ಭದ್ರಾವತಿ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ವೈದ್ಯರು, ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ನಲುಗುತ್ತಿದೆ.
ಆಸ್ಪತ್ರೆಗೆ ಒಬ್ಬ ಎಫ್‌ಡಿಎ, ಕಚೇರಿ ಸಿಬ್ಬಂದಿ ಇದ್ದಾರೆ. ಐಸಿಯು ವಾರ್ಡ್‌ಗಳಲ್ಲಿ ತಂತ್ರಜ್ಞರು, ಶುಶ್ರೂಷಕಿಯರು ಇಲ್ಲ.
100 ಹಾಸಿಗೆಯ ಆಸ್ಪತ್ರೆಯಲ್ಲಿ 98 ಹಾಸಿಗೆಗಳಿಗೆ ವೆಂಟಿಲೇಟರ್ ವ್ಯವಸ್ಥೆ ಇದೆ. ಐಸಿಯು ವಾರ್ಡ್‌ಗಳಲ್ಲಿ 50 ಹಾಸಿಗೆಗಳಿವೆ. ತಲಾ 25ರಂತೆ ಎರಡು ವಾರ್ಡ್‌ಗಳಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ. ದಿನಕ್ಕೆ 1,000 ಹೊರರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಎಲ್ಲಾ ರೋಗಿಗಳಿಗೂ ಪ್ರತ್ಯೇಕ ವಿಭಾಗದ ಕೊಠಡಿಗಳು, ಲ್ಯಾಬ್, ಸ್ಕ್ಯಾನಿಂಗ್, ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲಾ ಸೌಲಭ್ಯ ಇದ್ದರೂ ಸಿಬ್ಬಂದಿ ಕೊರತೆ ಹೆಚ್ಚಿದೆ.
ಆಮ್ಲಜನಕದ ಸಿಲಿಂಡರ್, ವೆಂಟಿಲೇಟರ್ ನಿರ್ವಹಿಸಲು ತಂತ್ರಜ್ಞರು ಇಲ್ಲ.
‘ಹೊರ ರೋಗಿಗಳು ಹೆಸರು ನೋಂದಾಯಿಸಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಿದೆ. ಕಾಯಿಲೆಪೀಡಿತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚು ಕೌಂಟರ್ ತೆರೆಯುವುದಿಲ್ಲ. ಎಲ್ಲೆಡೆ ಸಿಬ್ಬಂದಿ ಕೊರತೆ ಇದೆ’ ಎಂದು ಸ್ಥಳೀಯರಾದ ಬಸವರಾಜಪ್ಪ ದೂರಿದರು.
‘ಆಸ್ಪತ್ರೆಯ ಸೌಲಭ್ಯಗಳು ಉತ್ತಮವಾಗಿದೆ. ಆದರೆ, ಕೆಲವೊಮ್ಮೆ ವೈದ್ಯರು ರಜೆ ಇದ್ದಲ್ಲಿ ಬದಲಿ ವೈದ್ಯರ ವ್ಯವಸ್ಥೆ ಇಲ್ಲ. ವೈದ್ಯರು ಇಲ್ಲದಿರುವ ಮಾಹಿತಿಯ ಫಲಕವೂ ಇಲ್ಲ. ರೋಗಿಗಳು ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲಬೇಕು. ಶುಶ್ರೂಷಕಿಯರ ಕೊರತೆಯೂ ಇದೆ’ ಎಂದು ಕಾರೆಹಳ್ಳಿ ಗ್ರಾಮದ ಲೋಕೇಶ್
ತಿಳಿಸಿದರು.
ಆಸ್ಪತ್ರೆಯಲ್ಲಿ ಅತ್ಯುತ್ತಮ ಸೌಲಭ್ಯಗಳಿವೆ. ಆದರೆ ಅವುಗಳನ್ನು ಬಳಸಲು ತಜ್ಞ ಸಿಬ್ಬಂದಿ ಕೊರತೆ ಇದೆ. ಕಡಿಮೆ ಸಂಖ್ಯೆಯ ವೈದ್ಯರು, ಶುಶ್ರೂಷಕಿಯರು ಇದ್ದಾರೆ. ಕೆಲವು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ವಿಭಾಗಕ್ಕೆ 9ರಿಂದ 10 ವೈದ್ಯರು, ಹೆಚ್ಚಿನ ಸಂಖ್ಯೆಯ ಶುಶ್ರೂಷಕಿಯರು ಇದ್ದಾರೆ. ಸಿಬ್ಬಂದಿ ಕೊರತೆ ಸಂಬಂಧ ಸರ್ಕಾರ ಗಮನಹರಿಸಬೇಕು ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ
ಡಾ. ಶಿವಪ್ರಕಾಶ್ ಮನವಿ ಮಾಡಿದರು.
ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಂಬಂಧಿಸಿದ ಸಚಿವರ ಗಮನಕ್ಕೂ ತರುತ್ತೇನೆ. ತಕ್ಷಣ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು.ಬಿ.ಕೆ ಸಂಗಮೇಶ್ವರ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.