ADVERTISEMENT

ಸೊರಬ: ಹದಗೆಟ್ಟ ರಸ್ತೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ

ನಿತ್ಯ ಶಾಲೆ–ಕಾಲೇಜಿಗೆ ತೆರಳಲು ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳು

ರಾಘವೇಂದ್ರ ಟಿ.
Published 19 ಜೂನ್ 2024, 5:58 IST
Last Updated 19 ಜೂನ್ 2024, 5:58 IST
ಸೊರಬ ತಾಲ್ಲೂಕಿನ ಚೌಡಿಕೊಪ್ಪ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಕಲ್ಲು, ಮಣ್ಣು ಹಾಕಿ ದುರಸ್ತಿ‌ ಮಾಡುತ್ತಿರುವುದು
ಸೊರಬ ತಾಲ್ಲೂಕಿನ ಚೌಡಿಕೊಪ್ಪ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಕಲ್ಲು, ಮಣ್ಣು ಹಾಕಿ ದುರಸ್ತಿ‌ ಮಾಡುತ್ತಿರುವುದು   

ಸೊರಬ: ಗ್ರಾಮದ ರಸ್ತೆ ದುರಸ್ತಿ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಚೌಡಿಕೊಪ್ಪ ಗ್ರಾಮಸ್ಥರು ಸ್ವತಃ ಕಲ್ಲು, ಮಣ್ಣು ತುಂಬುವ ಮೂಲಕ ಸರಿಪಡಿಸಿಕೊಂಡಿದ್ದಾರೆ.

ಸೊರಬ ಹಾಗೂ ಚಂದ್ರಗುತ್ತಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಕಡೇಗದ್ದೆ ಹಾಗೂ ಚೌಡಿಕೊಪ್ಪ ಗ್ರಾಮಗಳು ಮುಖ್ಯರಸ್ತೆಯಿಂದ 6 ಕಿ.ಮೀ. ದೂರದಲ್ಲಿವೆ. ಕಳೆದ ವರ್ಷ ಮುಖ್ಯರಸ್ತೆಯಿಂದ ಕಡೇಗದ್ದೆ ಗ್ರಾಮದವರೆಗೆ 3 ಕಿ.ಮೀ. ಮಾತ್ರ ರಸ್ತೆಗೆ ಡಾಂಬರೀಕರಣ‌ ಮಾಡಲಾಗಿದೆ. ಉಳಿದ 3 ಕಿ.ಮೀ. ಚೌಡಿಕೊಪ್ಪ ಗ್ರಾಮದ ರಸ್ತೆ ಡಾಂಬರೀಕರಣಕ್ಕೆ ಮಂಜೂರಾದ ಅನುದಾನವನ್ನು ಗ್ರಾಮದಲ್ಲಿ ಹೆಚ್ಚಿನ ಮತದಾರರು ಇಲ್ಲ ಎಂಬ ಕಾರಣ ನೆರೆಯ ಗ್ರಾಮದ ರಸ್ತೆ ದುರಸ್ತಿಗೆ ಬಳಸಿಕೊಳ್ಳಲಾಗಿದೆ ಎ‌ಂದು ಗ್ರಾಮಸ್ಥರು ದೂರಿದರು.

ತಾಲ್ಲೂಕಿನ ಗುಂಜನೂರು ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು 50 ವರ್ಷಗಳ ಹಿಂದೆ ತಮ್ಮ ಜಮೀನಿನ ಸಮೀಪ ಬಂದು ನೆಲೆಸಿದರು. ಇದು ಮುಂದೆ ಚೌಡಿಕೊಪ್ಪ ಗ್ರಾಮವಾಗಿ ಗುರುತಿಸಿಕೊಂಡಿದ್ದು, ಇಂದಿಗೂ ವ್ಯವಸ್ಥಿತ ರಸ್ತೆಯಾಗಲೀ, ಚರಂಡಿಯಾಗಲೀ ನಿರ್ಮಾಣಗೊಂಡಿಲ್ಲ. ಆ ಕಾಲದಲ್ಲಿ ಸಂಚಾರಕ್ಕಾಗಿ ಗ್ರಾಮಸ್ಥರೇ ಸೇರಿ ನಿರ್ಮಿಸಿದ್ದ ಮಣ್ಣು ರಸ್ತೆ ಸಂಪೂರ್ಣ ಶಿಥಿಲಗೊಂಡಿದೆ. ರಸ್ತೆ ಇಕ್ಕೆಲಗಳಲ್ಲಿ ಆಳೆತ್ತರಕ್ಕೆ ಗಿಡ–ಗಂಟಿಗಳು ಬೆಳದಿದ್ದು, ಗ್ರಾಮವು ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಭಾಗದ ಕೃಷಿ ಮತ್ತು ಕೂಲಿ ಕಾರ್ಮಿಕರು ಸೇರಿ ನೂರಾರು ಕುಟುಂಬಗಳು ತಾಲ್ಲೂಕು ಕೇಂದ್ರಕ್ಕೆ ಬರಲು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ADVERTISEMENT

ಮಳೆ ಸುರಿದಾಗ ರಸ್ತೆ ಮಧ್ಯಭಾಗದಲ್ಲಿ ಗುಂಡಿ, ಗೊಟರುಗಳು ಬಿದ್ದು ಓಡಾಡಲು ಸಮಸ್ಯೆಯಾಗುತ್ತದೆ. ವಾಹನ ಚಲಾಯಿಸಲು ಕಷ್ಟಪಡುವಂತಾಗಿದೆ. ನಿತ್ಯ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ರಸ್ತೆಯಲ್ಲಿ ಆಳುದ್ದ ಬಿದ್ದಿರುವ ಗುಂಡಿ, ಕೆಸರು ದಾಟಿ ಮುಖ್ಯರಸ್ತೆಗೆ ಬರುವಷ್ಟರಲ್ಲಿ ಬಸ್‌ಗಳು ತಪ್ಪಿ ಶಾಲೆ– ಕಾಲೇಜುಗಳಿಗೆ ಹೋಗದೆ ಹಲವು ಬಾರಿ‌ ಮನೆಗೆ ವಾಪಸಾದ ಉದಾಹರಣೆಗಳಿವೆ.

ಮಳೆಗಾಲದಲ್ಲಿ ಗುಂಡಿ ದಾಟಲು ಸರ್ಕಸ್ ಮಾಡಬೇಕಿರುವುದರಿಂದ ಕೆಸರು ಮಿಶ್ರಿತ ಮಣ್ಣು ಬಟ್ಟೆಗಳಿಗೆ‌ ತಾಗಿ ಶಾಲೆ–ಕಾಲೇಜಿಗೆ ತೆರಳುವ ಮುನ್ನವೇ ಬಟ್ಟೆಗಳು ಸಂಪೂರ್ಣ ಕೊಳೆಯಾಗುತ್ತವೆ. ನಿತ್ಯವೂ ಮುಜುಗರ ಎದುರಿಸುವಂತಾಗಿದೆ ಎಂದು ಪಿಯು ವಿದ್ಯಾರ್ಥಿನಿ ಸಿಂಚನಾ ಬೇಸರ ವ್ಯಕ್ತಪಡಿಸಿದರು.

‘ಮಳೆಗಾಲದಲ್ಲಿ ನಮ್ಮ ಮಕ್ಕಳು ಶಾಲೆಗೆ ಹೋಗಲು ಕಷ್ಟಪಡುತ್ತಿರುವುದನ್ನು ನೋಡಲಾರದೆ ಸರ್ಕಾರ ಹಾಗೂ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಗ್ರಾಮಸ್ಥರೆಲ್ಲರೂ ಸೇರಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ‌ಗಳಿಗೆ ಕಲ್ಲು, ಮಣ್ಣು ಮುಚ್ಚಿದ್ದೇವೆ. ಪ್ರತಿಯೊಂದು ಗ್ರಾಮಕ್ಕೂ ಕನಿಷ್ಠ ಸೌಲಭ್ಯ ಒದಗಿಸಿಕೊಡುವುದು ಸರ್ಕಾರದ ಕೆಲಸ. ಕೂಡಲೇ ಸಂಬಂಧಪಟ್ಟವರು ರಸ್ತೆ ಡಾಂಬರೀಕರಣ‌ ಮಾಡಲು ಗಮನ ಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೊರಬ ತಾಲ್ಲೂಕಿನ ಚೌಡಿಕೊಪ್ಪ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಕಲ್ಲು ಮಣ್ಣು ಹಾಕಿ ದುರಸ್ತಿ‌ ಮಾಡುತ್ತಿರುವುದು

ಗ್ರಾಮದಲ್ಲಿನ ರಸ್ತೆಗೆ ಡಾಂಬರೀಕರಣ‌ ಮಾಡುವಂತೆ ಹತ್ತಾರು ಬಾರಿ ಸಂಬಂಧಪಟ್ಟವರೆಗೆ ಮನವಿ ಮಾಡಲಾಗಿದೆ. ಯಾರೂ ಗಮನ ಹರಿಸುತ್ತಿಲ್ಲ. ಹಬ್ಬ ಹರಿದಿನಗಳಲ್ಲಿ ಸಂಬಂಧಿಕರು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ.

-ಮಂಜುನಾಥ ಅಧ್ಯಕ್ಷ ಗ್ರಾಮ ಸಲಹಾ ಸಮಿತಿ ಚೌಡಿಕೊಪ್ಪ

ಕೆಸರುಮಯ ರಸ್ತೆಯಲ್ಲಿ ಓಡಾಡುವುದರಿಂದ ಮಕ್ಕಳ ಕಾಲುಗಳಿಗೆ ಗುಳ್ಳೆ ಏಳುತ್ತವೆ. ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಕಷ್ಟಪಡುತ್ತಾರೆ. ತುರ್ತಾಗಿ ಸುಸಜ್ಜಿತ ರಸ್ತೆ ನಿರ್ಮಿಸಲು‌ ಮುಂದಾಗಬೇಕು.

-ಗಿರಿಜಮ್ಮ ಚೌಡಿಕೊಪ್ಪ ಗ್ರಾಮಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.