ತುಮರಿ: ಮಲೆನಾಡಿನ ಹಳ್ಳಿಗಳಲ್ಲಿ ಮಾರಿ ದೇವಿಯನ್ನು ಪೂಜಿಸುವ, ಅಪ್ಪಟ ಗ್ರಾಮೀಣ ಸೊಗಡಿನ ‘ಗಡಿ ಮಾರಿ’ ಆಚರಣೆ ಪ್ರಚಲಿತದಲ್ಲಿದೆ.
ಊರಿನಲ್ಲಿ ರೋಗ–ರುಜಿನದಂತಹ ಸಂಕಷ್ಟ ಬಂದಾಗ ಒಂದು ಮರದ ಮೂರ್ತಿ ತಯಾರಿಸಿ ಅದನ್ನು ಅಲಂಕರಿಸಿ ಪೂಜಿಸಿ, ಊರ ಗಡಿ ದಾಟಿಸಿ ಬಂದರೆ ರೋಗಗಳು ದೂರಾಗಿ, ಉತ್ತಮ ಬೆಳೆ ಹಾಗೂ ಗ್ರಾಮಕ್ಕೆ ಬಂದಿರುವ ಸಂಕಷ್ಟಗಳೆಲ್ಲ ಬಗೆಹರಿಯುತ್ತವೆ ಎಂಬ ನಂಬಿಕೆಯ ಭಾಗವೇ ಈ ‘ಗಡಿ ಮಾರಿ’ ಆಚರಣೆ.
ಗುಡಿ, ಗೋಪುರಗಳಿಲ್ಲದೆ, ನಿತ್ಯ ಪೂಜೆ, ತೀರ್ಥ, ಪ್ರಸಾದ ಇಲ್ಲದೆಯೇ ಗ್ರಾಮಕ್ಕೆ ತಗಲಿರುವ ರೋಗ-ರುಜಿನ, ಅನಿಷ್ಟಗಳನ್ನು ಹೋಗಲಾಡಿಸಲು ಗ್ರಾಮೀಣರು ಈ ಸಂಪ್ರದಾಯದಲ್ಲಿ ಋತುಮಾನಕ್ಕೆ ಅನುಗುಣವಾಗಿ ತೊಡಗುತ್ತಾರೆ. ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ಉತ್ಸವ, ಗ್ರಾಮದಿಂದ ಗ್ರಾಮಕ್ಕೆ ಆಚರಣಾ ಕ್ರಮ ಭಿನ್ನ. ಗ್ರಾಮಕ್ಕೆ ಅಂಟಿದ ರೋಗಗಳೆಲ್ಲ ತೊಲಗಲಿ ಎಂದು ‘ಗಡಿ ಮಾರಿ’ ದೇವಿಯನ್ನು ಪೂಜಿಸಿ, ಅದನ್ನು ಗ್ರಾಮದಿಂದ ಗ್ರಾಮಕ್ಕೆ ಅಟ್ಟುವುದು ವಿಶಿಷ್ಟ ಆಚರಣೆಯ ಭಾಗ.
ದೇವಿಯನ್ನು ಹೊರಕ್ಕೆ ಕಳುಹಿಸುವ ಉತ್ಸವವನ್ನು ಯಾವಾಗ ಆಚರಿಸಲಾಗುತ್ತದೆ ಎಂಬುದನ್ನು ಗ್ರಾಮದಲ್ಲಿ ಮೊದಲೇ ತಿಳಿಸಲಾಗುತ್ತದೆ. ಅಂದು ಬೆಳಿಗ್ಗೆಯಿಂದಲೇ ತಯಾರಿ ನಡೆಯುತ್ತದೆ. ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಮಾಡುವಂತಿಲ್ಲ. ಗ್ರಾಮದ ಹಿರಿಯರ ಸಲಹೆಯಂತೆ ಚಿಕ್ಕದಾದ ರಥ ನಿರ್ಮಾಣ ಮಾಡಿ, ಅದಕ್ಕೆ ಚಕ್ರ ಜೋಡಿಸುವುದು ಅಥವಾ ಕೆಲವು ಭಾಗಗಳಲ್ಲಿ ಎರಡು ಕೋಲುಗಳಿಗೆ ಮಂಟಪ ಕಟ್ಟಿ ಮರದ ಹಿಡಿಕೆ ಅಳವಡಿಸಿ ಅದರ ಮೇಲೆ ‘ಗಡಿಮಾರೆಮ್ಮ’ನನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.
‘ಬಂತು, ಬಂತು, ಮಾರಮ್ಮ ಬಂತು. ಹೋಗಲಿ ಹೋಗಲಿ ಸಾಗರ ಮಾರಿ, ಉಪದ್ರವ ಮಾರಿ’ ಎಂದು ಕೂಗುತ್ತಾ ಮೆರವಣಿಗೆ ನಡೆಸಿ, ಊರ ಗಡಿಯಾಚೆ ಅದನ್ನು ಬಿಡಲಾಗುತ್ತದೆ. ಬಳಿಕ ಇನ್ನೊಂದು ಊರಿನವರು ಅದನ್ನು ಮತ್ತೊಂದು ಊರಿನ ಗಡಿ ದಾಟಿಸುತ್ತಾರೆ. ಹೀಗೆ ಆಚರಣೆ ನಡೆಯುತ್ತಲೇ ಇರುತ್ತದೆ.
ಗ್ರಾಮದ ಎಲ್ಲ ಮನೆಗಳಿಂದ ಪೊರಕೆ, ಮೊರ, ಚಿಕ್ಕ-ಚಿಕ್ಕ ಮಡಿಕೆಗಳು, ಹಳೆಯದಾದ ಬಟ್ಟೆಗಳು, ಜೊತೆಗೆ ನಿರುಪಯುಕ್ತ ವಸ್ತುಗಳು, ಹಸಿರು ಬಳೆಗಳನ್ನು ಸಂಗ್ರಹಿಸಿ ಮಾರೆಮ್ಮಳ ಜೊತೆ ‘ಗಡಿ ಮಾರಿ-ತೊಲಗು ಮಾರಿ’ ಎನ್ನುತ್ತಾ ಮೆರವಣಿಗೆ ಮಾಡಿ, ಪೂಜೆ ಸಲ್ಲಿಸುತ್ತಾರೆ.
ಪೂಜೆ ವೇಳೆ ಕೆಲವು ಭಾಗಗಳಲ್ಲಿ ಹೋಳಿಗೆಯಂತಹ ಸಿಹಿ ತಿನಿಸುಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿದರೆ, ಇನ್ನು ಕೆಲವು ಭಾಗಗಳಲ್ಲಿ ಕುರಿ, ಕೋಳಿ ಬಲಿ ಕೊಡುತ್ತಾರೆ. ಗ್ರಾಮಕ್ಕೆ ಅಂಟಿಕೊಂಡಿದ್ದ ಶಾಪ, ರೋಗಗಳು ಮಾರಿಯ ಜೊತೆಗೆ ಹೋದವು ಎಂದು ನಿಟ್ಟುಸಿರು ಬಿಡುತ್ತಾ ತಮ್ಮ ಗ್ರಾಮಕ್ಕೆ ಮರಳಿ ಬರುತ್ತಾರೆ.
‘ಮಲೆನಾಡಿನ ಭಾಗದಲ್ಲಿ ದೈವಗಳ ನಂಬಿಕೆಯಂತೆ ‘ಗಡಿ ಮಾರಿ’ ರೂಢಿಯಲ್ಲಿದೆ. ಗ್ರಾಮಸ್ಥರೆಲ್ಲ ಒಟ್ಟಿಗೆ ಸೇರಿ ಇಂತಹ ಆಚರಣೆಗಳನ್ನು ಮಾಡುವುದರಿಂದ ಬಹುತ್ವವನ್ನು ಗಟ್ಟಿಗೊಳಿಸುತ್ತದೆ. ಗಡಿಮಾರಿಗೆ ಪೂಜೆ ನಡೆಯದಿದ್ದಾಗ ರೈತರಿಗೆ ಸಂಕಷ್ಟ ಬರಲಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ರಸ್ತೆ ಬದಿ ಹಿಂದಿನ ಗ್ರಾಮದವರು ಇಟ್ಟ ‘ಮಾರಿ’ಗೆ ಹೊಸ ಸೀರೆ ಉಡಿಸಿ ಸಂಪ್ರದಾಯಬದ್ಧವಾಗಿ ಪೂಜೆ ಮಾಡಿ, ಊರಿನ ಗಡಿಗೆ ಕಳುಹಿಸಿಕೊಡುತ್ತಾರೆ’ ಎನ್ನುತ್ತಾರೆ ಮಣಕುಂದೂರು ಗ್ರಾಮದ ಪದ್ಮರಾಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.