ADVERTISEMENT

ಎಮ್ಮೆಹಟ್ಟಿಯಲ್ಲಿ ಮೌನ: ಮನೆದೇವರ ದರ್ಶನಕ್ಕೆ ಹೋದವರು ಜವರಾಯನ ಕರೆಗೆ ಓಗೊಟ್ಟರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 7:10 IST
Last Updated 28 ಜೂನ್ 2024, 7:10 IST
<div class="paragraphs"><p>ಎಮ್ಮೆಹಟ್ಟಿಯಲ್ಲಿ ಶುಕ್ರವಾರ ನಾಗೇಶರಾವ್ ಅವರ ಮನೆಯ ಎದುರು ಸಂಬಂಧಿ ಸುರೇಶ್ ಅಳುತ್ತಾ&nbsp;ಕುಳಿತಿದ್ದರು</p></div>

ಎಮ್ಮೆಹಟ್ಟಿಯಲ್ಲಿ ಶುಕ್ರವಾರ ನಾಗೇಶರಾವ್ ಅವರ ಮನೆಯ ಎದುರು ಸಂಬಂಧಿ ಸುರೇಶ್ ಅಳುತ್ತಾ ಕುಳಿತಿದ್ದರು

   

ಶಿವಮೊಗ್ಗ: ಬೆಳಗಾದರೆ ಶುಕ್ರವಾರ. ದರ್ಶನ ಮಾಡಿಕೊಂಡು ಬಂದ ಮನೆ ದೇವರು ಚಿಂಚಲಿ ಮಾಯಮ್ಮನ ಪಡಲಿಗೆ ತುಂಬಿಸಿ, ಎಡೆ ಸಲ್ಲಿಸಿ ಊರಿನವರಿಗೆ ಹೋಳಿಗೆ ಊಟ ಹಾಕಿಸಿ ಆಕೆಯನ್ನು ಹಿಂದಕ್ಕೆ ಕಳಿಸುವ ಧಾವಂತದಲ್ಲಿ ಇಲ್ಲಿನ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿಗೆ ಮರಳುತ್ತಿದ್ದವರು ಅಪಘಾತದಲ್ಲಿ ಜವರಾಯನ ಕರೆಗೆ ಓಗೊಟ್ಟಿದ್ದಾರೆ.

ಎಮ್ಮೆಹಟ್ಟಿಯ ನಾಗೇಶರಾವ್ ಕುಟುಂಬ ಹಾಗೂ ಅವರ ಸಂಬಂಧಿಕರು 13 ಮಂದಿ ಹಾವೇರಿ ಬಳಿ ಬೆಳಗಿನ ಜಾವ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಮರಾಠ ಸಮುದಾಯದ 300ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿರುವ ಎಮ್ಮೆಹಟ್ಟಿಯಲ್ಲಿ ನಸುಕಿನಲ್ಲಿ ಹೊಳೆಹೊನ್ನೂರು ಪೊಲೀಸರು ತಂದ ದುರಂತದ ಸುದ್ದಿಯ ನಂತರ ನೀರವ ಮೌನ ಆವರಿಸಿದೆ.

ನಾಗೇಶರಾವ್ ಅವರ ಮನೆಗೆ ಬಂದಿರುವ ಸಂಬಂಧಿಕರ ಮುಖದಲ್ಲಿ ದುಖಃದ ಛಾಯೆ ಮಡುಗಟ್ಟಿದೆ. ಗ್ರಾಮದ ಮುಖಂಡರು ಶವಗಳ ತರಲು ಹಾವೇರಿಗೆ ತೆರಳಿದ್ದಾರೆ.

ನಾಗೇಶರಾವ್ ಭದ್ರಾವತಿ ತಾಲ್ಲೂಕಿನ ಡಿ.ಬಿ.ಹಳ್ಳಿಯಲ್ಲಿ ನೀರಾವರಿ ಇಲಾಖೆಯ ನೀರಗಂಟಿ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ವಿಶಾಲಾಕ್ಷಿ ಎಮ್ಮೆಹಟ್ಟಿಯಲ್ಲಿ ಆಶಾ ಕಾರ್ಯಕರ್ತೆ. ಪುತ್ರ ಆದರ್ಶ ಚಾಲಕ ವೃತ್ತಿಯಲ್ಲಿ ತೊಡಗಿಕೊಂಡಿದ್ದನು. ಪುತ್ರಿ ಅರ್ಪಿತಾ ಅಂಗವಿಕಲೆ.

ಆರು ವರ್ಷಗಳಿಂದ ಬೇರೆಯವರ ಬಳಿ ಚಾಲಕ ಕೆಲಸ ಮಾಡುತ್ತಿದ್ದ ಆದರ್ಶ, 20 ದಿನಗಳ ಹಿಂದಷ್ಟೇ ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾವೆಲರ್ ವಾಹನ ಖರೀದಿ ಮಾಡಿದ್ದರು.

ಊರಿನಲ್ಲಿ 12 ಗುಂಟೆ ಜಾಗ, ಮನೆ ಬಿಟ್ಟರೆ ನಾಗೇಶರಾವ್ ಅವರಿಗೆ ಬೇರೆ ಆಸ್ತಿ ಇಲ್ಲ. ಪುತ್ರ ಹೊಸ ವಾಹನ ಖರೀದಿಸಿದ್ದ ಸಂಭ್ರಮಕ್ಕೆ ಸಂಬಂಧಿಕರನ್ನು ಕರೆದುಕೊಂಡು ನಾಗೇಶರಾವ್ ಮನೆದೇವರು ಬೆಳಗಾವಿ ಜಿಲ್ಲೆ ಚಿಂಚಲಿಯ ಮಾಯಮ್ಮ ಹಾಗೂ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಕರೆದೊಯ್ದಿದ್ದರು.

ನಾಗೇಶರಾವ್ ಅವರ ಸಹೋದರ ಸಂಬಂಧಿಗಳಾದ ಶರಣಪ್ಪ, ಪರಶುರಾಮ ಹಾಗೂ ಪುಣ್ಯವತಿ ಕುಟುಂಬದ 17 ಮಂದಿ ಊರಿನಿಂದ ಸೋಮವಾರ ಮಧ್ಯರಾತ್ರಿ ಚಿಂಚಲಿಗೆ ತೆರಳಿದ್ದರು. ಅಲ್ಲಿಂದ ಮಹಾರಾಷ್ಟ್ರದ ಚೋಟೆ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಹೋಗಿದ್ದರು.

'ನಮ್ಮ ಕುಟುಂಬದವರನ್ಬು ದೇವರಿಗೆ ಕರೆದಿದ್ದರು. ಪತ್ನಿಗೆ ಹುಷಾರಿಲ್ಲದ ಕಾರಣ ನಾವು ಹೋಗಲಿಲ್ಲ. ಅಮ್ಮನ (ಸುಭದ್ರಮ್ಮ) ಕಳಿಸಿದ್ದೆವು. ಅಳಿಯ ಆದರ್ಶ ಅನುಭವಿ ಚಾಲಕ. ಊರಿನಲ್ಲಿ (ಎಮ್ಮೆಹಟ್ಟಿ) ಯಾರೇ ದೇವರ ದರ್ಶನಕ್ಕೆ ಹೋದರೂ ಆತನೇ ಕರೆದೊಯ್ಯುತ್ತಿದ್ಸ. ಯಾಕೆ ಅವಘಡ ಸಂಭವಿಸಿತೋ ಗೊತ್ತಾಗುತ್ತಿಲ್ಲ' ಎಂದು ಅಳುತ್ತಾ ಕುಳಿತಿದ್ದ ಸೋದರ ಮಾವ ಸುರೇಶ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಮನೆಯಲ್ಲಿ ಅಕ್ಕ, ಮಾವ, ಅಳಿಯ (ವಿಶಾಲಾಕ್ಷಿ, ನಾಗೇಶರಾವ್ ಹಾಗೂ ಆದರ್ಶ) ಯಾರೂ ಇಲ್ಲ. ಒಳಗೆ ಹೋಗಲು ಮನಸ್ಸು ಬರುತ್ತಿಲ್ಲ. ಸೊಸೆ (ಅರ್ಪಿತಾ) ಅಂಗವಿಕಲೆ. ಆಕೆಗೆ ಯಾರು ದಿಕ್ಕು ಎಂದು ಸುರೇಶ ಬಿಕ್ಕಳಿಸಿದರು.

ಶಾಲೆಗೆ ರಜೆ ಘೋಷಣೆ: ಅಪಘಾತದಲ್ಲಿ ಊರಿನವರ ಸಾವಿನ ಹಿನ್ನೆಲೆಯಲ್ಲಿ ಎಮ್ಮೆಹಟ್ಟಿ ಸರ್ಕಾರಿ ಶಾಲೆಗೆ ರಜೆ ಘೋಷಿಸಲಾಗಿತ್ತು.

ಸಾವಿಗೀಡಾದವರ ಶವಗಳನ್ನು ಊರಿಗೆ ಸಂಜೆ ತರಲಿದ್ದಾರೆ ಎಂದು ತಿಳಿದುಬಂದಿದೆ. ಊರಿನ ಅಗಸಿಯೊಳಗೆ ಶವಗಳನ್ನು ತರುವಂತಿಲ್ಲ. ಶಾಲೆಯ ಅಂಗಳದಲ್ಲಿ ಇಟ್ಟು ಅಲ್ಲಿಂದ ಸ್ಮಶಾನಕ್ಕೆ ಕೊಂಡೊಯ್ಯಲಾಗುವುದು ಎಂದು ವಿಶಾಲಾಕ್ಷಿ ಅವರ ಚಿಕ್ಕಮ್ಮನ ಮಗ ಶಂಕರ ಹೇಳಿದರು.

ಶರಣಪ್ಪ ಹಾಗೂ ಪುಣ್ಯವತಿ ಅವರ ಕುಟುಂಬಗಳು ಸಮೀಪದ ಕಲ್ಲಿಹಾಳ ಕ್ರಾಸ್ ನಲ್ಲಿ ನೆಲೆಸಿದ್ದರೆ, ಪರಶುರಾಮ ಶಿವಮೊಗ್ಗದ ಆಲ್ಕೊಳ ಕ್ರಾಸ್ ನಲ್ಲಿ ಗ್ಯಾರೇಜ್ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.