ಶಿವಮೊಗ್ಗ:ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಸಹ್ಯಾದ್ರಿ ಕಾಲೇಜು ಆವರಣವೇ ಬೇಕು ಎಂಬ ಹಠದ ಹಿಂದೆ ಬಲವಾದ ಸಂಶಯಗಳು ಕಾಡುತ್ತಿವೆ ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.
ಆನ್‌ಲೈನ್ ಮೂಲಕ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿಪರ ಸಂಘಟನೆಗಳು, ರೈತ ಮುಖಂಡರು, ಹಳೆಯ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಮಹಾರಾಜರು ಶೈಕ್ಷಣಿಕ ಉದ್ದೇಶಕ್ಕಾಗಿ ದಾನ ಕೊಟ್ಟಿದ್ದಾರೆ. ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಸರಿಯಾದ ಮಾಹಿತಿ ಇಲ್ಲ. ಪಾರದರ್ಶಕತೆಯ ಕೊರತೆ ಇದೆ. ತಾಯಿ ರೂಪದಲ್ಲಿ ಬಡ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಕಾಲೇಜು ಪೊರೆಯುತ್ತಿದೆ. ಕೆಟ್ಟ, ದುಷ್ಟತನಗಳನ್ನು ಬಿಟ್ಟು ಬೇರೆ ಎಲ್ಲಾದರೂ ಸ್ಥಳ ಗುರುತಿಸಿ, ಕ್ರೀಡಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸಣ್ಣರಾಮಪ್ಪ, ಇದೊಂದು ಬೇಜವಾಬ್ದಾರಿ ನಿರ್ಧಾರ. ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ಅಗತ್ಯ. ಕಾಲೇಜಿನ ಜಾಗ ಬಿಟ್ಟುಕೊಡುವುದಿಲ್ಲ. ಬಡ ಮಕ್ಕಳು ಇಲ್ಲಿ ಮುಂದೆಯೂ ಓದುತ್ತಾರೆ. ಸರ್ಕಾರಿ ಕಾಲೇಜು ಖಾಸಗೀಕರಣಗೊಳಿಸುವ ದುರಾಲೋಚನೆ ಇದರ ಹಿಂದಿದೆ ಎಂದು ಆರೋಪಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಹಳ್ಳಿಯ ರೈತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಲಿಟ್ಟ ಮೇಲೆ ದುಬಾರಿ ಶುಲ್ಕ ಕೊಟ್ಟು ಬಡವರ ಮಕ್ಕಳು ಓದುವುದು ಕಷ್ಟವಾಗುತ್ತಿದೆ. ಧರ್ಮಶಾಲೆಯಂತಿರುವ ಸಹ್ಯಾದ್ರಿ ಕಾಲೇಜನ್ನು ಮುಗಿಸಿಬಿಡುವ ಹುನ್ನಾರ ಯಾರು ಮಾಡಬಾರದು. ಸರ್ಕಾರ ಒರಟುತನ ಬಿಡಬೇಕು ಎಂದು ಸಲಹೆ ನೀಡಿದರು.
ವಕೀಲ ಕೆ.ಪಿ.ಶ್ರೀಪಾಲ್, ಸರ್ಕಾರದ ಯೋಜನೆಗಳೇ ಅರ್ಥವಾಗುತ್ತಿಲ್ಲ. ಸಹ್ಯಾದ್ರಿ ಕಾಲೇಜಿನ ಸುಮಾರು 18.04 ಎಕರೆ ಜಾಗ ಜಿಲ್ಲಾಡಳಿತ ವಶಪಡಿಸಿಕೊಳ್ಳಲು ಕುವೆಂಪು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದೆ. ಸಾರ್ವಜನಿಕರ ಗಮನಕ್ಕೆ ಬಾರದಂತೆ ಇಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ. ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಕೇಂದ್ರ ಸ್ಥಾಪನೆಗೆ ಬಿಡುವುದಿಲ್ಲ. ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದ ಎಂದರು.
ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ, ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದೆ. ಯಾವ ಕಾರಣಕ್ಕೂ ಖಾಸಗಿಯವರಿಗೆ ಸರ್ಕಾರಿ ಭೂಮಿ ಕೊಡಲು ಒಪ್ಪುವುದಿಲ್ಲ. ಆಸೆಗಳನ್ನು ತೋರಿಸಿ ವಶಪಡಿಸಿಕೊಳ್ಳುವ ಹುನ್ನಾರ ಸರ್ಕಾರ ಮಾಡುತ್ತಿವೆ. ಈಗ ಕಾಲೇಜಿನಲ್ಲಿ ಎದುರು ಇರುವ ಬೆಂಕಿಪಟ್ಟಣ ಕಾರ್ಖಾನೆಯ ಜಾಗ ಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಈ ಪ್ರಕ್ರಿಯೆಗೆ ಕಾನೂನು ತೊಡಕಿದೆ. ಇಂತಹ ಹಸಿ ಸುಳ್ಳುಗಳನ್ನ ಹೇಳಿ ರಾಜಕಾರಣಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡರಾದ ಅಭಿಗೌಡ, ಅಭಿನಂದನ್, ಟಿ.ಎಸ್.ಸ್ವಾಮಿ, ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಅವಕಾಶ ನೀಡುವುದಿಲ್ಲ. ಸಹ್ಯಾದ್ರಿ ಕಾಲೇಜು ಬಡವಿದ್ಯಾರ್ಥಿಗಳ ಕಾಲೇಜು. ಇಲ್ಲಿ ರೈತ ಮಕ್ಕಳು, ಶ್ರಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ಆರುವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಆವರಣದಲ್ಲಿ ಹಲವು ಕಟ್ಟಡಗಳು ನಿರ್ಮಾಣವಾಗಬೇಕಿದೆ. ಗ್ರಂಥಾಲಯ, ಸ್ನಾತಕೋತ್ತರ ಕಟ್ಟಡಗಳು, ಬಾಲಕಿಯರ ಹಾಸ್ಟೆಲ್ ಸೇರಿದಂತೆ ವಿವಿಧ ಕಟ್ಟಡಗಳ ಅಗತ್ಯವಿದೆ. ಕ್ರೀಡಾ ಕೇಂದ್ರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಹಲವು ಮುಖಂಡರು ಯೋಜನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಲಾಕ್‌ಡೌನ್ ಸಮಯದ ಲಾಭ ಪಡೆದು ಯೋಜನೆ ಜಾರಿಗೊಳಿಸಿದರೆ ನಿಯಮ ಮುರಿದು ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದುಲೋಹಿತ್, ಕೆ.ರಂಗನಾಥ್ ಮತ್ತಿತರರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.