ADVERTISEMENT

VIDEO | ಶಿವಮೊಗ್ಗ: ಕಾನ್‌ಸ್ಟೆಬಲ್ ಮೇಲೆ ಕಾರು ಹಾಯಿಸಲು ಮುಂದಾದ ಚಾಲಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:41 IST
Last Updated 24 ಅಕ್ಟೋಬರ್ 2024, 14:41 IST
<div class="paragraphs"><p> ಕಾನ್‌ಸ್ಟೆಬಲ್ ಮೇಲೆ ಕಾರು ಹಾಯಿಸಲು ಮುಂದಾದ ಚಾಲಕ</p></div>

ಕಾನ್‌ಸ್ಟೆಬಲ್ ಮೇಲೆ ಕಾರು ಹಾಯಿಸಲು ಮುಂದಾದ ಚಾಲಕ

   

– ಪ್ರಜಾವಾಣಿ ವಿಡಿಯೊ

ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕ ಕಾರು ಹಾಯಿಸಲು ಯತ್ನಿಸಿದ್ದಾನೆ. ಬಾನೆಟ್‌ ಮೇಲೆ ಬಿದ್ದ ಅವರನ್ನು 100 ಮೀಟರ್‌ನಷ್ಟು ದೂರ ಎಳೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ.

ADVERTISEMENT

ಶಿವಮೊಗ್ಗದ ಪೂರ್ವ ಸಂಚಾರ ವಿಭಾಗದ ಕಾನ್‌ಸ್ಟೆಬಲ್ ಪ್ರಭುರಾಜ್ ಸಹ್ಯಾದ್ರಿ ಕಾಲೇಜು ಬಳಿ ಕರ್ತವ್ಯ ನಿರತರಾಗಿದ್ದಾರೆ. ಈ ವೇಳೆ ಎಂಆರ್‌ಎಸ್ ಸರ್ಕಲ್ ಕಡೆಯಿಂದ ಹೊಳೆ ಬಸ್ ನಿಲ್ದಾಣದತ್ತ ಹೊರಟಿದ್ದ ಕಿಯಾ ಸಾನೆಟ್‌ ಕಾರಿನ ಚಾಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಆಗ ಕಾರಿಗೆ ಅಡ್ಡ ನಿಂತ ಅವರು, ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ.

ಕಾರು ನಿಲ್ಲಿಸದೇ ಪ್ರಭುರಾಜ್ ಅವರೊಂದಿಗೆ ವಾದ ಮಾಡುತ್ತಲೇ ಮುಂದೆ ಚಲಾಯಿಸುತ್ತಾ ಅವರನ್ನು ದಬ್ಬಿಕೊಂಡು ಹೋಗಿದ್ದಾನೆ. ಹಿಂದಕ್ಕೆ ಸರಿಯುತ್ತಾ ಹೋದ ಕಾನ್‌ಸ್ಟೆಬಲ್, ಕಾರಿನ ವೇಗ ಹೆಚ್ಚುತ್ತಲೇ ಅದರ ಬಾನೆಟ್ ಮೇಲೆ ಬಿದ್ದಿದ್ದಾರೆ. ಆಗಲೂ ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿದ್ದಾನೆ. ಕಾನ್‌ಸ್ಟೆಬಲ್ ಕೆಳಗೆ ಇಳಿದು ಪಕ್ಕಕ್ಕೆ ಬರುತ್ತಿದ್ದಂತೆಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಗೊತ್ತಾಗಿದೆ.

ಘಟನೆಯ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

‘ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಹೊರಟು ಹೋಗಿದ್ದಾನೆ. ಅಲ್ಲಿನ ಸಿಸಿ ಟಿವಿ ಕ್ಯಾಮೆರಾದ ದೃಶ್ಯ ಪರಿಶೀಲನೆ ನಡೆಸಿದ್ದೇವೆ. ಕಾರು ಚಾಲಕ ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ, ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಎಂದು ಗೊತ್ತಾಗಿದೆ. ಆರೋಪಿ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.