ADVERTISEMENT

ಉಪಚುನಾವಣೆ ನಂತರ ಸಿದ್ದರಾಮಯ್ಯ ರಾಜೀನಾಮೆ: ಬಿ.ವೈ. ವಿಜಯೇಂದ್ರ

ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:28 IST
Last Updated 7 ನವೆಂಬರ್ 2024, 14:28 IST
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿ.ವೈ. ವಿಜಯೇಂದ್ರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಹೂಮಾಲೆ ಹಾಕಿ ಅಭಿನಂದಿಸಿದರು.
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿ.ವೈ. ವಿಜಯೇಂದ್ರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಹೂಮಾಲೆ ಹಾಕಿ ಅಭಿನಂದಿಸಿದರು.   

ಶಿಕಾರಿಪುರ: ಉಪಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜನ್ಮದಿನ ಅಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯಲಿದೆ. ಆಗ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಸರ್ಕಾರದ ಪತನದ ನಂತರ ಯಾವ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ 120 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಯುವ ಸಮುದಾಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವ ಸಮುದಾಯ ನನ್ನ ಮೇಲೆ ಭರವಸೆ ಇಟ್ಟಿದ್ದು, ಈ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರಲು ಶ್ರಮ ಹಾಕುತ್ತೇನೆ’ ಎಂದರು.

ADVERTISEMENT

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿ.ವೈ.ವಿಜಯೇಂದ್ರ ಯುವಶಕ್ತಿಯಲ್ಲಿ ಭರವಸೆ ಮೂಡಿಸಿದ್ದಾರೆ. ಹಿರಿಯರು ಕಟ್ಟಿದ ಬಿಜೆಪಿಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಚಿಕ್ಕ ವಯಸ್ಸಿಗೆ ದೊರೆತಿದೆ. ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಯುವ ಸಮುದಾಯ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿ.ವೈ. ವಿಜಯೇಂದ್ರ ಅವರನ್ನು ಅಭಿನಂದಿಸಿದರು.

ಮುಖಂಡರಾದ ಸಂಕ್ಲಾಪುರ ಹನುಮಂತಪ್ಪ, ಕೆ.ಜಿ. ವಸಂತಗೌಡ, ಬಿ.ಡಿ.ಭೂಕಾಂತ್, ಹುಲ್ಮಾರ್ ಮಹೇಶ್, ರೇಣುಕಾಸ್ವಾಮಿ, ಎಸ್.ಎಸ್.ರಾಘವೇಂದ್ರ, ಕೊರಲಹಳ್ಳಿ ನಾಗರಾಜ್, ಮಾರವಳ್ಳಿ ಅಶೋಕ್, ವೀರನಗೌಡ, ಬೆಣ್ಣೆ ಪ್ರವೀಣ್, ಲೋಹಿತನಾಯ್ಕ, ಜೆ.ಎಸ್.ಮಂಜುನಾಥ್, ಶ್ರೀನಿವಾಸ್ ನಾಯ್ಡು, ವಿನಯ್, ವೀರೇಶ್, ಶ್ರವಣ್, ಮಂಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.