ಭದ್ರಾವತಿ: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಪ್ರತಿ ಬಡಾವಣೆಯಲ್ಲಿಯೂ ಗುಂಪುಗುಂಪಾಗಿ ಬರುವ ನಾಯಿಗಳು ಬೈಕ್, ಬೈಸಿಕಲ್‌ಗಳು ಸೇರಿದಂತೆ ಇತರ ವಾಹನ ಸವಾರರಿಗೆ, ಪಾದಚಾರಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿವೆ. ಸಾರ್ವಜನಿಕರು ರಾತ್ರಿ ಒತ್ತಟ್ಟಿಗಿರಲಿ, ಹಗಲು ಹೊತ್ತಲ್ಲೇ ನಿರ್ಭಯದಿಂದ ಓಡಾಡಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಗಾಂಧಿನಗರ, ಹೊಸಮನೆ, ಬಸವನ ಗುಡಿ, ಭೂತನ ಗುಡಿ, ಬಸವೇಶ್ವರ ವೃತ್ತ, ನ್ಯೂ ಕಾಲೊನಿ, ಜನ್ನಾಪುರ, ಕುಂಬಾರ ಬೀದಿ, ಚಾಮೇಗೌಡ ಏರಿಯಾ, ಮೀನುಗಾರರ ಬೀದಿ, ಸುರಗಿ ತೋಪು, ವಿದ್ಯಾಮಂದಿರ, ಕೂಲಿ ಬ್ಲಾಕ್ ಶೆಡ್, ಜಿಂಕ್ ಲೈನ್ ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಬೀದಿ ನಾಯಿಗಳು ಗುಂಪುಗುಂಪಾಗಿ ಕಂಡುಬರುತ್ತಿವೆ.
ಯಾವುದೇ ವಾಹನ ಬಂದರೂ ಅಟ್ಟಿಸಿಕೊಂಡು ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ದಾರಿ ಹೋಕರ ಮೇಲೂ ಗುಂಪುಗುಂಪಾಗಿ ಬಂದು ದಾಳಿ ಮಾಡಿ ಸಮಸ್ಯೆ ಉಂಟು ಮಾಡುತ್ತಿವೆ. ಇದರಿಂದ ವೃದ್ಧರು, ಮಕ್ಕಳು ಮನೆಯಿಂದ ಹೊರಹೋಗಲು ಭಯ ಪಡುವಂತಾಗಿದೆ ಎಂದು ಸಿದ್ಧಾರೂಢ ನಗರ ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಂಡರು.
ವಿ.ಐ.ಎಸ್.ಎಲ್ ಕ್ವಾರ್ಟರ್ಸ್ ಬೀದಿಗಳಲ್ಲಿ ನಾಯಿಗಳ ಕಾಟ ಹೆಚ್ಚಿದೆ. ಅಲ್ಲಿ ಮನೆಯವರು ಮಕ್ಕಳನ್ನು ಪಕ್ಕದಲ್ಲಿರುವ ಅಂಗಡಿಗೆ ಕಳುಹಿಸಬೇಕಾದರೂ ಹತ್ತಾರು ಬಾರಿ ಯೋಚಿಸಬೇಕಾಗಿದೆ. ಈ ಬಡಾವಣೆಗಳಲ್ಲಿ ವಾಸಿಸುವ ಜನರು ಸಾಕು ನಾಯಿಗಳನ್ನೂ ಬೀದಿಯಲ್ಲೇ ಬಿಡುತ್ತಾರೆ. ಹೀಗಾಗಿ ಜನರು ರಸ್ತೆಯಲ್ಲಿ ಓಡಾಡಲಾಗದ ಸ್ಥಿತಿ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಬರಲು ಕೈಯಲ್ಲಿ ಕೋಲು ಹಿಡಿದು ಓಡಾಡಬೇಕಿದೆ.
ಸೈಕಲ್ ಮತ್ತು ಬೈಕ್ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ವೇಳೆ ಬಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಕವಿತಾ ತಿಳಿಸಿದರು.
‘ರಾತ್ರಿಯಿಡೀ ಮನೆಗಳ ಮುಂದೆ ನಾಯಿಗಳು ಬೊಗಳುತ್ತಿರುತ್ತವೆ. ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಿಲ್ಲ. ಮನೆಯ ಮುಂದೆ ಬಿಟ್ಟ ಚಪ್ಪಲಿ, ಬಟ್ಟೆಗಳನ್ನು ಎಳೆದೊಯ್ದು ಹರಿದು ಹಾಕುತ್ತವೆ’ ಎಂದು ಚಟ್‌ಪಟ್ ನಗರದ ಬಾಬು ತಿಳಿಸಿದರು.
ನಗರದಲ್ಲಿ ಅಂದಾಜು 7000ದಿಂದ 8000 ಬೀದಿ ನಾಯಿಗಳಿವೆ. ಜಿ.ಪಿ.ಆರ್.ಎಸ್ ಲೊಕೇಶನ್ ಮೂಲಕ ಜಾಡು ಹಿಡಿದು ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಒಂದು ವಾರದೊಳಗೆ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಎಂಟು ತಿಂಗಳಲ್ಲಿ ಬೀದಿ ನಾಯಿ ಕಚ್ಚಿರುವ ಎಂಟು ಪ್ರಕರಣಗಳು ನಡೆದಿವೆ. ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದ್ದು ಸರ್ಕಾರದ ಆದೇಶದಂತೆ ಪ್ರತಿಯೊಬ್ಬರಿಗೂ ₹ 5000 ಪರಿಹಾರ ನೀಡಲಾಗಿದೆ ಎಂದು ನಗರಸಭೆಯ ಪರಿಸರ ವಿಭಾಗದ ಅಧಿಕಾರಿ ಪ್ರಭಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ಈಚೆಗೆ 1095 ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ದಿನಕ್ಕೆ 25 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಎರಡು ದಿನಗಳ ಕಾಲ ಅವುಗಳ ಶುಶ್ರೂಷೆ ಮಾಡಿ ಪುನಃ ಅವುಗಳು ವಾಸಿಸುವ ಸ್ಥಳಕ್ಕೆ ಬಿಡಲಾಗಿದೆ ಎಂದರು.
ಸಾರ್ವಜನಿಕರು ಆಹಾರ ತ್ಯಾಜ್ಯವನ್ನುಬಿಸಾಡುವುದರಿಂದ ಬೀದಿ ನಾಯಿಗಳು ಮನೆಯ ಬಾಗಿಲಿಗೆ ಬರುತ್ತವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಬದ್ಧವಾಗಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬೇಕಾದ ಕ್ರಮ ಕೈಗೊಂಡಿದೆ..–ಪ್ರಕಾಶ್ ಎಂ.ಚನ್ನಪ್ಪನವರ್, ನಗರಸಭೆ ಆಯುಕ್ತ
ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಿದರೆ ಮಾತ್ರ ಅವುಗಳ ಸಂಖ್ಯೆ ಹಾಗೂ ರೇಬಿಸ್ ರೋಗ ತಡೆಗಟ್ಟಲು ಸಾಧ್ಯ–ಇಮ್ಯಾನುವೆಲ್, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.