ಭದ್ರಾವತಿ: ಈ ಮೊದಲು ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಪನೋಂದಣಾಧಿಕಾರಿ ಕಚೇರಿಗೆ ಅದೇ ಸ್ಥಳದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಇಲ್ಲಿಯ ನಾಗರಿಕರ ಬೇಡಿಕೆಯಾಗಿದೆ.
ಸದ್ಯ ಚನ್ನಗಿರಿ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಎರಡು ವರ್ಷಗಳಿಂದ ಉಪನೋಂದಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ತಾಲ್ಲೂಕು ಪತ್ರ ಬರಹಗಾರರ ಸಂಘವು ಈಚೆಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ ಅವರಿಗೆ ಮನವಿ ಸಲ್ಲಿಸಿ ಹಿಂದಿದ್ದ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಿಸಿದರೆ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಬೇಡಿಕೆ ಇಟ್ಟಿದೆ.
‘ತಾಲ್ಲೂಕು ಕಚೇರಿ ಹಿಂಭಾಗ ಇದ್ದ ಹಳೆಯ ಕಟ್ಟಡದ ಜಾಗದಲ್ಲೇ ಉಪನೋಂದಣಾಧಿಕಾರಿ ಕಚೇರಿ ನಿರ್ಮಾಣವಾದರೆ ಸುತ್ತಲೂ ಸರ್ಕಾರಿ ಕಚೇರಿಗಳು ಹಾಗೂ ನ್ಯಾಯಾಲಯ ಸಂಕೀರ್ಣ ಇರುವುದರಿಂದ ಜನರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಹೊಸಮನೆ ಭೈರಪ್ಪ.
‘ಸರ್ಕಾರಿ ಕಚೇರಿಗಳ ಆವರಣದಲ್ಲೇ ಸಬ್ ರಿಜಿಸ್ಟ್ರಾರ್ ಕಚೇರಿ ಇದ್ದರೆ ಎಲ್ಲ ಕೆಲಸಗಳಿಗೂ ಅನುಕೂಲವಾಗುತ್ತದೆ. ಬೇರೆಡೆ ನಿರ್ಮಾಣವಾದರೆ ನಾಗರಿಕರು ಅಲೆದಾಡಬೇಕಾಗುತ್ತದೆ’ ಎನ್ನುತ್ತಾರೆ ಪತ್ರಬರಹಗಾರರ ಸಂಘದ
ಮುಖಂಡರು.
‘ತಾಲ್ಲೂಕಿಗೆ ಕಂದಾಯ ಇಲಾಖೆಯ ಉಪ ವಿಭಾಗೀಯ ಕಚೇರಿಯನ್ನು ತರಬೇಕೆಂಬ ಬೇಡಿಕೆ ಇದೆ. ತಾಲ್ಲೂಕು ಕಚೇರಿ ವಿಸ್ತರಣೆಗೆ
₹ 10 ಕೋಟಿ ವೆಚ್ಚದ ಅಂದಾಜಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿದೆ. ಈ ಕೆಲಸಕ್ಕೆ ಹಾಲಿ ತಾಲ್ಲೂಕು ಕಚೇರಿ ಹಿಂಭಾಗದ ಜಾಗ ನಿಗದಿ ಮಾಡಿರುವುದರಿಂದ ಉಪನೋಂದಣಾಧಿಕಾರಿ ಕಚೇರಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಆಗಬೇಕಿದೆ. ಬೇರೆಡೆ ಜಾಗ ಗುರುತಿಸುವಂತೆ ನಗರಸಭೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಹಶೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.
‘ಸರ್ಕಾರದ ನಿರ್ದೇಶನ ಪ್ರಕಾರ ನೋಂದಣಿ ಕಚೇರಿ ಊರಿನಿಂದ ಸ್ವಲ್ಪ ಹೊರಗಿದ್ದರೆ ಆ ಕಟ್ಟಡ ಹಾಗೂ ಖಾಲಿ ಇರುವ ಜಾಗದಲ್ಲಿ ಎಲ್ಲ ಮೂಲಸೌಕರ್ಯ ಕಲ್ಪಿಸಬಹುದು ಎಂಬ ಚಿಂತನೆ ಇದೆ. ಹೀಗಾಗಿ ಸಿಎ ನಿವೇಶನ ಇದ್ದರೆ ಗುರುತು ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ’
ಎಂದರು.
‘ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪತ್ರ ಬರಹಗಾರರು ಹಿಂದಿದ್ದ ಸ್ಥಳದಲ್ಲೇ ಉಪನೋಂದಣಾಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಎಲ್ಲರಿಗೂ ಒಳಿತಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದರು.
........
ಉಪನೋಂದಣಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ಎಲ್ಲಿ ಆಗಬೇಕು ಎಂಬ ಬಗ್ಗೆ ಸ್ಥಳೀಯ ಜನರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
– ಬಿ.ವೈ. ರಾಘವೇಂದ್ರ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.