ADVERTISEMENT

ತುಮರಿ: ನೆಲದೊಡಲು ಬಗೆವವರಿಗೆ ಇಲ್ಲ ಕಡಿವಾಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 6:10 IST
Last Updated 28 ಅಕ್ಟೋಬರ್ 2024, 6:10 IST
ತುಮರಿ ಸಮೀಪದ ಚನ್ನಗೊಂಡ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಆಕ್ರಮ ಕೆಂಪು ಕಲ್ಲು ಕ್ವಾರಿ
ತುಮರಿ ಸಮೀಪದ ಚನ್ನಗೊಂಡ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಆಕ್ರಮ ಕೆಂಪು ಕಲ್ಲು ಕ್ವಾರಿ   

ತುಮರಿ: ಗಣಿಗಾರಿಕೆ ನಿಯಂತ್ರಣಕ್ಕೆ ಸರ್ಕಾರದ ಬಳಿ ನಾನಾ ಅಸ್ತ್ರಗಳಿವೆ. ಗಣಿ ಮತ್ತು ಖನಿಜ ಕಾಯ್ದೆ, ಪರಿಸರ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಮೂಲಕ ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸುವ ಅವಕಾಶಗಳಿವೆ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ ಇಲಾಖೆಗಳು ಅಧಿಕಾರ ಹೊಂದಿವೆ. ಆದರೆ, ಪರಿಸರ, ಜನ, ಜಾನುವಾರುಗಳಿಗೆ ಕಂಟಕವಾಗಿ ಹಬ್ಬುತ್ತಿರುವ ‘ಕೆಂಪು ಕಲ್ಲು ಗಣಿ ಮಾಫಿಯಾ’ವನ್ನು ಹತ್ತಿಕ್ಕಲು ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕರೂರು ಹೋಬಳಿಯ ಶರಾವತಿ ಸಿಂಗಳೀಕ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಚನ್ನಗೊಂಡ ಗ್ರಾಮದ ಕಂದಾಯ ಹಾಗೂ ವನ್ಯಜೀವಿ ಪ್ರದೇಶದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ಕೆಲವು ವರ್ಷಗಳಿಂದ ನಡೆದಿದೆ. 9 ಕೆಂಪು ಕಲ್ಲಿನ ಕ್ವಾರಿಗಳು ಇಲ್ಲಿವೆ. ಪ್ರತಿಯೊಂದರ ಗಣಿಗಾರಿಕೆ ಪ್ರದೇಶವು 450 ಮೀಟರ್ ಉದ್ದ, 600 ಮೀಟರ್ ಅಗಲ ಹಾಗೂ 60 ಅಡಿ ಆಳ ಇದೆ. ಸುಧಾರಿತ ಯಂತ್ರದ ಮೂಲಕ ಖಾಸಗಿ ವ್ಯಕ್ತಿಗಳಿಂದ ಕೆಂಪು ಕಲ್ಲುಗಳನ್ನು ಕತ್ತರಿಸಿ ತೆಗೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. 

ದಿನವೊಂದಕ್ಕೆ 30ಕ್ಕೂ ಹೆಚ್ಚು ಲೋಡ್‌ ಕೆಂಪು ಕಲ್ಲುಗಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ. ಒಂದು ಗಣಿಗಾರಿಕೆ ಪ್ರದೇಶದಿಂದ ದಿನಕ್ಕೆ ₹3 ಲಕ್ಷ ಆದಾಯ ಇದೆ ಎಂದು ಆಂದಾಜಿಸಲಾಗಿದೆ. ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಕಲ್ಲುಗಳನ್ನು ತೆಗೆದು ಜನರಿಗೆ ದುಪ್ಪಟ್ಟು ಬೆಲೆಗೆ ಮಾರುವ ದಂಧೆಗೆ ಕಡಿವಾಣ ಇಲ್ಲದಂತಾಗಿದೆ ಎಂದು ಸ್ಥಳೀಯರಾದ ಮಂಜುನಾಥ್ ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಯಾವುದೇ ಮಂಜೂರಾತಿ, ಪರವಾನಿಗೆ ಇಲ್ಲದೆ ಖಾಸಗಿ ವ್ಯಕ್ತಿಗಳು ಭೂಮಿಯ ಒಡಲು ಬಗೆಯುತ್ತಿರುವ ಜೊತೆಗೆ ಕಲ್ಲುಗಳನ್ನು ಹೊತ್ತೊಯ್ಯುವ ವಾಹನಗಳು ವೇಗವಾಗಿ ಬಂದು ಸ್ಥಳೀಯರು, ಶಾಲಾ ಮಕ್ಕಳ ಮೇಲೆ ಎರಗುವ ಆತಂಕವಿದೆ. ತಿಂಗಳ ಹಿಂದೆ ಇದೇ ಗ್ರಾಮದ ವಿದ್ಯಾರ್ಥಿಯೊಬ್ಬ ವೇಗವಾಗಿ ಚಲಿಸುವ ಮರಳು ಸಾಗಾಣಿಕೆ ಮಾಡುವ ಟಿಪ್ಪರ್‌ಗೆ ಸಿಕ್ಕಿ ಮೃತಪಟ್ಟಿದ್ದ. ವ್ಯಾಪಕ ದೂಳಿನಿಂದ ಈ ಭಾಗದ ಎಳೆಯ ಮಕ್ಕಳ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. 

ಗ್ರಾಮೀಣ ಭಾಗದಲ್ಲಿ ಸಣ್ಣ ಪುಟ್ಟ ರೈತರಿಗೆ ಸೇರಿದ ತುಂಡು ಕೃಷಿ ಭೂಮಿಯನ್ನು ಯಾವುದೇ ಮಾಹಿತಿ ನೀಡದೆ ತೆರವು ಮಾಡುವ ಅರಣ್ಯ ಇಲಾಖೆಯ ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳು, ರಾಜ­ಕಾರಣಿಗಳು ನಡೆಸುವ ಆಕ್ರಮ ಕ್ವಾರಿಗಳ ಜಾಗಕ್ಕೆ ಕಾಲಿಡಲು ಹಿಂಜರಿ­ಯು­ತ್ತಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ತೆರವುಗೊಳಿ­ಸುವಂತೆ ಸುಪ್ರೀಂ ಕೋರ್ಟ್‌, ಲೋಕಾಯುಕ್ತ ಕೋರ್ಟ್‌, ಈಚೆಗೆ ಅರಣ್ಯ ಸಚಿವರ ಸಾಲು ಸಾಲು ಟಿಪ್ಪಣಿಗಳಿಗೂ ಬೆಲೆ ಕೊಡದ ಅಧಿಕಾರಿಗಳು ಪ್ರಭಾವಿಗಳ ಮರ್ಜಿಗೆ ಸಿಲುಕಿ ಅದೇಶ ಪಾಲಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತಜ್ಞರ ಎಚ್ಚರಿಕೆಗೆ ಕಿವಿಗೊಡದೆ ಅನುಮತಿ:

ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಬಾರದು. ಸುಧಾರಿತ ಯಂತ್ರ ಬಳಸುವ ಕಾರಣ ಜೀವ ವೈವಿಧ್ಯಕ್ಕೆ ಧಕ್ಕೆಯಾಗುತ್ತದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದರೂ, ಇಲ್ಲಿನ ಕಟ್ಟಿನಕಾರು, ಕೋಗಾರು, ಹೊಂಡಗದ್ದೆ ಭಾಗದಲ್ಲಿ ಅರಣ್ಯ, ಕಂದಾಯ ಇಲಾಖೆ ಪ್ರದೇಶದಲ್ಲಿ ಕೆಂಪು ಕಲ್ಲು ತೆಗೆಯಲು ಅವಕಾಶ ನೀಡಿದ ಪರಿಣಾಮ ಪರಿಸರಕ್ಕೂ ಸಾಕಷ್ಟು ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿರುವುದು ಕಂಡು ಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ’ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ.

‘ಅಕ್ರಮವಾಗಿ ಗಣಿಗಾರಿಕೆ ನಡೆಸುವವರು ಎಷ್ಟೇ ದೊಡ್ಡವರಿದ್ದರೂ ಸ್ಥಳ ಪರಿಶೀಲನೆ ನಡೆಸಿ ತಹಶೀಲ್ದಾರ್ ಕಚೇರಿಗೆ ವರದಿ ಸಲ್ಲಿಸಲಾಗುವುದು’ ಎಂದು ರಾಜಸ್ವ ನಿರೀಕ್ಷಕ ಹುಸೇನ್ ಕಟ್ಟಿಮನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ತುಮರಿ ಸಮೀಪದ ಚನ್ನಗೊಂಡ ಗ್ರಾಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಉಲ್ಲಂಘಿಸಿ ಕೆಂಪು ಕಲ್ಲು ತೆಗೆದಿರುವುದು
ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಇದೆ. ವಾಹನ ಮಾಲೀಕರ ವಿವರವನ್ನು ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು
ಅವಿನಾಶ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ವಿಜ್ಞಾನಿ ಶಿವಮೊಗ್ಗ

‘ರೈತರಿಗೆ ನೀಡುವ ನೋಟಿಸ್ ಆಕ್ರಮ ಕ್ವಾರಿಗಳಿಗೆ ಇಲ್ಲ’

ಹೋಬಳಿಯ ವಿವಿಧ ಗ್ರಾಮಗಳ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಮನೆ ಕಟ್ಟಿಕೊಂಡು ವಾಸವಾಗಿರುವ 60ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸಾಗುವಳಿ ತೆರವುಗೊಳಿಸುವಂತೆ ಈಚೆಗೆ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿರುವುದು ಒಂದೆಡೆಯಾದರೆ ಕಳೆದ 4 ವರ್ಷಗಳಿಂದ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅರಣ್ಯ ಇಲಾಖೆಯ ಕಠಿಣ ಕಾನೂನು ಬಡ ರೈತರಿಗೆ ಮಾತ್ರ ಅನ್ವಯವೇ ಎಂಬುದು ರೈತರ ಪ್ರಶ್ನೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.