ADVERTISEMENT

ಮಾತು ಬಾರದವರ ಸಂವಹನಕ್ಕೆ ‘ರೈಟೆಲ್’ ನೆರವು: ಬರೆದರೆ ಧ್ವನಿ ಹೊರಹೊಮ್ಮಿಸುವ ಆ್ಯಪ್

ಮಾತು ಬಾರದವರ ಸಂವಹನಕ್ಕೆ ‘ರೈಟೆಲ್’ ನೆರವು

ವೆಂಕಟೇಶ ಜಿ.ಎಚ್.
Published 5 ಅಕ್ಟೋಬರ್ 2023, 0:27 IST
Last Updated 5 ಅಕ್ಟೋಬರ್ 2023, 0:27 IST
ಅಕ್ಷಯ್ ವಿ.ನಾಯಕ್ ಹಾಗೂ ಬಿ.ಎಸ್‌.ಕಾರ್ತಿಕ್
ಅಕ್ಷಯ್ ವಿ.ನಾಯಕ್ ಹಾಗೂ ಬಿ.ಎಸ್‌.ಕಾರ್ತಿಕ್   

ಶಿವಮೊಗ್ಗ: ಮಾತು ಬಾರದವರ ಸಂವಹನಕ್ಕೆ ನೆರವಾಗಲು ನಗರದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾದ ಅಕ್ಷಯ್‌ ವಿ.ನಾಯಕ್ ಹಾಗೂ ಬಿ.ಎಸ್.ಕಾರ್ತಿಕ್ ಜಂಟಿಯಾಗಿ ‘ರೈಟೆಲ್’ (writell– ಬರೆದು ಹೇಳು) ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

ಈ ಆ್ಯಪ್‌ನಲ್ಲಿ ಏನಾದರೂ ಬರೆದರೆ ಅದು ಧ್ವನಿ ರೂಪದಲ್ಲಿ ಹೊರಹೊಮ್ಮುತ್ತದೆ. ಹೀಗಾಗಿ ಮಾತು ಬಾರದವರು ತಮ್ಮ ಅನಿಸಿಕೆ ಹಾಗೂ ಅಗತ್ಯವನ್ನು ಬರವಣಿಗೆಯಲ್ಲಿ ಮೂಡಿಸಿದರೆ ಅದು ಎದುರಿಗಿರುವವರಿಗೆ ಧ್ವನಿ ರೂಪದಲ್ಲಿ ಅಭಿವ್ಯಕ್ತಿಸುತ್ತದೆ. ಇದು ಸುಲಭ ಸಂವಹನಕ್ಕೆ ದಾರಿಯಾಗಲಿದೆ.

ಗೂಗಲ್‌ ಸ್ಟೋರ್‌ನಲ್ಲಿ ಲಭ್ಯ:

ADVERTISEMENT

‘ಮಾತು ಬಾರದವರು ಬೇರೆಯವರ ಜತೆ ಸಂವಹನ ನಡೆಸಲು ಸ್ಲೇಟ್‌ ಇಲ್ಲವೇ ಕಾಗದದಲ್ಲಿ ಬರೆಯುತ್ತಾರೆ. ಅದರ ಬದಲು ನೇರವಾಗಿ ಈ ಆ್ಯಪ್‌ನಲ್ಲಿಯೇ ಬರೆಯಬಹುದು. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲೆಯಾಳಿ, ಬೆಂಗಾಲಿ, ಗುಜರಾತಿ, ಉರ್ದು, ಮರಾಠಿ ಒಳಗೊಂಡಂತೆ 10 ಭಾಷೆಗಳಲ್ಲಿನ ಈ ಆ್ಯಪ್ ಗೂಗಲ್‌ ಸ್ಟೋರ್‌ನಲ್ಲೂ ಲಭ್ಯವಿದೆ’ ಎಂದು ಅಕ್ಷಯ್‌ ವಿ.ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಳಕೆದಾರರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಆ್ಯಪ್ ಬಿಡುಗಡೆಯಾಗಿ ಒಂದು ವಾರ ಆಗಿದೆ. ಈಗಾಗಲೇ 700ಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎನೇಬಲ್ ಇಂಡಿಯಾ ಸಂಸ್ಥೆ ಹಾಗೂ ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಯಲ್ಲೂ ಪ್ರಾತ್ಯಕ್ಷಿಕೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

‘ಶಿವಮೊಗ್ಗದ ಎಲೆಕ್ಟ್ರಾನಿಕ್ ಶಾಪ್ ಮಾಲೀಕರೊಬ್ಬರ ಭೇಟಿಗೆ ತೆರಳಿದ್ದಾಗ ಅಲ್ಲಿ ಬೀರೂರಿನಿಂದ ಮಾಜಿ ಸೈನಿಕರೊಬ್ಬರು ಬಂದಿದ್ದರು. ಧ್ವನಿಪೆಟ್ಟಿಗೆಗೆ ಸೋಂಕು ತಗುಲಿ ಮಾತು ಬಾರದೇ ಕಷ್ಟಪಡುತ್ತಿದ್ದ ಅವರು ಎಲ್ಲವನ್ನೂ ಸ್ಲೇಟ್‌ನಲ್ಲಿ ಬರೆದು ತೋರಿಸುತ್ತಿದ್ದರು. ಆಗ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಅನ್ನಿಸಿತು. ಬರೆದು ತೋರಿಸುವ ಬದಲು ಬರೆಯುತ್ತಿದ್ದಂತೆಯೇ ಅದನ್ನು ಧ್ವನಿಯಾಗಿಸುವ ಆ್ಯಪ್ ಅಭಿವೃದ್ಧಿಗೆ ಇದು ಪ್ರೇರಣೆಯಾಯಿತು’ ಎಂದು ಅವರು ವಿವರಿಸಿದರು.

ಆ್ಯಪ್‌ಗೆ ಕೀಬೋರ್ಡ್ ಸೇರಿಸುವ ಜೊತೆಗೆ ಸಾಮಾನ್ಯವಾಗಿ ಬಳಸುವ ‘ಹೇಗಿದ್ದೀಯ ಊಟ ಆಯ್ತಾ’ ಎಂಬ ರೀತಿಯ  ವಾಕ್ಯಗಳನ್ನು ಸಿದ್ಧಪಡಿಸಿ ಇಟ್ಟು ಕ್ಲಿಕ್ ಮಾಡಿದ ತಕ್ಷಣ ಅದೇ ಪಟಪಟನೆ ಬರುವ ರೀತಿ (ಫ್ರೀ ಟೈಪ್) ಫೀಚರ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ (ಎನ್‌ಐಇ) ಪದವಿ ಪಡೆದಿರುವ ಈ ಇಬ್ಬರೂ ಯುವಕರು ಕೆಲಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ನಂತರ ಕೆಲಸ ಬಿಟ್ಟು ಶಿವಮೊಗ್ಗದಲ್ಲಿ ತಮ್ಮದೇ ಅನ್‌ರಿಡಲ್ ಟೆಕ್ನಾಲಜೀಸ್ (Unriddle technologies) ಹೆಸರಿನ ಕಂಪನಿ ಆರಂಭಿಸಿ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. 

‘ಈಗ ಆ್ಯಪ್ ಉಚಿತವಾಗಿ ಬಳಕೆಗೆ ಲಭ್ಯವಿದೆ. ಮುಂದೆ ಬೇಡಿಕೆ ಅಧರಿಸಿ ಶುಲ್ಕ ವಿಧಿಸುವ ಬಗ್ಗೆ ನಿರ್ಧರಿಸಲಿದ್ದೇವೆ. ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಮಾತು ಬಾರದ ಜನ ಇದ್ದಾರೆ. ಕಿವಿ ಕೇಳದವರು, ಹುಟ್ಟಿನಿಂದಲೇ ಮಾತು ಬಾರದವರು ತುಟಿಗಳ ಚಲನೆ ಆಧರಿಸಿ ಅಕ್ಷರ ಕಲಿತಿರುತ್ತಾರೆ. ಅವರು ಈ ತಾಂತ್ರಿಕತೆ ಬಳಸಿಕೊಳ್ಳಬಹುದಾಗಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ರೈಟೆಲ್ ಆ್ಯಪ್
ರೈಟೆಲ್ ಸದ್ಯ ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಲಭ್ಯವಿದೆ. ಇನ್ನಷ್ಟು ಫೀಚರ್‌ಗಳ ಅಭಿವೃದ್ಧಿಗೆ ಸಿದ್ಧತೆ ನಡೆಸಿದ್ದೇವೆ
ಅಕ್ಷಯ್ ವಿ.ನಾಯಕ್ ಮುಖ್ಯಸ್ಥ ಅನ್‌ರಿಡಲ್ ಟೆಕ್ನಾಲಜೀಸ್ ಸಂಸ್ಥೆ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.