ADVERTISEMENT

ರಾಜಕಾರಣಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು: ಸಿರಿಗೆರೆ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:19 IST
Last Updated 1 ಸೆಪ್ಟೆಂಬರ್ 2024, 15:19 IST
ಹೊಳೆಹೊನ್ನೂರಿನ ಸಮೀಪದ ನಾಗತಿಬೆಳಗಲು ಗ್ರಾಮದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಹೊಳೆಹೊನ್ನೂರಿನ ಸಮೀಪದ ನಾಗತಿಬೆಳಗಲು ಗ್ರಾಮದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಹೊಳೆಹೊನ್ನೂರು: ‘ರಾಜಕಾರಣಿಗಳು ಹೇಳುವುದು ಒಂದು ಮಾಡುವುದು ಮತ್ತೊಂದು. ಮನುಷ್ಯನ ನಡೆ–ನುಡಿಯಲ್ಲಿ  ಸಾಮರಸ್ಯವಿರಬೇಕು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ನಾಗತಿಬೆಳಗಲು ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದರು.

ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಬಾರದು. ಬಸವಾದಿ ಶಿವ ಶರಣರ ತತ್ವಗಳನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ದೊಡ್ಡ ಗುರುಗಳಿಗೆ ಸಲ್ಕುತ್ತದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿಯ ಸೆಳೆತ ಇರುತ್ತದೆ. ಭಕ್ತ ಮತ್ತು ದೇವರ ಮಧ್ಯೆ ಭಕ್ತಿಯ ಸೆಳೆತವಿರುತ್ತದೆ ಎಂದರು.

ADVERTISEMENT

ಪುರಾಣ ನಿತ್ಯ ಜೀವನದ ಕನ್ನಡಿ ಎಂದರೆ ತಪ್ಪಾಗಲಾರದು. ಉಪಕಾರ ಪಡೆದು ಬೆನ್ನಿಗೆ ಚೂರಿ ಹಾಕುವವರ ಕಥೆಗಳೇ ಪುರಾಣಗಳಲ್ಲಿವೆ. ಯುವಕರು ಮಠದ ಆಸ್ತಿ ಪ್ರತಿಯೊಂದು ಹಳ್ಳಿಗಳಲ್ಲಿ ಯುವಕರ ಗುಂಪು ರಚಿಸಲಾಗಿದೆ. ಮಠದ ಭವ್ಯ ಇತಿಹಾಸ ಅನೇಕರಿಗೆ ತಿಳಿದಿಲ್ಲ. ಸುಳ್ಳು ಸತ್ಯದ ಬಟ್ಟೆ ತೊಟ್ಟು ನಡೆದರೆ ಅದೇ ಸೌಂದರ್ಯವಲ್ಲ. ಸುಳ್ಳು ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿ ಸುಲಭವಾಗಿ ವಿಶ್ವ ಪರ್ಯಟನೆ ಮಾಡುತ್ತದೆ ಎಂದು ಹೇಳಿದರು.

ಸಾಧು ಸದ್ಧರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಚ್.ಅರ್. ಬಸವರಾಜಪ್ಪ, ‘ಸ್ವಾತಂತ್ರ್ಯ ಪೂರ್ವದ ಕಷ್ಟದ ದಿನಗಳಲ್ಲಿ ಮಠವನ್ನು ಮುನ್ನಡೆಸಿ ಹಳ್ಳಿಗಳಲ್ಲಿ ಶಾಲೆ ತೆರೆದು ಶಿಕ್ಷಣ ನೀಡಿದ ಕೀರ್ತಿ ತರಳಬಾಳು ಮಠಕ್ಕೆ ಸಲ್ಲುತ್ತದೆ. ಮಠದ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದವರು ವಿದೇಶಗಳಲ್ಲಿ ಉನ್ನತ ಹುದ್ದೆಯಲಿದ್ದಾರೆ. ಆರ್ಥಿಕವಾಗಿ ಮಠವನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಶಿವಮೂರ್ತಿ ಶಿವಾಚಾರ್ಯ ಶ್ರೀಗೆ ಸಲ್ಲುತ್ತದೆ. ರೈತರ ಬಗ್ಗೆ ವಿಶೇಷ ಕಾಳಜಿ ಇರುವ ಮಠ ಎಂದರೆ ತಪ್ಪಾಗಲಾರದು. ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ’ ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯಾ ನಾಯ್ಕ್, ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ, ಸಾಧು ಸಮಾಜದ ಅಧ್ಯಕ್ಷ ಕೆ.ಜಿ. ರವಿ ಕುಮಾರ್, ಡಿಸಿಸಿ ಬ್ಯಾಂಕ್ ಸದಸ್ಯ ಎಚ್.ಎಲ್. ಷಡಾಕ್ಷರಿ, ಯುವ ವೇದಿಕೆ ಅಧ್ಯಕ್ಷ ಸಂಕೇತ್, ಉದ್ಯಮಿ ಶಿವಕುಮಾರ್, ಜಗನಾಥ್, ಎಚ್. ಬಸಪ್ಪ, ಗದೀಗೇಶ್, ಎಚ್‌.ಎಸ್. ಸಂಜೀವ್ ಕುಮಾರ್, ವಿಜಯ್ ಕುಮಾರ್, ತೀರ್ಥಯ್ಯ, ಜಯಕುಮಾರ್, ಶಂಕರ ಮೂರ್ತಿ, ಶ್ರೀಧರ್ ಪಾಟೀಲ್, ವಿರೂಪಾಕ್ಷಪ್ಪ, ಪರಮೇಶ್ವರಪ್ಪ, ಜಗದೀಶಪ್ಪಗೌಡ, ತೇಜಸ್ವಿನಿ ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.