ಸೊರಬ: ಜಿಲ್ಲಾ ಕೇಂದ್ರ ಶಿವಮೊಗ್ಗ ಸಂಪರ್ಕಿಸುವ ಸೊರಬ– ಶಿರಾಳಕೊಪ್ಪ ಮುಖ್ಯರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ತಾಲ್ಲೂಕಿನಲ್ಲಿ ಈ ಬಾರಿ ಸುರಿದ ಅಧಿಕ ಮಳೆಯಿಂದ ಬಹುತೇಕ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ಸೊರಬ, ಶಿರಾಳಕೊಪ್ಪ ಮೂಲಕ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಬಿದ್ದಿರುವ ಸಾಲು, ಸಾಲು ಗುಂಡಿಗಳು ವಾಹನ ಸವಾರರನ್ನು ಹೈರಾಣಾಗಿಸಿದೆ.
ಭಾರಿಒ ಮಳೆಯಿಂದಾಗಿ ಶಿರಾಳಕೊಪ್ಪ ಶಿವಮೊಗ್ಗ ಮುಖ್ಯರಸ್ತೆಯುದ್ದಕ್ಕೂ ಗುಂಡಿಗಳು ಉದ್ಭವವಾಗಿದ್ದು, ‘ಇದು ರಸ್ತೆಯೋ ಅಥವಾ ಕೆಸರು ಗದ್ದೆಯೋ?’ ಎಂಬ ಪ್ರಶ್ನೆ ಈ ಮಾರ್ಗವಾಗಿ ಹಾದು ಹೋಗುವ ಸವಾರರಿಗೆ ಮೂಡುತ್ತದೆ.
ಹಲವು ವರ್ಷಗಳ ಹಿಂದೆ ಡಾಂಬರ್ ಕಮಡಿರುವ ರಸ್ತೆಯಲ್ಲಿ ನಾಲ್ಕೈದು ಅಡಿಗಳ ಅಂತರದಲ್ಲಿ ಬಿದ್ದಿರುವ ಗುಂಡಿಗಳು, ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬ ಸ್ಥಿತಿ ನಿರ್ಮಿಸಿವೆ. ಕೆಲವು ತಿಂಗಳಿಂದ ಬಿಡುವು ನೀಡದ ವರ್ಷಧಾರೆಯಿಂದಾಗಿ ಗುಂಡಿಗಳಲ್ಲಿ ನೀರು ಇಂಗುತ್ತಿಲ್ಲ.
ವಾಹನಗಳ ರಭಸಕ್ಕೆ ಚಕ್ರದಲ್ಲಿ ಸಿಲುಕಿದ ಕೆಸರುಮಿಶ್ರಿತ ನೀರಿನಿಂದ ಮತ್ತಷ್ಟು ಜಲ್ಲಿ ಕಲ್ಲುಗಳು ಸಡಿಲಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಗುಂಡಿಗಳು ಅಳತೆ ಮೀರಿ ದೊಡ್ಡದಾಗುತ್ತಿವೆ. ಬೃಹತ್ ಗುಂಡಿಗಳು ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿಲ್ಲ. ಇದರಿಂದ ಸಾರ್ವಜನಿಕರು ಅವರಿಗೆ ಹಿಡಿಶಾಪ ಹಾಕುವಂತಾಗಿದೆ.
ಸೊರಬದಿಂದ ಶಿರಾಳಕೊಪ್ಪ ಪಟ್ಟಣ ಕೇವಲ 17 ಕಿ.ಮೀ. ದೂರದಲ್ಲಿದೆ. ಈ ದಾರಿಯನ್ನು ಕ್ರಮಿಸಲು ವಾಹನ ಸವಾರರಿಗೆ 15 ನಿಮಿಷ ಸಾಕು. ಆದರೆ ಗಜಗಾತ್ರದ ಗುಂಡಿಗಳು ಬಿದ್ದಿರುವುದರಿಂದ ಅವುಗಳನ್ನು ತಪ್ಪಿಸುವ ಸಲುವಾಗಿ ವಾಹನ ಸವಾರರು ಪ್ರಯಾಸ ಪಡುತ್ತಿರುವ ಪರಿಣಾಮ ಈ ದಾರಿ ಕ್ರಮಿಸಲು ಬರೋಬ್ಬರಿ 30ರಿಂದ 40 ನಿಮಿಷ ಬೇಕಾಗುತ್ತದೆ.
ಆಂಬುಲೆನ್ಸ್‌ಗಳಿಗೂ ಈ ಸಮಸ್ಯೆ ಎದುರಾಗುವುದರಿಂದ ನಿಗದಿತ ಸಮಯಕ್ಕೆ ರೋಗಿಗಳನ್ನು ಆಸ್ಪತ್ರೆ ತಲುಪಿಸಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಹಲವರ ಅಳಲು. ಪಟ್ಟಣದ ಕೆಇಬಿ ಕಾಲೊನಿಯಿಂದ ಪ್ರಾರಂಭಗೊಂಡ ಗುಂಡಿಗಳ ದರ್ಶನ ತಾಲ್ಲೂಕಿನ ಗಡಿ ಗ್ರಾಮ ಘತ್ರದಹಳ್ಳಿವರೆಗೂ ಅನಾವರಣಗೊಳ್ಳುತ್ತದೆ.
ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿಗೆ ಸಂಪರ್ಕವಿರುವ ರಸ್ತೆ ಆಗಿರುವುದರಿಂದ ಈ ಮಾರ್ಗದಲ್ಲಿ ಹೊನ್ನಾವರ, ಕುಮಟಾ ಹಾಗೂ ಬನವಾಸಿಯಿಂದ ಅಧಿಕ ಸಂಖ್ಯೆಯ ವಾಹನಗಳ ಓಡಾಟವಿದ್ದು, ದಟ್ಟಣೆ ಹೆಚ್ಚಾಗಿದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆ ಹಾನಿಯಿಂದ ಉಂಟಾಗಿರುವ ಹಾಗೂ ಹೊಸ ರಸ್ತೆ ಅಭಿವೃದ್ಧಿ ನಿರ್ಮಾಣಕ್ಕೆ ₹ 100 ಕೋಟಿ ಅನುದಾನ ಶೀಘ್ರ ಬಿಡುಗಡೆ ಆಗಲಿದೆ. ಶಿರಾಳಕೊಪ್ಪ ಶಿವಮೊಗ್ಗ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು.–ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರಗಳಿಗೆ ಜನರ ಹಿತ ಮುಖ್ಯವಾಗಬೇಕು. ತಾಲ್ಲೂಕಿನ ಪ್ರಮುಖ ರಸ್ತೆ ಅಭಿವೃದ್ಧಿಪಡಿಸಲು ಹಿಂದೇಟು ಹಾಕುವುದು ಜನರಿಗೆ ಮಾಡುವ ಅನ್ಯಾಯ.–ಹುಚ್ಚರಾಯಪ್ಪ ಸಿ ಹರೂರು ಗ್ರಾಮ ಸಮಿತಿ ಮಾಜಿ ಅಧ್ಯಕ್ಷ
ರಸ್ತೆಯಲ್ಲಿನ ಆಳವಾದ ಗುಂಡಿಗಳು ಜನರ ಜೀವವನ್ನೇ ಬಲಿ ತೆಗೆದುಕೊಳ್ಳುವ ಮುನ್ನ ರಸ್ತೆ ಅಭಿವೃದ್ಧಿಯತ್ತ ಗಮನ ಹರಿಸಬೇಕು.–ಈಶ್ವರಪ್ಪ ಕೊಡಕಣಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ವಿವಿಧ ಕಾಮಗಾರಿಗೆ ಅನುದಾನ ಬಿಡುಗಡೆ
ಸೊರಬದ ಕೆಇಬಿ ಕಾಲೊನಿಯಿಂದ ಗೇರುಕೊಪ್ಪ ಗ್ರಾಮದವರೆಗೂ 13 ಕಿ.ಮೀ. ರಸ್ತೆಗೆ ₹ 25 ಕೋಟಿ ಅನುದಾನ ಬಿಡುಗಡೆ ಆಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದ 4 ಕಿ.ಮೀ. ರಸ್ತೆಗೆ ₹ 4 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಳೆ ನಿಂತ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ತಾಲ್ಲೂಕಿನ ತವನಂದಿ ಗ್ರಾಮದಿಂದ ಜಡೆ ಬಿಳಗಲಿ ಹೊಸೂರು ಗ್ರಾಮದವರೆಗೂ ಮುಖ್ಯರಸ್ತೆ ವಿಸ್ತರಣೆಗೆ ಹಾಗೂ ಹಳೇಸೊರಬ ಹೊಸಪೇಟೆ ಬಡಾವಣೆ ಮಾರ್ಗವಾಗಿ ಹೊಸಬಾಳೆ ಹಾಗೂ ಮಾಗಡಿ ಮುಖ್ಯರಸ್ತೆಗೆ ₹ 100 ಕೋಟಿ ಅನುದಾನ ಮಂಜೂರಾಗಿದ್ದು ಹೊಸದಾಗಿ ಸೇತುವೆ ಹಾಗೂ ಕಾಲುಸಂಕ ನಿರ್ಮಾಣಕ್ಕೆ ₹ 29 ಕೋಟಿ ಅನುದಾನ ಬಿಡುಗಡೆ ಆಗಿದೆ. ಮಳೆ ನಿಂತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.