ADVERTISEMENT

ತಪ್ಪು ಮಾಡೋ ವಿದ್ಯಾರ್ಥಿಗಳಿಂದಲೇ ಛಡಿ ಏಟು!

ಉತ್ತಮ ಕಲಿಕೆಗೆ ವಿಭಿನ್ನ ಮಾರ್ಗ ಕಂಡುಕೊಂಡ ಶಿಕ್ಷಕ

ರಿ.ರಾ.ರವಿಶಂಕರ್
Published 27 ಮಾರ್ಚ್ 2024, 6:18 IST
Last Updated 27 ಮಾರ್ಚ್ 2024, 6:18 IST
<div class="paragraphs"><p>ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋಪಾಲ್‌ ಅವರನ್ನು ದಂಡಿಸುತ್ತಿರುವ ವಿದ್ಯಾರ್ಥಿ</p></div>

ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋಪಾಲ್‌ ಅವರನ್ನು ದಂಡಿಸುತ್ತಿರುವ ವಿದ್ಯಾರ್ಥಿ

   

ರಿಪ್ಪನ್‌ಪೇಟೆ: ವಿದ್ಯಾರ್ಥಿಗಳನ್ನು ಶತಾಯಗತಾಯ ಕಲಿಕೆಯತ್ತ ಆಸಕ್ತಿ ತಾಳುವಂತೆ ಮಾಡುವ ಉದ್ದೇಶದಿಂದ ಸ್ವತಃ ತಾವೇ ತಪ್ಪು ಮಾಡಿದವರಿಂದ ಛಡಿ ಏಟು ತಿನ್ನುವ ಶಿಕ್ಷಕರೊಬ್ಬರು ತಮ್ಮ ವಿಭಿನ್ನ ಮಾರ್ಗದಿಂದ ಯಶಸ್ಸನ್ನೂ ಕಂಡಿದ್ದಾರೆ.

ಸಮೀಪದ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್‌.ಎಸ್‌. ಗೋಪಾಲ್ ಅವರೇ ಪಾಠ ಹೇಳಿದ ಬಳಿಕ ವಿದ್ಯಾರ್ಥಿಗಳಿಂದ ಉತ್ತರ ಪಡೆಯುತ್ತಾರೆ. ತಪ್ಪು ಉತ್ತರ ನೀಡಿದ ಶಿಷ್ಯರಿಂದಲೇ ಛಡಿಯಿಂದ ಏಟು ತಿನ್ನುವುದನ್ನು ರೂಢಿ ಮಾಡಿದ್ದಾರೆ.

ADVERTISEMENT

‘ಶಿಕ್ಷಕರಿಗೇ ಹೊಡೆಯಬೇಕಲ್ಲ’ ಎಂಬ ಕಾರಣದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತಾಳುತ್ತಿದ್ದಾರೆ. ಈ ಮಾದರಿ ಯಶಸ್ವಿಯಾಗಿದೆ ಎಂದು ಈಗ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಕರು ಮತ್ತು ಈ ಹಿಂದೆ ಇಲ್ಲಿ ಕಲಿತು ಹೋಗಿರುವ ಹಳೆ ವಿದ್ಯಾರ್ಥಿಗಳು ಹೇಳುತ್ತಾರೆ.

‘ಪ್ರತಿಫಲ ಸಿಗಬೇಕಾದರೆ ಹೊಸ ಪ್ರಯೋಗಗಳಿಗೆ ಅಣಿಯಾಗಲೇಬೇಕು. ಆ ನಿಟ್ಟಿನಲ್ಲಿ ನಾನು ತಪ್ಪು ಉತ್ತರ ನೀಡಿದ ವಿದ್ಯಾರ್ಥಿಯಿಂದಲೇ ಪೆಟ್ಟು ತಿನ್ನುವ ಪರಿಪಾಠ ಬೆಳೆಸಿಕೊಂಡೆ. ಶಿಕ್ಷಕರನ್ನು ದಂಡಿಸುವುದು ಹೇಗೆ ಎಂಬ ಅಳುಕಿನಿಂದಲಾದರೂ ಅವರು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿ, ಕ್ರಿಯಾಶೀಲರಾಗಲಿ ಎಂಬ ಭಾವನೆ ನನ್ನದು. ಈ ಪ್ರಯೋಗ ಯಶಸ್ವಿಯಾಗಿದೆ’ ಎಂದು ಶಿಕ್ಷಕ ಎಚ್‌.ಎಸ್‌. ಗೋಪಾಲ್‌ ತಿಳಿಸಿದರು.

‘ಶಿಕ್ಷಕ ಎಚ್‌.ಎಸ್‌. ಗೋಪಾಲ್‌ ಅವರು ವಿದ್ಯಾರ್ಥಿಗಳನ್ನು ಬುದ್ಧಿವಂತರಾಗಿಸಲು ನಡೆಸಿರುವ ವಿನೂತನ ಪ್ರಯೋಗ ಗಾಢ ಪರಿಣಾಮ ಬೀರಿದೆ. ಕಲಿಕಾ ಸಾಮಗ್ರಿಗಳ ಮೂಲಕ ಮಕ್ಕಳಿಗೆ ಪಠ್ಯವನ್ನು ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಡುತ್ತಿದ್ದಾರೆ. ಪಾಠದ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನೂ ಕಲಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ  ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ’ ಎಂದು ಪಾಲಕರು ತಿಳಿಸಿದ್ದಾರೆ.

‘ಶಿಕ್ಷಕ ಗೋಪಾಲ್‌ ಅನುಸರಿಸುತ್ತಿರುವ ವಿನೂತನ ಕಲಿಕಾ ಮಾದರಿಯ ಕಾರಣಕ್ಕೆ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ ಇನ್ನೂ ಮುಂದುವರಿದಿದೆ. ಅವರ ಪ್ರೇರಣೆಯಿಂದಲೇ ಶಾಲೆಯ ಹಳೆಯ ವಿದ್ಯಾರ್ಥಿನಿ ಹೊಳೆಕೇವಿ ಇಂಪಾ ಅಮೃತ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಬಿಡುವಿನ ವೇಳೆಯಲ್ಲಿ ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದಾಳೆ. ಜೂನ್‌ನಲ್ಲಿ ಶಿಕ್ಷಕ ಗೋಪಾಲ್‌ ನಿವೃತ್ತಿಯಾಗಲಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುವ ಇಂತಹ ಶಿಕ್ಷಕರನ್ನು ಸರ್ಕಾರ, ಸಂಘ– ಸಂಸ್ಥೆಗಳು ಗುರುತಿಸಿ ಗೌರವಿಸಿದಲ್ಲಿ ಅವರ ಸೇವಾಕಾರ್ಯಕ್ಕೆ ಸಾರ್ಥಕತೆ ಸಿಗಲಿದೆ’ ಎಂದು ಪಾಲಕರು ಹೇಳಿದ್ದಾರೆ.

ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಂದೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯಲ್ಲಿ ನಿರತ ಮಕ್ಕಳು
ಗೋಪಾಲ್

ಗ್ರಾಮದ ಶಾಲೆ ಊರಿನ ಆಸ್ತಿ. ಊರಿನ ಹಿರಿಯರ ಪರಿಶ್ರಮದಿಂದಾಗಿ ಸೇವಾ ಅವಧಿ ಪೂರ್ಣಗೊಳಿಸುತ್ತಿದ್ದೇನೆ. ಇಲಾಖೆ ಹಾಗೂ ಸ್ಥಳೀಯರ ಸಹಕಾರಕ್ಕೆ ಚಿರ ಋಣಿ

– ಎಚ್‌.ಎಸ್‌. ಗೋಪಾಲ್‌ ಶಿಕ್ಷಕ

ಅಮೃತ ಮಹೋತ್ಸವದ ಅಂಚಿನಲ್ಲಿರುವ ಶಾಲೆ ಊರಿನ ಅನೇಕರಿಗೆ ಪ್ರಾಥಮಿಕ ಶಿಕ್ಷಣ ನೀಡಿದೆ. ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುವ ನಿರ್ಧಾರ ಮಾಡಬೇಕು.

-ಪ್ರೇಮಾ ಗೃಹಿಣಿ ಹೊಳೆಕೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.