ADVERTISEMENT

ಭದ್ರಾವತಿ | ಹೆಚ್ಚಿದ ಬಿಸಿಲ ತಾಪ; ಜನ ತಲ್ಲಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 5:19 IST
Last Updated 18 ಫೆಬ್ರುವರಿ 2024, 5:19 IST
ಬಿ.ಹೆಚ್.ರಸ್ತೆಯ ಮಾರುಕಟ್ಟೆಯಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ದೊಡ್ಡ ಛತ್ರಿಗಳನ್ನು ಹಾಕಿರುವುದು 
ಬಿ.ಹೆಚ್.ರಸ್ತೆಯ ಮಾರುಕಟ್ಟೆಯಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ದೊಡ್ಡ ಛತ್ರಿಗಳನ್ನು ಹಾಕಿರುವುದು    

ಭದ್ರಾವತಿ: ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ನಗರದಲ್ಲಿ ಕಳೆದೊಂದು ವರ್ಷದಲ್ಲಿ ಅಧಿಕೃತವಾಗಿ 204 ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಅನಧಿಕೃತವಾಗಿ ಕಣ್ಮರೆಯಾಗಿರುವ ಮರಗಳಿಗೆ ಲೆಕ್ಕವಿಲ್ಲ.

ಬಿ.ಎಚ್. ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ತರೀಕೆರೆ ರಸ್ತೆ, ಸಿ.ಎನ್.ರಸ್ತೆ, ಹುತ್ತಾ ಕಾಲೊನಿ ರಸ್ತೆಗಳಲ್ಲಿ ಹಲವು ವರ್ಷಗಳಿಂದ ತಲೆ ಎತ್ತಿದ್ದ ಬೃಹದಾಕಾರದ ಮರಗಳನ್ನು ರಸ್ತೆ ವಿಸ್ತರಣೆ ಕಾಮಗಾರಿಗೋಸ್ಕರ ಧರೆಗುರುಳಿಸಲಾಗಿದೆ. ಮರಗಳ ಕಡಿತಲೆಯಿಂದಾಗಿ ನಗರದಲ್ಲಿ ಬಿಸಿಲ ತಾಪ ಹೆಚ್ಚಾಗಿದೆ.

ವ್ಯಾಪಾರಕ್ಕಾಗಿ ಮರಗಳ ನೆರಳನ್ನೇ ಆಶ್ರಯಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳು ಈಗ ದೊಡ್ಡ ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಪ್ರಯಾಣಿಕರು ಬಿಸಿಲಿನ ತಾಪ ತಡೆಯಲಾಗದೆ ಬಸ್ ಬರುವವರೆಗೂ ಅಂಗಡಿ ಮುಂಗಟ್ಟುಗಳೊಳಗೆ ಕುಳಿತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೆ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು ನೆರಳು ಹುಡುಕಲು ಅಲೆದಾಡುವ ಪರಿಸ್ಥಿತಿ ಇದೆ. ಪಶು– ಪಕ್ಷಿಗಳು ನೀರು ಹಾಗೂ ನೆರಳಿಗಾಗಿ ಹಾತೊರೆಯುವಂತಾಗಿದೆ.

ADVERTISEMENT

ವಿಐಎಸ್ಎಲ್ ಕಾರ್ಖಾನೆಯ ಸುತ್ತಮುತ್ತಲ ಪ್ರದೇಶಗಳು ಬಿಟ್ಟರೆ ನಗರದ ಬೇರೆಲ್ಲೂ ಹಸಿರು ಕಾಣುತ್ತಿಲ್ಲ. ಮರಗಳಿಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬೆಳೆ ಇಲ್ಲ, ಬೆಳೆಗಳ ಅಭಾವದಿಂದ ಬೆಲೆಗಳಲ್ಲಿ ಏರಿಕೆ ಖಂಡಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ದೂರಿದರು.

ಎರಡು– ಮೂರು ದಿನಗಳಿಂದ ನಗರದಲ್ಲಿ ಸರಾಸರಿ 37ರಿಂದ 38 ಡಿಗ್ರಿವರೆಗೆ ಉಷ್ಣಾಂಶ ಏರಿಕೆಯಾಗಿದೆ. ಮರಗಳ ಅಭಾವದಿಂದ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಂಭವವಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚರ್ಮರೋಗಗಳು ಕಾಣಿಸಿಕೊಳ್ಳುವ ಅಪಾಯ ಇದೆ. ತಾಪಮಾನವನ್ನು ತಗ್ಗಿಸಲು ಮತ್ತು ಗಾಳಿಯ ಗುಣಮಟ್ಟ ಸುಧಾರಿಸುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. 

‘ದೊಡ್ಡ ಮರಗಳು ಮಾಲಿನ್ಯಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ. ಎಲೆಗಳು ಮತ್ತು ತೊಗಟೆ ದೂಳು, ಕೊಳಕು ಅಥವಾ ಹೊಗೆಯಂತಹ ಸೂಕ್ಷ್ಮ ಕಣಗಳನ್ನು ಶುದ್ಧೀಕರಿಸಲು ನೆರವಾಗುತ್ತವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ್ ತಿಳಿಸಿದರು.

ವರ್ಷದಲ್ಲಿ 204 ಮರಗಳು ಬಲಿ..
‘ಭದ್ರಾವತಿಯಲ್ಲಿ ಕಳೆದೊಂದು ವರ್ಷದಲ್ಲಿ 204 ಮರಗಳನ್ನು ಕಟಾವು ಮಾಡಲಾಗಿದೆ. ಶಾಲೆ– ಕಾಲೇಜು ಕಚೇರಿಗಳ ಬಳಿ ಅಡ್ಡಲಾಗಿರುವ 114 ಮರಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಧರೆಗುರುಳಿಸಲಾಗಿದೆ. ಇನ್ನು ಉಳಿದ 90 ಮರಗಳನ್ನು ರಸ್ತೆ ವಿಸ್ತರಣೆ ವೇಳೆ ಕಟಾವು ಮಾಡಲಾಗಿದೆ. ಬಿಎಚ್ ರಸ್ತೆಯಲ್ಲಿನ ದೊಡ್ಡದಾದ ಆಲ ಅರಳಿ ಮರಗಳನ್ನು ಬೇರು ಸಮೇತ ಕಿತ್ತು ನಗರದ ಅಶ್ವತ್ಥ ನಗರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅವುಗಳು ಪುನಃ ಚಿಗುರಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಆಯಾ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಆರ್‌ಎಫ್‌ಒ ದಿನೇಶ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ರಸ್ತೆಯಲ್ಲಿ ವಿದ್ಯುತ್ ತಂತಿ ಜೋಡಣೆ ಹಾಗೂ ರಸ್ತೆ ವಿಸ್ತರಣೆ ನೆಪದಲ್ಲಿ ದೊಡ್ಡ ದೊಡ್ಡ ಮರಗಳನ್ನೆಲ್ಲ ನೆಲಸಮ ಮಾಡಲಾಗಿದೆ. ಮರಗಳಿದ್ದ ಸ್ಥಳಗಳಲ್ಲಿ ಈಗ ಕಾರುಗಳ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ.
ಅಂತು, ಶಿಕ್ಷಕ
ಬಸ್ ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗದಷ್ಟು ಬಿಸಿಲಿನ ತಾಪವಿದೆ. ನಿಲ್ದಾಣ ಕಟ್ಟುವ ಬದಲು ಆ ಜಾಗದಲ್ಲಿ ಒಂದು ಮರವಿದ್ದಿದ್ದರೆ ನೆರಳಿನ ಜೊತೆ ತಂಪಾದ ಗಾಳಿಯೂ ಸಿಗುತ್ತಿತ್ತು.
ಆಶಾ, ನಗರದ ಕಾಲೇಜೊಂದರ ವಿದ್ಯಾರ್ಥಿನಿ, ಕೂಡ್ಲಿಗೆರೆ
ನಗರದ ತಾಲ್ಲೂಕು ಕಚೇರಿ ರಸ್ತೆಯಲ್ಲಿದ್ದ ಮರಗಳನ್ನು ಕಡಿದು ಆ ಜಾಗದಲ್ಲಿ ಐಷಾರಾಮಿ ಕಾರುಗಳನ್ನು ನಿಲುಗಡೆ ಮಾಡಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.