ಸಾಗರ: ‘ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿವಾದ ಬೀದಿಗೆ ಬರಲು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಇಲ್ಲಿನ ಈಡಿಗರ ಸಂಘದ ಪ್ರಮುಖರೇ ಕಾರಣ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಈಡಿಗರ ಸಮುದಾಯ ಭವನದ ಎದುರು ಈಡಿಗ ಸಮಾಜದ ಪ್ರಮುಖರು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
‘ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂಬ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಬಂದಾಗ ಅದನ್ನು ಖಡಾಖಂಡಿತವಾಗಿ ನಾನು ವಿರೋಧಿಸಿದ್ದೇನೆ. ಈ ಸಂಬಂಧ ಸಿಗಂದೂರು ದೇವಿ ಎದುರು ಪ್ರಮಾಣ ಮಾಡಲು ಸಿದ್ಧನಿದ್ದೇನೆ’ ಎಂದರು.
‘ಕೆಲವು ತಿಂಗಳುಗಳ ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬೇಕು ಎಂದು ಹೇಳಿಕೆ ನೀಡಿದ್ದು ವಿವಾದ ಬೆಳೆಯಲು ದಾರಿ ಮಾಡಿಕೊಟ್ಟಿತು. ನಂತರ ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರನ್ನು ಒಟ್ಟಿಗೆ ಸೇರಿಸಿ ರಾಜೀ ಸಂಧಾನ ನಡೆಸಲು ಪ್ರಯತ್ನಿಸಿದೆ. ಆದರೆ, ರಾಮಪ್ಪ ಅವರುಮಾತುಕತೆಗೆ ಬರಲಿಲ್ಲ. ಇದಕ್ಕೆ ಇಲ್ಲಿನ ಈಡಿಗರ ಸಂಘದ ಕೆಲವು ಪದಾಧಿಕಾರಿಗಳೇ ಕಾರಣ’ ಎಂದು ದೂರಿದರು.
‘ರಾಮಪ್ಪ ಅವರ ಕೋರಿಕೆ ಮೇರೆಗೆ ಹಿಂದುಳಿದ ವರ್ಗಕ್ಕೆ ಸೇರಿದ 21 ಮಠಾಧೀಶರನ್ನು ಬೆಂಗಳೂರಿಗೆ ಕರೆಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ಕಲ್ಪಿಸಿದ್ದೆ. ಎಲ್ಲಾ ಮಠಾಧೀಶರ ಸಹಮತದೊಂದಿಗೆ ರೇಣುಕಾನಂದ ಶ್ರೀ ಅವರನ್ನು ಜಿಲ್ಲಾಧಿಕಾರಿ ಅವರು ನೇಮಿಸಿರುವ ಸಮಿತಿಯಲ್ಲಿ ಸೇರಿಸಲಾಗಿದೆ. ಇದನ್ನು ಸಮಾಜದ ವಿಭಜನೆ ಎಂದು ಹೇಳಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.
ಕಾಗೋಡು ಹೇಳಿಕೆಯ ವಿಡಿಯೊ ತುಣುಕು ಪ್ರದರ್ಶನ
ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಹಿಂದೆ ನೀಡಿದ್ದ ಹೇಳಿಕೆಯ ವಿಡಿಯೊ ತುಣುಕನ್ನು ಸಭೆಯಲ್ಲಿ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಯಿತು.
ಅಲ್ಲದೇ ಸಿಗಂದೂರು ದೇವಸ್ಥಾನದಲ್ಲಿ ಹೊಡೆದಾಟ ನಡೆದ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಶಾಸಕ ಹಾಲಪ್ಪ ನೀಡಿದ ಸಂದರ್ಶನದ ತುಣುಕನ್ನು ಸಹ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.