ಸಾಗರ: ರಾಜಕಾರಣದ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಕಲೆ, ವೈಚಾರಿಕತೆ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಪರೂಪದ ರಾಜಕಾರಣಿ ಕೆ.ಎಚ್.ಶ್ರೀನಿವಾಸ್, ಜೀವನದ ಪಯಣ ಮುಗಿಸಿದ್ದಾರೆ.
ತಾಲ್ಲೂಕಿನ ಪುಟ್ಟ ಗ್ರಾಮವಾಗಿರುವ ಕಾನುಗೋಡುವಿನಲ್ಲಿ ಜನಿಸಿದ ಶ್ರೀನಿವಾಸ್, ಮೈಸೂರಿನ ಮಹಾರಾಜ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಜೊತೆಗೆ ಕಾನೂನು ಪದವಿ ಕೂಡ ಪಡೆದಿದ್ದರು.
ಕೆಲ ಕಾಲ ವಕೀಲ ವೃತ್ತಿ ನಡೆಸಿದ ಅವರು 1967ರಲ್ಲಿ ಸಾಗರ, 1978-83, 85-89 ರವರೆಗೆ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು. 1996 ರಿಂದ 2002ರವರೆಗೆ ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ದೇವರಾಜ ಅರಸು ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಅರಸು ಅವರು ಜಾರಿಗೆ ತಂದ ಹಲವು ಪ್ರಗತಿಪರ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಕೆಲಕಾಲ ಅವರೊಂದಿಗಿದ್ದರು.
60ರ ದಶಕದಲ್ಲಿ ಈ ಭಾಗದ ಪ್ರಮುಖರು ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜನ್ನು ನಡೆಸಲು ಸಾಧ್ಯವಾಗದೆ ಮಣಿಪಾಲದ ಪೈ ಸಮೂಹ ಶಿಕ್ಷಣ ಸಂಸ್ಥೆಗೆ ಅದರ ನಿರ್ವಹಣೆ ಜವಾಬ್ದಾರಿ ವಹಿಸಲು ಮುಂದಾಗಿದ್ದರು. ಆಗ ಶ್ರೀನಿವಾಸ್ ಮಧ್ಯ ಪ್ರವೇಶಿಸಿ ಶಿಕ್ಷಣ ಸಂಸ್ಥೆಯ ಆಡಳಿತವನ್ನು ತಾವೆ ವಹಿಸಿಕೊಂಡು ಮುನ್ನಡೆಸಿದ್ದನ್ನು ಈ ಭಾಗದ ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.
ಕಾಲೇಜು ದಿನಗಳಿಂದಲೇ ಅತ್ಯುತ್ತಮ ಚರ್ಚಾಪಟುವಾಗಿದ್ದ ಅವರು ರಾಜಕಾರಣ ಪ್ರವೇಶಿಸಿದ ನಂತರ ಪ್ರಖರ ವಾಗ್ಮಿ ಎಂದೆ ಹೆಸರು ಪಡೆದಿದ್ದರು. ಅಪಾರವಾದ ಓದು, ಕನ್ನಡ, ಇಂಗ್ಲಿಷ್ ಭಾಷೆ, ಸಾಹಿತ್ಯದ ಅಧ್ಯಯನ ನಡೆಸಿದ್ದ ಅವರು ವಿಷಯದ ಮೇಲೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರತಿಭೆ ಗಳಿಸಿದ್ದರು.
ಇವರ ‘ಕಾನುಗೋಡು ಮನೆ’, ‘ಹೊರ ಸೊನ್ನೆ, ಒಳ ಸೊನ್ನೆ’, ‘ಚಂದ್ರ ನೀನೊಬ್ಬನೆ’, ‘ ಗುಬ್ಬಚ್ಚಿ ಗೂಡು’ ಎಂಬ ಕವನ ಸಂಕಲನಗಳು ಪ್ರಕಟಗೊಂಡಿವೆ. ಫ್ರೆಂಚ್ ಸಾಹಿತಿ ಜೀನ್ ಪಾಲ್ ಸಾರ್ತ್‌ನ ‘ಕೀನ್’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ.
ಉರ್ದು ಸಾಹಿತಿ ಸಾಧಕ್ ಹಸನ್ ಮಾಂಟೊನ ಜೀವನ ಹಾಗೂ ಸಾಹಿತ್ಯದ ಬಗೆಗಿನ ಅವರ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಮಾಹಿತಿ ಹಕ್ಕಿನ ಮೇಲಿನ ಅನುವಾದ ಕೃತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ಹೊರತಂದಿದೆ.
ಜೀನ್ ಪಾಲ್ ಸಾರ್ತ್‌ನ ಕೃತಿಯನ್ನು ಅವರು ಅನುವಾದ ಮಾಡಿದ ವೇಳೆ ಬರೆದ ಮುನ್ನುಡಿ ಅಸಂಗತ ಸಾಹಿತ್ಯದ ಮೇಲೆ ಕನ್ನಡ ವಿಮರ್ಶೆಯಲ್ಲಿ ಬಂದ ಅತ್ಯುತ್ತಮ ಲೇಖನಗಳಲ್ಲಿ ಒಂದು ಎಂದೇ ಗುರುತಿಸಲ್ಪಟ್ಟಿದೆ. ಹೆಗ್ಗೋಡಿನ ನೀನಾಸಂ ಜೊತೆಗೆ ಉತ್ತಮ ನಂಟು ಹೊಂದಿದ್ದ ಅವರು ಯಕ್ಷಗಾನ ತಾಳಮದ್ದಲೆಯಲ್ಲೂ ಅರ್ಥಧಾರಿಯಾಗಿ ಪಾಲ್ಗೊಳ್ಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.