ಭದ್ರಾವತಿ: ತಾಲ್ಲೂಕಿನ ವಿವಿಧೆಡೆ ಇರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಜೊತೆಗೆ ಶಿಥಿಲ ಕಟ್ಟಡಗಳು ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿವೆ.
287 ಸರ್ಕಾರಿ ಶಾಲೆಗಳು, 61 ಅನುದಾನಿತ ಶಾಲೆಗಳು ತಾಲ್ಲೂಕಿನಲ್ಲಿವೆ. 86 ಅನುದಾನ ರಹಿತ ಶಾಲೆಗಳು, 17 ವಸತಿ ಶಾಲೆಗಳು ಹಾಗೂ ಇತರೆ ಎರಡು ಶಾಲೆ ಸೇರಿದಂತೆ 448 ಶಾಲೆಗಳು ಇವೆ. ಅವುಗಳಲ್ಲಿ 298 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿದೆ. 150 ಶಾಲೆಗಳು ನಗರ ಪ್ರದೇಶದ ವ್ಯಾಪ್ತಿಯಲ್ಲಿವೆ.
ತಾಲ್ಲೂಕಿನಲ್ಲಿ 263 ಪ್ರಾಥಮಿಕ ಶಾಲೆಗಳಿಗೆ 991 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 133 ಶಿಕ್ಷಕರ ಕೊರತೆ ಇದೆ. 92 ಸಹ ಶಿಕ್ಷಕರು, 33 ಮುಖ್ಯೋಪಾಧ್ಯಾಯರು, 6 ಜನ ದೈಹಿಕ ಶಿಕ್ಷಕರ ಅಗತ್ಯವಿದೆ.
ದುರಸ್ತಿ ಕಾಣದ ಕಟ್ಟಡ:
ತಾಲ್ಲೂಕಿನ ಒಟ್ಟು 448 ಶಾಲೆಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 76 ಶಾಲೆಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ 33 ಶಾಲೆಗಳ ಕಟ್ಟಡಗಳು ಬಹಳಷ್ಟು ಹಾನಿಗೀಡಾಗಿವೆ. ತುರ್ತು ದುರಸ್ತಿಯ ಅನಿವಾರ್ಯತೆ ಇದೆ. 44 ಶಾಲೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಶೈಕ್ಷಣಿಕ ವರ್ಷ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಶೇ 13ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಆಶಾಲೆಗಳಲ್ಲಿ ದಾಖಲಾತಿಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ತುರ್ತಾಗಿ ಕಟ್ಟಡಗಳ ದುರಸ್ತಿ ಆಗಬೇಕಿದೆ.
ಶಿಕ್ಷಕರ ಕೊರತೆಯನ್ನು ಪರಿಶೀಲಿಸಿ, ಪ್ರಸ್ತುತ 50 ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆಗಳ ಕಟ್ಟಡಗಳಲ್ಲಿ ದುರಸ್ತಿ ಕಾರ್ಯ ಶೀಘ್ರದಲ್ಲಿ ಆಗಬೇಕಿದೆ. ಈ ಕುರಿತು ಕಳೆದ ವರ್ಷವೇ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಈಗ ಮತ್ತೆ ಶಾಸಕ ಬಿ.ಕೆ ಸಂಗಮೇಶ್ವರ್ ಬಳಿ ವಿಷಯ ಪ್ರಸ್ತಾಪಿಸಲಾಗಿದೆ. ಅವರು ತಕ್ಷಣವೇ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಿಗೆ ಕರೆ ಮಾಡಿ ಮಾತಾಡಿದ್ದಾರೆ ಎಂದು ಬಿಇಒ ಎ.ಕೆ.ನಾಗೇಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಅನುದಾನ ಬಿಡುಗಡೆಯಾದೊಡನೆ ಶಾಲೆಗಳಿಗೆ ಬೇಕಿರುವ ಸೌಲಭ್ಯ ಒದಗಿಸಲಾಗುವುದು. ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು-ಎ.ಕೆ.ನಾಗೇಂದ್ರಪ್ಪ ಬಿಇಒ ಭದ್ರಾವತಿ
ಕಟ್ಟಡಗಳ ದುರಸ್ತಿ ಕಾರ್ಯದ ವಿಷಯವಾಗಿ ಸಚಿವರ ಬಳಿ ಪ್ರಸ್ತಾಪಿಸಿದ್ದೇನೆ. ತಕ್ಷಣ ಹೊಸ ಕಟ್ಟಡ ಕಟ್ಟಲು ಸಾಧ್ಯವಿಲ್ಲದಿದ್ದರೂ ತುರ್ತಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು-ಬಿ.ಕೆ.ಸಂಗಮೇಶ್ವರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.