹಿಂದೆ ರಾಜ್ಯದ ಆನೆ ದಾಳಿ ಮಾಡಿದೆ ಎಂದು ಕೇರಳದ ವ್ಯಕ್ತಿಯೊಬ್ಬರಿಗೆ ರಾತ್ರೋ ರಾತ್ರಿ ಪರಿಹಾರ ನೀಡಿ ಬಂದಿದೆ. ಕಾಡು ಪ್ರಾಣಿಗಳ ದಾಳಿಯಿಂದ ಸಾವನಪ್ಪಿದ್ದ 24 ತಾಸಿನ ಒಳಗೆ ₹ 15 ಲಕ್ಷ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿದೆ’ ಎಂದರು.

ADVERTISEMENT

‘ಅಲ್ಲದೆ ಮಲೆನಾಡಿನ ರೈತರ ಕಾಡಿನ ನಂಟು ನಿರಂತರವಾಗಿದ್ದು, ಕಾಡಿನ ರಕ್ಷಣೆಯೊಂದಿಗೆ ತಮ್ಮ ಕೃಷಿ ಚಟುವಟಿಕೆಗೆ ಸೊಪ್ಪು, ಸದೆ ಹಾಗೂ ದರಗು ತರುವುದು ಸಾಮಾನ್ಯ. ಆದರೆ, ರೈತನ ಜಮೀನಿನ ಪಕ್ಕದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ಜರುಗಿದೆ ಎಂಬ ಕಾರಣ ನೀಡಿ ಪರಿಹಾರ ನೀಡಲು ಅಸಾಧ್ಯ ಎಂಬ ಅಭಿಪ್ರಾಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಪಡಿಸಿರುವುದು ಕಳವಳಕಾರಿ ಸಂಗತಿ’ ಎಂದರು.

ರೈತ ಕಾಡಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕಾನೂನು ಬಾಹಿರ ಅಕ್ರಮ ಮರ ಕಡಿತಲೆ, ಕಾಡು ಪ್ರಾಣಿಗಳ ಬೇಟೆಗೆ ಹೋದವನಲ್ಲ ಎಂಬ ವಿಷಯವನ್ನು ಅಧಿಕಾರಿಗಳು ಮನದಟ್ಟು ಮಾಡಿಕೊಳ್ಳಲಿ. ಬಡ ರೈತ ಕುಟುಂಬಕ್ಕೆ ಅನ್ಯಾಯವಾದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.