ತುಮರಿ: ನಿತ್ಯ ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು, ಸ್ಥಳೀಯರನ್ನು ಸುರಕ್ಷಿತವಾಗಿ ದಡ ಸೇರಿಸುವ ‘ಅಂಬಿಗ’ರಾಗಿ ಕಾರ್ಯ ನಿರ್ವಹಿಸುವ ಸಿಗಂದೂರು ಲಾಂಚ್‌ನ ಅರೆಕಾಲಿಕ ನೌಕರರು ವೇತನ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಈ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಅವರ ಬದುಕು ದುಸ್ತರವಾಗಲು ಕಾರಣವಾಗಿದೆ.
ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಸಿಗಂದೂರು, ಹಲ್ಕೆ–ಮುಪ್ಪಾನೆ, ನಿಟ್ಟೂರು ಬಳಿಯ ಹಸಿರುಮಕ್ಕಿ ಪ್ರದೇಶದ ಕಡವು ಕೇಂದ್ರಗಳ ಬಳಿ ಸೇರಿದಂತೆ ಒಟ್ಟು 7 ಲಾಂಚ್‌ಗಳಿವೆ. ಈ ಕಡವಿನಲ್ಲಿ (ಲಾಂಚ್) ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸಿಬ್ಬಂದಿ ಸೇರಿ 19 ಮಂದಿ ನೌಕರರಿಗೆ ಒಂದು ವರ್ಷದಿಂದ ವೇತನ ನೀಡದೆ ಅಧಿಕಾರಿಗಳು ಶೋಷಿಸುತ್ತಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ನೀಡದಂತೆ ಬೆದರಿಕೆ: ಅರೆಕಾಲಿಕ ನೌಕರರಿಗೆ ವೇತನ ನೀಡದೇ ಇರುವ ವಿಚಾರದ ಬಗ್ಗೆ ಇಲಾಖೆಯ ಅಧಿಕಾರಿಗಳು ಒಂದು ವರ್ಷದಿಂದ ಗೌಪ್ಯತೆ ಕಾಪಾಡಿಕೊಂಡಿದ್ದು, ‘ಈ ಬಗ್ಗೆ ನೌಕರರು ಹೊರಗಿನವರೊಂದಿಗೆ ಚರ್ಚಿಸಬಾರದು. ಈ ವಿಚಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರೆ ಕರ್ತವ್ಯ ಲೋಪದ ಹಣೆಪಟ್ಟಿ ಕಟ್ಟಿ ಕೆಲಸದಿಂದ ಕಿತ್ತು ಹಾಕಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನಿಗದಿಗಿಂತ ಅಧಿಕ ಕಾರ್ಯ ನಿರ್ವಹಣೆ: ನಿತ್ಯ ಲಾಂಚ್ ಸೇವೆ ಬೆಳಿಗ್ಗೆ 8ಕ್ಕೆ ಆರಂಭವಾಗುತ್ತದೆ. ಆದರೆ, ನೌಕರರು ಇದಕ್ಕಾಗಿ ಮುಂಚಿತವಾಗಿಯೇ ಪೂರ್ವತಯಾರಿ ನಡೆಸಬೇಕಿದೆ. ಸಿಗಂದೂರು ಲಾಂಚ್ ಸಿಬ್ಬಂದಿಯ ಕೆಲಸಕ್ಕೆ ನಿರ್ದಿಷ್ಟ ಕಾಲಾವಕಾಶ ನಿಗದಿಪಡಿಸಿಲ್ಲ. ಮಧ್ಯಾಹ್ನದ ಊಟವನ್ನೂ ಲಾಂಚ್ ಕಾರ್ಯನಿರ್ವಹಿಸುವ ಸಮಯದಲ್ಲಿಯೇ ಮುಗಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸೂರ್ಯೋದಯಕ್ಕೂ ಮೊದಲೇ ಕೆಲಸಕ್ಕೆ ಹೊರಟು ತಡರಾತ್ರಿ ಮನೆ ಸೇರುವ ನೌಕರರಿಗೆ ಕುಟುಂಬ ನಿರ್ವಹಣೆಯ ಸವಾಲು ಇದೆ. ಒಂದೆಡೆ ವರ್ಷದಿಂದ ವೇತನ ನೀಡದ ಇಲಾಖೆ, ಇನ್ನೊಂದೆಡೆ ನಿತ್ಯ ಸ್ವಂತ ಹಣದಲ್ಲೇ ಕಡವು ನಿಲ್ದಾಣಕ್ಕೆ ಬರಲೇಬೇಕಾದ ಅನಿವಾರ್ಯತೆ ಇದೆ.
ಇಲಾಖೆಯ ದ್ವಂದ್ವ ನಡೆ: ಇಲಾಖೆ ಅಧಿಕಾರಿಗಳು ಸ್ಥಳೀಯ ಶಾಸಕರಿಗೂ ಈ ಬಗ್ಗೆ ಮಾಹಿತಿ ನೀಡಿದೆ ಮುಚ್ಚಿಟ್ಟಿರುವ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಹಿಂದೆಯೂ ಹೀಗೆಯೇ ವೇತನ ನೀಡದ ಕಾರಣ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಹಣ ಬಿಡುಗಡೆ ಮಾಡಲಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಲಾಂಚ್ ತಡೆ ಸಾಧ್ಯತೆ: ವೇತನ ಬಿಡುಗಡೆಗೆ ಆಗ್ರಹಿಸಿ ಈಗಾಗಲೇ ಜನಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟಿಸಿದ್ದು, ಸೆ. 20ರೊಳಗೆ ವೇತನ ನೀಡದಿದ್ದರೆ ಲಾಂಚ್ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗಡುವು ನೀಡಿವೆ. ಗಡುವು ಮುಗಿಯುವ ಒಳಗಾಗಿ ನೌಕರರಿಗೆ ವೇತನ ಕೈಸೇರಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವರೊಂದಿಗೆ ಶಾಸಕ ಚರ್ಚೆ
ನೌಕರರ ವೇತನ ಕುರಿತು ಬೆಂಗಳೂರಿನಲ್ಲಿ ಸೋಮವಾರ ಶಾಸಕ ಹರತಾಳು ಹಾಲಪ್ಪ ಅವರು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್.ಅಂಗಾರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ವಿವರಣೆ ಪಡೆದಿದ್ದಾರೆ.
ಎಲ್ಲ ಹೊರ ಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆಗೆ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲಾಗಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು.
ಧನೇಂದ್ರ, ಕಡವು ನಿರೀಕ್ಷಕ, ಸಾಗರ
ಲಾಂಚ್‌ನಲ್ಲಿ ಕಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ವೇತನ ನೀಡದಿರುವ ವಿಚಾರ ಗಮನಕ್ಕೆ ಬಂದಿದೆ. ಈಗಾಗಲೇ ಕಡವು ನಿರೀಕ್ಷಕ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. 7 ದಿನಗಳಲ್ಲಿ ವಿವರಣೆ ಕೇಳಿದ್ದು, ನಂತರ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು.
ಶಿಲ್ಪಾ ಬಿ., ಕಾರ್ಮಿಕ ಅಧಿಕಾರಿ, ಸಾಗರ– ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.