ADVERTISEMENT

ಶಿವಮೊಗ್ಗ | ವಾಹನ ದಟ್ಟಣೆಗಿಲ್ಲ ಮುಕ್ತಿ; ಸವಾರರಿಗೆ ಕಿರಿಕಿರಿ

ಬಹುಮಹಡಿ ಪಾರ್ಕಿಂಗ್ ಕಟ್ಟಡ; ಸಾರ್ವಜನಿಕರ ಬಳಕೆಗೆ ದೊರೆಯುವುದು ಎಂದು?

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:08 IST
Last Updated 2 ಜುಲೈ 2024, 5:08 IST
ಸ್ಮಾರ್ಟ್‌ ಸಿಟಿ ಯೋಜನೆಯಡಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ನಿರ್ಮಾಣ ಮಾಡಿರುವ ಬಹು ಮಹಡಿಗಳ ವಾಹನ ನಿಲ್ದಾಣ ಕಟ್ಟಡ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ನಿರ್ಮಾಣ ಮಾಡಿರುವ ಬಹು ಮಹಡಿಗಳ ವಾಹನ ನಿಲ್ದಾಣ ಕಟ್ಟಡ   

ಶಿವಮೊಗ್ಗ: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಸ್ಮಾರ್ಟ್ ಸಿಟಿ ವತಿಯಿಂದ ಶಿವಪ್ಪ ನಾಯಕ ವೃತ್ತದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡ ಸಿದ್ಧಗೊಂಡು ಆರು ತಿಂಗಳಾದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ.

ಬರೋಬ್ಬರಿ ₹ 25 ಕೋಟಿ ವೆಚ್ಚದಲ್ಲಿ 3 ಅಂತಸ್ತಿನ ಈ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿ  ಕಾರು, ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಮಹಾನಗರ ಪಾಲಿಕೆ ಯೋಜಿಸಿದೆ. ಅಲ್ಲಿಯೇ ಹೂವು, ಹಣ್ಣಿನ ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಮಳಿಗೆಗಳಿಗೆ ದರ ನಿಗದಿ ಮಾಡಿ ಟೆಂಡರ್‌ ಕರೆಯಲು ವಿಳಂಬ ಆಗಿದ್ದು, ನೂತನ ಕಟ್ಟಡಕ್ಕೆ ಇನ್ನೂ ಮುಕ್ತಿ ನೀಡಿಲ್ಲ.

ಕಾರ್‌, ಬೈಕ್‌ಗೆ ಎಷ್ಟು ಶುಲ್ಕ ನಿಗದಿಪಡಿಸಬೇಕು?, ಪ್ರತಿ ಗಂಟೆಗೆ ಎಷ್ಟು? ಎರಡು ಗಂಟೆಗೆ ಎಷ್ಟು ಶುಲ್ಕ ನಿಗದಿಪಡಿಸಬೇಕು? ಇಡೀ ದಿನ ವಾಹನ ನಿಲುಗಡೆ ಮಾಡಿದರೆ ಎಷ್ಟು ಬೆಲೆ ನಿಗದಿ ಮಾಡಬೇಕು? 24 ಗಂಟೆ  ವಾಹನ ಪಾರ್ಕಿಂಗ್‌ ಮಾಡುವವರಿಗೆ ಎಷ್ಟು ದರ ನಿಗದಿ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಿದೆ.

ADVERTISEMENT

ಈ ಬಹುಮಹಡಿ ಪಾರ್ಕಿಂಗ್‌ ಕಟ್ಟಡದಲ್ಲಿ ಒಟ್ಟು 172 ಕಾರು ನಿಲುಗಡೆ ಮಾಡಬಹುದು. 78 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಮೂರನೇ ಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ ಮಾಡಿದವರಿಗೆ ಇಳಿಯಲು ಲಿಫ್ಟ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ನೆಲ ಮಹಡಿಯಲ್ಲಿ ಹೂವು ಮತ್ತು ಹಣ್ಣಿನ ವ್ಯಾಪಾರಿಗಳಿಗಾಗಿ 118 ಮಳಿಗೆ ನಿರ್ಮಾಣ ಮಾಡಲಾಗಿದೆ. ಇವುಗಳಿಗೂ ದರ ನಿಗದಿ ಮಾಡಿ ಹರಾಜು ಮಾಡಬೇಕಾಗಿದೆ.

ಕಟ್ಟಡದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಗಿದೆ. ಮಳೆ ನೀರನ್ನು ಪ್ರತ್ಯೇಕ ಟ್ಯಾಂಕ್‌ನಲ್ಲಿ ಸಂಗ್ರಹಿಸಿ  ಬಳಸಬಹದು. ಈ ಕಟ್ಟಡವು ಮಹಾನಗರ ಪಾಲಿಕೆಗೆ ಹೊಂದಿಕೊಂಡಿದೆ. ದೊಡ್ಡ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಸುಮಾರು 2.5 ಲಕ್ಷ ಲೀಟರ್‌ ನೀರಿನ ಸಂಗ್ರಹಣೆ ಸಾಮರ್ಥ್ಯವಿದೆ.

‘ಕಟ್ಟಡದ ಪಕ್ಕದಲ್ಲಿಯೇ ಗಾಂಧಿಬಜಾರ್‌ ಇದೆ. ವ್ಯಾಪಾರ, ವಹಿವಾಟಿಗಾಗಿ ನಿತ್ಯ ಸಾವಿರಾರು ಜನರು ಈ ಬಜಾರಿಗೆ ಬಂದು ಹೋಗುತ್ತಾರೆ. ವಾಹನಗಳನ್ನು ನಿಲ್ಲಿಸುವುದೇ ಅವರಿಗೆ ದೊಡ್ಡ ಸವಾಲು. ಬಹು ಮಹಡಿಗಳ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಆದ ವೇಳೆ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಎಲ್ಲವೂ ಹುಸಿಯಾಗಿದೆ’ ಎಂದು ವಾಹನ ಸವಾರ ಬಸವರಾಜ ಪಾಟೀಲ ತಿಳಿಸಿದರು.

‘ಮಾರುಕಟ್ಟೆಗೆ ಬರಬೇಕೆಂದರೆ ಪಾರ್ಕಿಂಗ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ವಾಹನಗಳ ದಟ್ಟಣೆ ನಿಯಂತ್ರಿಸಲು ಕಟ್ಟಡ ನಿರ್ಮಿಸಿದರೂ ಬಳಕೆಯಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಬೈಕ್‌ ಸವಾರ ಗಿರೀಶ್‌ ಹೊಸಮನಿ ಆಗ್ರಹಿಸಿದರು. 

₹25 ಕೋಟಿ ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ಉದ್ಘಾಟನೆಯಾಗಿ ಅರ್ಧವಷ್ಟವಾದರೂ ಬಳಕೆಗಿಲ್ಲ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಂಚಾರ ದಟ್ಟಣೆ

ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿದೆ. ಈ ಸಮಸ್ಯೆ ನಿವಾರಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು.

-ವಿಜಯಕುಮಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಸ್ಮಾರ್ಟ್‌ ಸಿಟಿ

ಬಹು ಮಹಡಿಗಳ ವಾಹನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕಾರು ಬೈಕ್‌ ನಿಲುಗಡೆಗೆ ಮತ್ತು ಹೂವು ಹಾಗೂ ಹಣ್ಣಿನ ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಮಳಿಗೆಗಳಿಗೆ ಶೀಘ್ರ ಟೆಂಡರ್‌ ಕರೆಯಲಾಗುವುದು.

-ಭರತ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.