ADVERTISEMENT

ಸೊರಬ | ಅಕಾಲಿಕ ಮಳೆಯಿಂದ ನೆಲಕಚ್ಚಿದ ಬೆಳೆ: ನಷ್ಟದ ಭೀತಿಯಲ್ಲಿ ರೈತ ಸಮುದಾಯ

ರಾಘವೇಂದ್ರ ಟಿ.
Published 24 ಅಕ್ಟೋಬರ್ 2024, 7:11 IST
Last Updated 24 ಅಕ್ಟೋಬರ್ 2024, 7:11 IST
ಸೊರಬ ತಾಲ್ಲೂಕಿನ ಜಡೆ ಹೋಬಳಿ ವ್ಯಾಪ್ತಿಯ ಸಾಲಗಿ‌ ಮತ್ತು ಮಾಕೊಪ್ಪ ಗ್ರಾಮದಲ್ಲಿ ಅಧಿಕ ಮಳೆಯಿಂದ ಭತ್ತದ ಬೆಳೆ‌‌ ನೆಲಕಚ್ಚಿರುವುದು
ಸೊರಬ ತಾಲ್ಲೂಕಿನ ಜಡೆ ಹೋಬಳಿ ವ್ಯಾಪ್ತಿಯ ಸಾಲಗಿ‌ ಮತ್ತು ಮಾಕೊಪ್ಪ ಗ್ರಾಮದಲ್ಲಿ ಅಧಿಕ ಮಳೆಯಿಂದ ಭತ್ತದ ಬೆಳೆ‌‌ ನೆಲಕಚ್ಚಿರುವುದು   

ಸೊರಬ: ತಾಲ್ಲೂಕಿನಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಕೆರೆ, ಕಟ್ಟೆ, ಹಳ್ಳ–ಕೊಳ್ಳ ತುಂಬಿ ಹರಿಯುತ್ತಿವೆ. ಪರಿಣಾಮ ಅಚ್ಚಕಟ್ಟು ಪ್ರದೇಶದ ಹೊಲ, ಗದ್ದೆಗಳು ಜಲಾವೃತಗೊಂಡು ಸಂಪೂರ್ಣ ಬೆಳೆ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ.

ತಾಲ್ಲೂಕಿನ ಜಡೆ ಹಾಗೂ ಆನವಟ್ಟಿ ಹೋಬಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಭತ್ತದ ಗದ್ದೆಗೆ ನೀರು‌ ನುಗ್ಗಿ ಕಟಾವಿಗೆ ಬಂದ‌ ನೂರಾರು ಎಕರೆ ಭತ್ತ ನೆಲಕಚ್ಚಿದೆ. ಆರಂಭದಲ್ಲಿ ಮುಂಗಾರು ಮಳೆಯ ಅರ್ಭಟದಿಂದಾಗಿ ರೈತರು ಪೂರ್ಣಪ್ರಮಾಣದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಮಳೆ ಬಿಡುವು ಕೊಟ್ಟಾಗ ಅಲ್ಪಸ್ವಲ್ಪ ಬಿತ್ತನೆ ಮಾಡಿದ್ದರು. ಹಾಕಿದ ಬೀಜ ಮೊಳಕೆಯೊಡೆದು ಕಸುವಾಗಿ ಏಳಲು ಕೂಡ ಮಳೆ ಅವಕಾಶ ನೀಡಲಿಲ್ಲ. ಅದರಲ್ಲೂ ಔಷಧೋಪಚಾರ ಮಾಡಿ ಬೆಳೆ ಕಾಪಾಡಿಕೊಂಡು ಉತ್ತಮ ಫಸಲಿನ‌ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಹಿಂಗಾರು ವರ್ಷಧಾರೆ ಆತ್ಮವಿಶ್ವಾಸವನ್ನೇ ಹುದುಗುವಂತೆ ಮಾಡಿದೆ.

ವಾಡಿಕೆಗಿಂತ ಅಧಿಕ ಮಳೆ ಬಿದ್ದು ಈಗಾಗಲೇ ಶೇ 80ರಷ್ಟು ಅಡಿಕೆಗೆ ಕೊಳೆ ರೋಗ ವ್ಯಾಪಿಸಿ ತೋಟದಲ್ಲಿ ಬೆಳೆ ಹಾಳಾಗಿದೆ. ಇಲ್ಲಿಯವರೆಗೂ ಮುಸುಕಿನ ಜೋಳ ಹಾಗೂ ಭತ್ತಕ್ಕೆ ಅಷ್ಟೊಂದು ಹಾನಿ ಆಗಿರಲಿಲ್ಲ. ಆದರೆ ಕಳೆದೊಂದು ತಿಂಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕಟಾವಿಗೆ ಬಂದ ಜೋಳ ಹೊಲದಲ್ಲಿ ಹಾಳಾಗುತ್ತಿದೆ. ಮಳೆ ಬಿಸಿಲಿಗೆ ಭತ್ತಕ್ಕೂ ಬೆಂಕಿ ಹಾಗೂ ಕಂದು ರೋಗ ವ್ಯಾಪಿಸಿದೆ. ಶೇ 70ರಷ್ಟು ಜೋಳ ಹಾಗೂ ಶೇ 60ರಷ್ಟು ಭತ್ತಕ್ಕೆ ಹಾನಿಯಾಗಿದೆ.

ADVERTISEMENT

ಈ ಬಾರಿ ಅಧಿಕ ಮಳೆಯಿಂದ ಭತ್ತದ ಬಿತ್ತನೆ ಹಾಗೂ ನಾಟಿ ತಡವಾಗಿತ್ತು. ಬಹಳಷ್ಟು ರೈತರ ಹೊಲದಲ್ಲಿ ಭತ್ತದ ತೆನೆ ಹೊರಬರುವ ಹಂತದಲ್ಲಿದೆ. ಅಕಾಲಿಕ ಮಳೆಯಿಂದ ಭತ್ತದ ಸಸಿಯ ಬುಡದಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ. ಬೆಳೆಗೆ ಗಾಳಿ ಸುಳಿದಾಡುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ಕಂದು ಜಿಗಿಹುಳು ಬಾಧೆ ಉಲ್ಬಣಗೊಂಡಿದೆ. ನಾಲ್ಕು ಭಾಗದಲ್ಲಿ ಬದು ಒಡೆದು ನೀರು ಹೊರತೆಗೆದು ಸಸಿಯ ಬುಡಕ್ಕೆ ಔಷಧಿ ಸಿಂಪಡಿಸುವಂತೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿ ಪೂರೈಕೆ ಮಾಡಲಾಗಿದೆ.

ಬೆಳೆಗೆ ಮಾಡಿದ ಸಾಲ ಮಾತ್ರ ಹೆಚ್ಚಾಗುತ್ತಿದೆ. ರೋಗ ಬಾಧೆಗೆ ಒಳಗಾಗಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇಲ್ಲ ಎನ್ನುತ್ತಾರೆ ರೈತ ಧರ್ಮಪ್ಪ.

ಮಳೆ ಹೆಚ್ಚಳಗೊಂಡು ಜೋಳ ಭತ್ತ ಜಲಾವೃತಗೊಂಡಿದೆ. ಹವಾಮಾನ ಬದಲಾವಣೆಯಿಂದ ರೋಗ ಹರಡುತ್ತಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಮಾಹಿತಿ ನೀಡಲಾಗಿದೆ. ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
ಕೆ.ಜಿ‌.ಕುಮಾರ್ ಸಹಾಯಕ ಕೃಷಿ ಅಧಿಕಾರಿ
ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ ಹಾಗೂ ಜೋಳ ಬೆಳೆಯಲಾಗಿತ್ತು. ಮಳೆಯಿಂದ ಬೆಳೆ ನಾಶವಾಗಿದೆ. ಸರ್ಕಾರ ಬೆಳೆಗೆ ಮಾಡಿದ ಖರ್ಚಿನ ಜೊತೆಗೆ ಸೂಕ್ತ ಪರಿಹಾರ ನೀಡಬೇಕು
ಮಹದೇವಮ್ಮ ಹರೂರು ರೈತ ಮಹಿಳೆ
216 ಮನೆಗಳಿಗೆ ಹಾನಿ
ತಾಲ್ಲೂಕಿನ ವಿವಿಧೆಡೆ ಸುರಿದ ಮಳೆಯಿಂದ ಅಂದಾಜು 216 ಮನೆಗಳಿಗೆ ಹಾನಿಯಾಗಿದೆ. ವರದಾ ಹಾಗೂ ದಂಡಾವತಿ ನದಿ ಪಾತ್ರದ ಚಂದ್ರಗುತ್ತಿ ಮತ್ತು ಜಡೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನರ ಸ್ಥಿತಿ ಅಯೋಮಯವಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ‌ಒಳ ಹರಿವು ಹೆಚ್ಚಳವಾಗುತ್ತಿರುವುದರಿಂದ ನದಿ ಸಮೀಪದ ಗ್ರಾಮಗಳ ಮನೆಯ ಗೋಡೆಗಳು ತೇವಾಂಶಗೊಂಡು ವಾಸಿಸಲು ಯೋಗ್ಯವಾಗಿಲ್ಲ. ಇನ್ನೊಂದೆಡೆ ರೈತರ ಬೆಳೆಗಳಿಗೆ ಹೆಚ್ಚು ನಷ್ಟವಾಗಿದ್ದು ಕಂದಾಯ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.