ADVERTISEMENT

ಶೆಡ್ ದುರಸ್ತಿ ಮಾಡಿಸಿ ಅಜ್ಜಿಯರಿಗೆ ನೆರವು

ಕುಂಸಿ ಠಾಣೆ ಪೊಲೀಸರಿಂದ ಹೀಗೊಂದು ಮಾನವೀಯ ಕಾರ್ಯ

ವರುಣ್ ಬಿಲ್ಗುಣಿ
Published 9 ಜೂನ್ 2022, 4:40 IST
Last Updated 9 ಜೂನ್ 2022, 4:40 IST
ಹಳೆ ಕುಂಸಿ ಠಾಣೆಯ ಬಳಿ ಹೊಸದಾಗಿ ನವೀಕರಣಗೊಂಡ ಅಜ್ಜಿಯರ ಹೋಟೆಲ್
ಹಳೆ ಕುಂಸಿ ಠಾಣೆಯ ಬಳಿ ಹೊಸದಾಗಿ ನವೀಕರಣಗೊಂಡ ಅಜ್ಜಿಯರ ಹೋಟೆಲ್   

ಕುಂಸಿ: ‘ಈ ಮಳೆಗಾಲಕ್ಕೆ ಎಲ್ಲಿ ಶೆಡ್ ಬಿದ್ದು ಹೋಗುವುದೋ, ಬದುಕಿಗೆ ಆಸರೆಯಾಗಿದ್ದ ಹೋಟೆಲ್ ಬಂದ್ ಆಗುವುದೋ’ ಎಂಬ ಆತಂಕದಲ್ಲಿದ್ದ ಇಲ್ಲಿನ ಹಳೇಕುಂಸಿಯ ವೃದ್ಧೆಯರಾದ ಸುಶೀಲಮ್ಮ ಹಾಗೂ ರತ್ನಮ್ಮ ಅವರ ಮುಖದಲ್ಲಿ ಈಗ ನೆಮ್ಮದಿಯ ಭಾವ ಮೂಡಿದೆ.

ಹಳೇಕುಂಸಿಯ ಪೊಲೀಸ್ ಠಾಣೆಯ ಪಕ್ಕದಲ್ಲಿ ಈ ಇಬ್ಬರೂ ಅಜ್ಜಿಯರು ಒಟ್ಟಾಗಿ 15 ವರ್ಷಗಳಿಂದ ಸಣ್ಣ
ತಗಡಿನ ಶೆಡ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಆದು ಬಹುತೇಕ ಹಾಳಾಗಿತ್ತು. ಇನ್ನೇನು ಈ ಮಳೆಗಾಲದಲ್ಲಿ ಶೆಡ್ ಬಿದ್ದು ಹೋಗುತ್ತದೆ ಎಂಬ ಆತಂಕ ಮನೆ ಮಾಡಿತ್ತು. ಇದನ್ನು ಅರಿತ ಕುಂಸಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್
ಹಾಗೂ ಸಿಬ್ಬಂದಿ ಹೋಟೆಲನ್ನು ನವೀಕರಿಸಿದ್ದಾರೆ. ಅವರ ಈ ಮಾನವೀಯ ಕಾರ್ಯ ಸುತ್ತಲಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.

ಅನ್ನಪೂರ್ಣೆಯರು: ಇಲ್ಲಿನ ಪೊಲೀಸರ ಪಾಲಿಗೂ ಈ ಅಜ್ಜಿಯು ಅನ್ನಪೂರ್ಣೆಯರು. ಈ ಪುಟ್ಟ ಹೋಟೆಲ್ ಅವರ ಹೊಟ್ಟೆ ತುಂಬಿಸುವ ಮನೆಯೆ ಹೌದು. ತಿಂಡಿಗೆ, ಊಟಕ್ಕೆ ಬರುವವರನ್ನು ತಮ್ಮ ಮಕ್ಕಳಂತೆಯೆ ಆತ್ಮೀಯತೆಯಿಂದ ಕಾಣುವ ಪರಿ ಪೊಲೀಸರಿಗೂ ಅಚ್ಚುಮೆಚ್ಚು.

ADVERTISEMENT

ಈ ಇಬ್ಬರು ಅಜ್ಜಿಯರಿಗೂ ಒಬ್ಬರೆ ಪತಿ. ಅವರು ಕೂಡ
ಎರಡು ವರ್ಷದ ಹಿಂದೆ ತೀರಿ ಹೋಗಿದ್ದಾರೆ. ಇದ್ದೊಬ್ಬ ಮಗ, ಮಗಳು ತೀರಿ ಹೋಗಿದ್ದಾರೆ. ಹೀಗಾಗಿ ಯಾರು ಇಲ್ಲದ ಅಜ್ಜಿಯರಿಗೆ ಈ
ಹೋಟೆಲ್ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಯಾರಿಗೂ ಹೊರೆಯಾಗದೆ ಈ ಅಜ್ಜಿಯರು ಜೀವನ ನಡೆಸುತ್ತಿದ್ದಾರೆ.

ಇವರ ಪರಿಸ್ಥಿತಿ ಮನಗಂಡ ಕುಂಸಿ ಠಾಣೆಯ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ಸಿಬ್ಬಂದಿ ತಮ್ಮ ಕೈಲಾದಷ್ಟು ಹಣ ಹಾಕಿ ಹೋಟೆಲ್‌ನ ಮೇಲ್ಛಾವಣಿ ಬದಲಾಯಿಸಿ, ಶೆಡ್‌ನ ಸ್ಥಿತಿಗತಿ ಬದಲಾಯಿಸಿದ್ದಾರೆ.

ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಮಾನವೀಯತೆ ತೋರಿರುವ ಕುಂಸಿ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.