ಶಿರಾಳಕೊಪ್ಪ: ಹಲ್ಮಿಡಿ ಶಾಸನಕ್ಕಿಂತ ಪೂರ್ವದಲ್ಲಿ ಕನ್ನಡದ ಹಿರಿತನವನ್ನು ಕೊಂಡ್ಯೊಯಲು ದಾಖಲೆಯಾಗಿ ಲಭಿಸಿದ್ದು ತಾಳಗುಂದದ ಸಿಂಹಕಟಾಂಜನ ಶಾಸನ.
ಹಲ್ಮಿಡಿ ಶಾಸನದ ಅವಧಿಯು ಕ್ರಿ.ಶ.450 ಆಗಿದ್ದು, ಇದನ್ನು 1936ರಲ್ಲಿ ಅಂದಿನ ಮೈಸೂರು ರಾಜ್ಯದ ಪುರಾತತ್ವ ಇಲಾಖೆ ನಿರ್ದೇಶಕ ಡಾ. ಎಂ.ಎಚ್. ಕೃಷ್ಣ ಪತ್ತೆ ಹಚ್ಚಿದ್ದಾರೆ. ತಾಳಗುಂದದ ಸಿಂಹಕಟಾಂಜನ ಶಾಸನವನ್ನು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಸೂಪರಿಂಟೆಂಡೆಂಟ್ ಟಿ.ಎಂ.ಕೇಶವ ಪತ್ತೆ ಹಚ್ಚಿದ್ದಾರೆ. ಈ ಶಾಸನದ ಅವಧಿಯನ್ನು ಕ್ರಿ.ಶ.370 ರಿಂದ 400 ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕೃತವಾಗಿ ಘೋಷಿಸಿದೆ.
ತಲಕಾಡು, ಬನವಾಸಿ, ಗುಡ್ನಾಪುರ, ಹಂಪಿ ಮತ್ತು ಸನ್ನತಿ ಸೇರಿದಂತೆ ಹಲವಾರು ಪ್ರಾಚೀನ ನೆಲೆಗಳಲ್ಲಿ ಉತ್ಖನನ ಮಾಡಿರುವ ಅನುಭವ ಹೊಂದಿದ್ದ ಟಿ.ಎಂ.ಕೇಶವ, ಕನಗನಹಳ್ಳಿಯಲ್ಲಿ ಕ್ರಿಸ್ತ ಪೂರ್ವದ ಶಾಸನಗಳನ್ನು ಶೋಧಿಸಿ, ಪ್ರಾಚೀನ ಲಿಪಿ ವಿನ್ಯಾಸಗಳ 200ಕ್ಕೂ ಹೆಚ್ಚು ಶಾಸನಗಳನ್ನು ಹೊಂದಿಸಿದ್ದಾರೆ. ಇವರು ತಾಳಗುಂದದ ಸಿಂಹಕಟಾಂಜನ ಶಾಸನದ ಅಧ್ಯಯನವನ್ನು ನಿರಂತರ ಎರಡು ವರ್ಷ ಮಾಡಿದ್ದಾರೆ. ಅವರ ಅಭಿಪ್ರಾಯ ಪಡೆದು ಭಾರತೀಯ ಪುರಾತತ್ವ ಇಲಾಖೆ 2016ರಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈಗಲೂ ಇಲಾಖೆ ಜಾಲತಾಣದ ಇ– ಪಬ್ಲಿಕೇಷ್‌ನಲ್ಲಿ ‘ಇಂಡಿಯನ್ ಆರ್ಕಿಯಾಲಜಿ 2013-14 ರಿವೀವ್’ ಎಂದೂ 425 ಪುಟಗಳಲ್ಲಿ ದೇಶದ ಎಲ್ಲಾ ಉತ್ಖನನಗಳ ಮಾಹಿತಿಯುಳ್ಳ ಪುಸ್ತಕ ಪ್ರಕಟಿಸಿದೆ. ಈ ಪುಸ್ತಕದ ಮುಖಪುಟದಲ್ಲಿ ತಾಳಗುಂದ ಶಾಸನ ಚಿತ್ರವನ್ನು ಬಳಸಿರುವುದು ಈ ಶಾಸನದ ಮಹತ್ವ ಸಾರುತ್ತದೆ.
ಈ ಪುಸ್ತಕದ 188ನೇ ಪುಟದಲ್ಲಿ ಇದು ಕನ್ನಡ ಭಾಷೆಯಾಗಿದ್ದು, ಕನ್ನಡ ಲಿಪಿ ಬಳಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ತಾಳಗುಂದದ ಬಗ್ಗೆ ಬೆಳಕು ಚೆಲ್ಲುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಒತ್ತಾಯಿಸಿ ‘ಪ್ರಜಾವಾಣಿ‘ ಸತತ ವರದಿ ಮಾಡಿದ ಪರಿಣಾಮ, 2012-13ರಲ್ಲಿ ಪರೀಕ್ಷಾ ಕುಳಿ ತೋಡಲಾಗಿತ್ತು. ಇದರಲ್ಲಿ 13 ಚಿನ್ನದ ನಾಣ್ಯಗಳು ಲಭಿಸಿದ್ದವು. ನಂತರ ಇದರಿಂದ ಉತ್ತೇಜನಗೊಂಡ ಇಲಾಖೆ 2013-14ರಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತು. ಈ ಉತ್ಖನನದಲ್ಲಿ ಅಮೂಲ್ಯವಾದ ಎರಡು ಶಾಸನಗಳು ಲಭ್ಯವಾಗಿವೆ. ಒಂದು ಸಿಂಹಕಟಾಂಜನ (ಶಾಸನ)ದ ಉತ್ತರ ಭಾಗದಲ್ಲಿ ಲಭ್ಯವಾಯಿತು. ಇದೇ ಶಾಸನ ಹಲ್ಮಿಡಿಗಿಂತ ಹಳೆಯ ಶಾಸನವಾಗಿದ್ದು, ಅದರಲ್ಲಿ ವಜಿನಾಗ(ಯ್ಯ) ಎಂಬುವವನಿಗೆ ಭೂಮಿ ಉಡುಗೊರೆಯಾಗಿ ನೀಡಲಾಗಿದೆ ಎಂದೂ ಪ್ರಕಟಿಸಲಾಗಿದೆ.
ಈ ಶಾಸನದಲ್ಲಿ ತುಂಡರಿಸಿದ 7 ಸಾಲುಗಳಿದ್ದು, ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ. ಸಂಸ್ಕೃತ ಪದಗಳಿಗಿಂತ ಹೆಚ್ಚಿನ ಸಂಖ್ಯೆಯ ಪದಗಳು ಕನ್ನಡ ಪದಗಳಾಗಿರುವುದರಿಂದ ಶಾಸನಶಾಸ್ತ್ರಜ್ಞರು, ಈ ಶಾಸನವು ಕನ್ನಡ ಶಾಸನವೆಂದು ಘೋಷಿಸಿದ್ದಾರೆ. ಹಲ್ಮಿಡಿ ಶಾಸನವೂ ಸಂಸ್ಕೃತ ಹಾಗೂ ಕನ್ನಡದ ಮಿಶ್ರಣವೇ ಆಗಿದೆ. ಈ ಶಾಸನದಲ್ಲಿ ಕನ್ನಡದ ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ಕೊಳ್ಳೆ ಎಂಬ ಶಬ್ದ ಬಳಸಲಾಗಿದೆ.
‘ನಾಲ್ಕು‘ ಕನ್ನಡದ ಸಂಖ್ಯಾವಾಚಕವಾಗಿದ್ದು, ಕನ್ನಡದಲ್ಲಿ ಮೊದಲ ಬಾರಿಗೆ ಸಂಖ್ಯಾವಾಚಕ ಬಳಸಿರುವ ಶಾಸನ ಇದಾಗಿದೆ ಎಂದೂ ಶಾಸನ ಮತ್ತು ಭಾಷಾ ತಜ್ಞ ಎಸ್.ಕಾರ್ತಿಕ್ ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.