ಶಿವಮೊಗ್ಗ: ಮಹಾರಾಷ್ಟ್ರ ಸರ್ಕಾರ ನಾಗಪುರದಲ್ಲಿ ನಡೆಸುವ ಚಳಿಗಾಲದ ಅಧಿವೇಶನದ ಅಧ್ಯಯನಕ್ಕೆ ಶೀಘ್ರದಲ್ಲೇ ನಿಯೋಗ ತೆರಳಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸೊರಬದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ಜನರ ಆಶಯಗಳಿಗೆ ಪೂರಕವಾದ ರಚನಾತ್ಮಕ ಚರ್ಚೆಗಳಿಗೆ ವೇದಿಕೆಯಾಗಲಿಲ್ಲ. ಬರೀ ಆರೋಪ-ಪ್ರತ್ಯಾರೋಪಗಳಿಗೆ ನೆಲೆಯಾಯಿತು. ರಾಜ್ಯದ ಜನರು ಬರ ಪರಿಸ್ಥಿತಿಯಂತಹ ಸಂಕಷ್ಟದಲ್ಲಿದ್ದರೂ ಆ ಬಗ್ಗೆ ಯಾವುದೇ ಗಂಭೀರ ಚರ್ಚೆ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರ್ಕಾರ ನಡೆಸುವ ನಾಗಪುರದ ಚಳಿಗಾಲದ ಅಧಿವೇಶನ ಗಂಭೀರ ಚರ್ಚೆಗಳಿಗೆ ವೇದಿಕೆ ಆಗುತ್ತಿದೆ. ಹೀಗಾಗಿ ಅದರ ಅಧ್ಯಯನ ನಡೆಸಿ ಅಲ್ಲಿನ ಉತ್ತಮ ಅಂಶಗಳ ಅವಲೋಕನಕ್ಕೆ ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮೊದಲಿಗೆ ನನ್ನ ನೇತೃತ್ವದಲ್ಲಿ ಪರಿಷತ್ ಸಭಾನಾಯಕ ಹಾಗೂ ವಿರೋಧ ಪಕ್ಷದ ನಾಯಕರನ್ನೊಳಗೊಂಡ ನಿಯೋಗ ಮಹಾರಾಷ್ಟ್ರಕ್ಕೆ ತೆರಳಲಿದ್ದೇವೆ. ನಂತರ ವಿಧಾನ ಪರಿಷತ್ ಸದಸ್ಯರನ್ನು ಕರೆದೊಯ್ಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು..
'ವಿಧಾನ ಪರಿಷತ್ ಮೊದಲಿಗೆ ಮುತ್ಸದ್ಧಿಗಳ ವೇದಿಕೆ ಆಗಿತ್ತು. ಈಗ ಮಹತ್ವ ಕಳೆದುಕೊಳ್ಳುತ್ತಿದೆ. ಮೊದಲೆಲ್ಲ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಪರಿಷತ್‌ಗೆ ಬರುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ದೊಡ್ಡ ನಾಯಕರ ಹಿಂದೆ ಓಡಾಡುವವರು, ಹಣ ಇದ್ದವರು ಬರುತ್ತಿದ್ದಾರೆ. ಯುವ ಸದಸ್ಯರಿಗೆ ತರಬೇತಿ ನೀಡಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಇದು ಪಕ್ಷಾತೀತವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.